ನವ ದೆಹಲಿ: ಹಿಮಾಚಲ ಪ್ರದೇಶದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಇಲ್ಲವೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅತ್ಯಂತ ಕತ್ತುಕತ್ತಿನ ಹಣಾಹಣಿ ನಡೆಯುವ ಪೂರ್ವ ಸೂಚನೆ ಇರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ಅವರು ಕಣ ಪ್ರವೇಶ ಮಾಡಿದ್ದಾರೆ. ಬಿಜೆಪಿ ಸರಕಾರ ರಚನೆಗಾಗಿ ಯಾವುದೇ ತಂತ್ರವನ್ನು ಹೆಣೆಯುವ ಸಾಧ್ಯತೆ ಇರುವುದರಿಂದ ಆಪರೇಷನ್ ಕಮಲದ ಭಯದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳನ್ನು ರಾಜಸ್ಥಾನಕ್ಕೆ ಶಿಫ್ಟ್ ಮಾಡಲು ಸೂಚನೆ ನೀಡಲಾಗಿದೆ.
೬೮ ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಮತ ಎಣಿಕೆಯ ಆರಂಭದಿಂದಲೇ ಗೋಚರಿಸಿದೆ. ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಯಾವುದೇ ಪಕ್ಷಕ್ಕೆ ಬಹುಮತ ಬರುವುದು ಕಷ್ಟ ಎಂದು ಹೇಳಿವೆ. ಎರಡೂ ಪಕ್ಷಗಳು ೩೨ರಿಂದ ೪೦ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇರುವುದನ್ನು ಬೆಟ್ಟು ಮಾಡಿದೆ.
ಅತಂತ್ರ ಸ್ಥಿತಿ ನಿರ್ಮಾಣವಾದರೆ ಬಿಜೆಪಿ ಪಕ್ಷೇತರರನ್ನು ಮಾತ್ರವಲ್ಲ, ಕಾಂಗ್ರೆಸ್ ಶಾಸಕರನ್ನು ಕೂಡಾ ಸೆಳೆಯುವ ಸಾಧ್ಯತೆ ಇರುವುದರಿಂದ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಶಿಫ್ಟಿಂಗ್ ತಂತ್ರಕ್ಕೆ ಮೊರೆ ಹೋಗಲಿದೆ.
ಹೀಗಾಗಿ ಚುನಾವಣೆಯ ಫಲಿತಾಂಶ ಬರುತ್ತಲೇ ಗೆದ್ದ ಶಾಸಕರನ್ನು ರಾಜಸ್ಥಾನಕ್ಕೆ ಶಿಫ್ಟ್ ಮಾಡಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೂಚನೆ ನೀಡಿದ್ದಾರೆ. ಟ್ರೆಂಡ್ ನೋಡುತ್ತಲೇ ಫಲಿತಾಂಶ ಬರುವ ಮುನ್ನವೇ ಶಿಫ್ಟಿಂಗ್‌ಗೆ ತಿಳಿಸಲಾಗಿದೆ.
ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಹಿರಿಯ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಈ ಚಟುವಟಿಕೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
ಶಾಸಕರನ್ನು ಬಸ್‌ನ ಮೂಲಕ ರಾಜಸ್ಥಾನಕ್ಕೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ. ಇತ್ತ ಪ್ರಿಯಾಂಕಾ ಗಾಂಧಿ ಅವರು ಕೂಡಾ ಮಧ್ಯಾಹ್ನದ ಹೊತ್ತಿಗೆ ಶಿಮ್ಲಾ ತಲುಪುವ ನಿರೀಕ್ಷೆ ಇದೆ.
ಬಿಜೆಪಿಯಿಂದಲೂ ಪ್ಲ್ಯಾನ್
ಈ ನಡುವೆ, ಮ್ಯಾಜಿಕ್ ಸಂಖ್ಯೆಗೆ ಬೆರಳೆಣಿಕೆಯ ಸೀಟುಗಳು ಕಡಿಮೆ ಬಂದರೆ ಏನು ಮಾಡಬೇಕು ಎಂಬ ಬಗ್ಗೆ ತೀವ್ರ ಚರ್ಚೆಯಲ್ಲಿದೆ. ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಹರೀಶ್ ಕಶ್ಯಪ್ ಅವರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಚರ್ಚೆಗಾಗಿ ದಿಲ್ಲಿಗೆ ಧಾವಿಸಿದ್ದಾರೆ. ಮುಖ್ಯವಾಗಿ ಚುನಾವಣೆಯಲ್ಲಿ ಗೆಲ್ಲುವ ಪಕ್ಷೇತರ ಶಾಸಕರ ಮೇಲೆ ಬಿಜೆಪಿ ನಿಗಾ ಇಡಲಿದೆ. ಇದೇ ವೇಳೆ ಅದು ಕಾಂಗ್ರೆಸ್‌ನಿಂದ ಗೆಲ್ಲುವ ಶಾಸಕರನ್ನೂ ಸೆಳೆಯಬಹುದು ಎಂಬ ಆತಂಕ ಕೈ ಪಾಳಯದಲ್ಲಿದೆ.