ನವ ದೆಹಲಿ: ದೇವಭೂಮಿ ಎಂದೇ ಹೆಸರಾದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯುವ ಭರವಸೆ ಮೂಡಿಸಿದೆ. ೬೮ ಸ್ಥಾನಗಳ ಪೈಕಿ ಕಾಂಗ್ರೆಸ್ ೪೦ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಕಂಡುಬಂದಿದ್ದು, ಬಿಜೆಪಿ ೨೫ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಳೆದ ಬಾರಿ ಕೇವಲ ೨೧ ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಇಷ್ಟು ದೊಡ್ಡ ಸಾಧನೆ ಮಾಡಲು ಹಲವು ಕಾರಣಗಳಿವೆ. ಅವುಗಳ ಪೈಕಿ ಅತ್ಯಂತ ಪ್ರಮುಖವಾದುದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಪರಿಶ್ರಮ ಎಂದು ಕೈ ನಾಯಕರು ಸ್ಮರಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಹಿಮಾಚಲದಲ್ಲಿ ಅತ್ಯಂತ ಪರಿಶ್ರಮ ವಹಿಸಿ ಕೆಲಸ ಮಾಡಿದ್ದರ ಫಲವಿದು ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು ಹೇಳಿದ್ದಾರೆ. ಮುನ್ನಡೆ ಪ್ರವೃತ್ತಿಯಲ್ಲಿ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ದಾಟಿದ ಕೂಡಲೇ ರಾಜೀವ್ ಶುಕ್ಲಾ ಅವರು ಈ ಹೇಳಿಕೆ ನೀಡಿದ್ದಾರೆ. ನಿಜವೆಂದರೆ, ಹಿಮಾಚಲದಲ್ಲಿ ಪಕ್ಷವನ್ನು ಮುನ್ನಡೆಸಿದವರಲ್ಲಿ ರಾಜೀವ್ ಶುಕ್ಲಾ ಅವರು ಕೂಡಾ ಒಬ್ಬರು.
ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಾಜೀವ್ ಶುಕ್ಲಾ ಅವರು, ʻʻಹಿಮಾಚಲ ಪ್ರದೇಶದಲ್ಲಿ ಇವತ್ತು ಕಾಂಗ್ರೆಸ್ ಗೆದ್ದರೆ ನಾವು ಜನರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಪ್ರಿಯಾಂಕಾ ಗಾಂಧಿ ಅವರು ತುಂಬಾ ಪರಿಶ್ರಮ ಪಟ್ಟು ಕೆಲಸ ಮಾಡಿದರು ಮತ್ತು ಎಲ್ಲಾ ಕಡೆ ಪ್ರಚಾರ ನಡೆಸಿದರುʼʼ ಎಂದು ಹೇಳಿದ್ದಾರೆ.
ಕಷ್ಟ ಕಾಲದಲ್ಲಿ ಕೈ ಹಿಡಿದರು
ನಿಜವೆಂದರೆ, ಕಳೆದ ಮೂರ್ನಾಲ್ಕು ದಶಕಗಳಿಂದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಧಾನ ಸೇನಾನಿಯಾಗಿ ಮಿಂಚಿದವರು ವೀರಭದ್ರ ಸಿಂಗ್. ಅವರಿದ್ದಾರೆ ಎಂದರೆ ಹೈಕಮಾಂಡ್ ಕೂಡಾ ಹೆಚ್ಚು ತಲೆ ಬಿಸಿ ಮಾಡಬೇಕಾಗಿರಲಿಲ್ಲ. ಆದರೆ, ವರ್ಷದ ಹಿಂದೆ ವೀರಭದ್ರ ಸಿಂಗ್ ಅವರು ಮೃತಪಟ್ಟಾಗ ಅಲ್ಲೊಂದು ಅನಾಥ ಭಾವ ಸೃಷ್ಟಿಯಾಯಿತು. ಅವರ ಪುತ್ರಿಯಾಗಿರುವ ಪ್ರತಿಭಾ ಸಿಂಗ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದರೂ ಅವರ ಮೇಲೆ ಪೂರ್ತಿ ಭಾರವನ್ನು ಹಾಕುವಂತಿರಲಿಲ್ಲ.
ಈ ನಡುವೆಯೇ ವಿಧಾನಸಭಾ ಚುನಾವಣೆಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಕಾಂಗ್ರೆಸ್‌ನ್ನು ಇಲ್ಲಿ ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ರಾಹುಲ್ ಗಾಂಧಿ ಅವರು ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಂತಿರಲಿಲ್ಲ. ಅಂಥ ಕಷ್ಟ ಕಾಲದಲ್ಲಿ ಹಿಮಾಚಲದತ್ತ ಹೊರಟು ನಿಂತಿದ್ದರು ಪ್ರಿಯಾಂಕಾ ವಾದ್ರಾ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ಅವರಿಗೆ ಚುನಾವಣೆ ಗೆಲ್ಲಿಸಿದ ಅನುಭವ ಕಡಿಮೆ. ಕೆಲವೇ ರ‍್ಯಾಲಿಗಳಿಗೆ ಸೀಮಿತವಾಗುತ್ತಿದ್ದ ಅವರು ಉತ್ತರ ಪ್ರದೇಶದ ಕೆಲವು ಭಾಗಗಳ ಉಸ್ತುವಾರಿಯನ್ನು ವಹಿಸಿದ್ದರು. ಆದರೆ ಅಲ್ಲೆಲ್ಲ ತೀವ್ರವಾದ ಹೊಡೆತವನ್ನೇ ಅನುಭವಿಸಿದ್ದರು.
ಅಷ್ಟಾದರೂ ಅತ್ಯಂತ ಧೈರ್ಯದಿಂದ ಚುನಾವಣೆಯ ಸಾರಥ್ಯವನ್ನು ವಹಿಸಿದರು. ಅವರ ಪ್ರಯತ್ನದ ಫಲವೇ ಹಿಮಾಚಲದ ಗೆಲುವು ಎನ್ನುತ್ತಿದೆ ಕಾಂಗ್ರೆಸ್.
ಹಾಗಿದ್ದರೆ ಪ್ರಿಯಾಂಕಾ ವಾದ್ರಾ ಮಾಡಿದ ಕಮಾಲ್ ಏನು?
ಪ್ರಧಾನಿ ಮೋದಿ ಅವರ ವರ್ಚಸ್ಸು, ಮುಖ್ಯಮಂತ್ರಿಯಾಗಿದ್ದ ಜೈರಾಮ್ ಠಾಕೂರ್ ಅವರ ಶಕ್ತಿಯ ಮುಂದೆ ನಿಸ್ತೇಜವಾಗಿದ್ದ ಕಾಂಗ್ರೆಸ್‌ನ್ನು ಕೈ ಹಿಡಿದು ಎತ್ತಿದ್ದು ಪ್ರಿಯಾಂಕಾ ಅವರ ನಿಜವಾದ ಮ್ಯಾನೇಜ್‌ಮೆಂಟ್ ಶಕ್ತಿ ಎನ್ನುತ್ತದೆ ಕಾಂಗ್ರೆಸ್. ಪ್ರಿಯಾಂಕಾ ವಾದ್ರಾ ಅವರು ರಾಜ್ಯಾದ್ಯಂತ ಹಲವಾರು ರ‍್ಯಾಲಿಗಳನ್ನು ನಡೆಸಿದರು, ರೋಡ್ ಶೋಗಳನ್ನು ನಡೆಸಿದರು. ಆದರೆ, ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರು ಮಾಡುವ ಈ ಚಟುವಟಿಕೆಗಳಿಗೆ ತನ್ನನ್ನು ಸೀಮಿತಗೊಳಿಸಲಿಲ್ಲ. ಬದಲಾಗಿ ಹೇಗೆ ಬಿಜೆಪಿ ಚುನಾವಣೆಯನ್ನು ಒಂದು ಮೈಕ್ರೋಮ್ಯಾನೇಜ್ಮೆಂಟ್ ರೂಪದಲ್ಲಿ ಮಾಡುತ್ತದೋ ಅದೇ ಸ್ಟೈಲ್‌ನಲ್ಲಿ ನಡೆಸಿದರು.
ಅದಕ್ಕಾಗಿ ಅವರು ಆಯ್ಕೆ ಮಾಡಿದ್ದು ರಾಜೀವ್ ಶುಕ್ಲಾ ಅವರನ್ನು. ಅತ್ಯಂತ ನಿಷ್ಠಾವಂತ ಕೆಲಸಗಾರ ರಾಜೀವ್ ಶುಕ್ಲಾ ಅವರನ್ನು ಹಿಮಾಚಲ ಪ್ರದೇಶದ ಉಸ್ತುವಾರಿಯಾಗಿ ನೇಮಕ ಮಾಡಿದರು. ಪಕ್ಷದ ಎಲ್ಲ ಚಟುವಟಿಕೆಗಳ ಮೇಲೆ ಗಮನ ಹರಿಸುವಂತೆ ಸೂಚಿಸಿದರು. ಅತ್ಯಂತ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಗಮನಹರಿಸಿದರು. ಕಾಂಗ್ರೆಸ್‌ನಲ್ಲಿ ಅತ್ಯಂತ ಅಪರೂಪವಾ ಮೈಕ್ರೋ ಮ್ಯಾನೇಜ್‌ಮೆಂಟ್ ಎನ್ನುವ ಪದವನ್ನು ಅವರು ಪರಿಚಯಿಸಿದರು.
ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ತುಂಬಾ ಜಾಣತನ ಮೆರೆದರು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರನ್ನು ನಿರ್ದಾಕ್ಷಿಣ್ಯವಾಗಿ ಹೊರಗಟ್ಟಿದರು. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಂದ್ರ ಬಾಘೇಲ್ ಅವರ ನೆರವನ್ನೂ ಪಡೆದರು. ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. 26 ಮಂದಿ ರಾಜ್ಯ ಮಟ್ಟದ ನಾಯಕರನ್ನು ಬಿಜೆಪಿ ಅನಾಮತ್ತಾಗಿ ಎತ್ತಿಕೊಂಡು ಹೋದರೂ ಕೂಡಾ ಜಗ್ಗದೆ ಬಗ್ಗದೆ ಪಕ್ಷವನ್ನು ಮುನ್ನಡೆಸಿದರು.
ವಿಜಯ ಆಶೀರ್ವಾದ ರ‍್ಯಾಲಿ
ಪ್ರಿಯಾಂಕಾ ಗಾಂಧಿ ಅವರು ರಾಜ್ಯದ ಎಲ್ಲ ೬೮ ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಆಯೋಜಿಸಿದ ವಿಜಯ ಆಶೀರ್ವಾದ ರ‍್ಯಾಲಿ ನಿಜಕ್ಕೂ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು. ಏಕಕಾಲದಲ್ಲಿ ಇಡೀ ರಾಜ್ಯಾದ್ಯಂತ ಹುಟ್ಟಿದ ಹವಾಕ್ಕೆ ಬಿಜೆಪಿಯೇ ನಡುಗಿ ಹೋಯಿತು. ಅದಾದ ಬಳಿಕ ಕಾಂಗ್ರೆಸಿಗರು ಮನೆ ಮನೆಗೆ ಹೋಗಿ ಜನರನ್ನು ಮಾತನಾಡಿಸಬೇಕು ಎಂಬ ಟಾಸ್ಕನ್ನು ಪ್ರಿಯಾಂಕಾ ನೀಡಿದ್ದರು. ಅವರು ಕೂಡಾ ಶಿಮ್ಲಾದಲ್ಲಿ ಹಲವಾರು ಮನೆಗಳಿಗೆ ಭೇಟಿ ನೀಡಿದರು.
ಸಮಸ್ಯೆಗಳನ್ನು ಅರ್ಥ ಮಾಡಿಕೊಂಡರು
ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರು ದೊಡ್ಡ ಭಾಷಣ ಮಾಡಿ ಹೋಗುವುದು ರೂಢಿ. ಅಲ್ಲಿನ ವಾಸ್ತವಿಕ ಪರಿಸ್ಥಿತಿಯ ಅರಿವು ಅವರಿಗೆ ಇರುವುದಿಲ್ಲ ಎಂಬ ವಾದವಿದೆ. ಆದರೆ, ಪ್ರಿಯಾಂಕಾ ಗಾಂಧಿ ಮಾತ್ರ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿದ್ದಾರೆ. ಅದರ ಪರಿಹಾರದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಹಿಮಾಚಲ ಪ್ರದೇಶವೆಂದರೆ ಅದು ಅತಿ ಹೆಚ್ಚು ಸೈನಿಕರನ್ನು ದೇಶಕ್ಕೆ ಸಮರ್ಪಿಸುವ ರಾಜ್ಯಗಳಲ್ಲಿ ಒಂದು. ಇಂಥ ರಾಜ್ಯದಲ್ಲಿ ಸೈನಿಕರಿಗೆ ನೀಡುವ ಪಿಂಚಣಿಯ ವಿಚಾರದಲ್ಲಿ ಜನರಿಗೆ ಬೇಸರ ಇರುವುದನ್ನು ಅರ್ಥ ಮಾಡಿಕೊಂಡರು. ಪಿಂಚಣಿ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್‌ನ ನಿಲುವನ್ನು ಸ್ಪಷ್ಟಪಡಿಸಿದರು.
ಅಗ್ನಿವೀರ್ ಯೋಜನೆಯಿಂದ ಅತಿ ಹೆಚ್ಚು ಜನ ಯುವಕರಿಗೆ ಅನ್ಯಾಯವಾಗುತ್ತದೆ ಎಂಬ ಜನರ ನಂಬಿಕೆಯನ್ನು ಸಂತೈಸಿದರು. ಶಿಮ್ಲಾದ ಜನರು ಎದುರಿಸುತ್ತಿದ್ದ ಸೇಬು ಬೆಳೆ ಮಾರಾಟ ವ್ಯವಸ್ಥೆಯ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು. ನಿರುದ್ಯೋಗ ನಿವಾರಣೆಯ ಪಣ ತೊಟ್ಟರು. ಎಲ್ಲಕ್ಕಿಂತ ಹೆಚ್ಚಾಗಿ ಜನಪರವಾದ, ಜನಪ್ರಿಯವಾದ ಮತ್ತು ಬಡವರ ಪರವಾದ ಪ್ರಣಾಳಿಕೆಯನ್ನು ರೂಪಿಸುವಲ್ಲಿ ಮುತುವರ್ಜಿ ವಹಿಸಿದರು.
ಏನೇನಿತ್ತು ಪ್ರಣಾಳಿಕೆಯಲ್ಲಿ?
ಪ್ರಿಯಾಂಕಾ ಗಾಂಧಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಜತನದಿಂದ ರೂಪಿಸಿದ ಪ್ರಣಾಳಿಕೆಯಲ್ಲಿ ಸೈನಿಕರ ಹಳೆ ಪಿಂಚಣಿ ಪದ್ಧತಿಯನ್ನು ಮರು ಸ್ಥಾಪಿಸುವ ಭರವಸೆ ನೀಡಿದರು. ೧೮ರಿಂದ ೬೦ ವರ್ಷದೊಳಗಿನ ಎಲ್ಲ ಹೆಣ್ಮಕ್ಕಳಿಗೆ ತಿಂಗಳಿಗೆ ೧,೫೦೦ ರೂ. ಪ್ರೋತ್ಸಾಹಧನ ನೀಡುವುದು, ರಾಜ್ಯದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿ, ಪ್ರತಿ ಮನೆಗೆ ೩೦೦ ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದು- ಹೀಗೆ ಜನರಿಗೆ ಹತ್ತಿರವಾದ ಯೋಜನೆಗಳನ್ನು ಪ್ರಕಟಿಸಿದರು.
ಮೊಬೈಲ್ ಕ್ಲಿನಿಕ್‌ಗಳ ಸ್ಥಾಪನೆ, ಗುಣಮಟ್ಟದ ಶಿಕ್ಷಣ, ಒಬ್ಬ ಹೈನುಗಾರನಿಂದ ಗರಿಷ್ಠ ೧೦ ಲೀಟರ್‌ವರೆಗೂ ಹಾಲು ಖರೀದಿ ಮಾಡುವುದು, ಇಷ್ಟೇ ಅಲ್ಲ, ಕೆಜಿಗೆ ೨ ರೂ. ಕೊಟ್ಟು ಸೆಗಣಿ ಖರೀದಿ ಮಾಡುವ ಯೋಜನೆಯನ್ನೂ ಪ್ರಕಟಿಸಿದರು. ದೊಡ್ಡ ದೊಡ್ಡ ಕನಸುಗಳನ್ನು ಬಿತ್ತದೆ ಜನ ಸಾಮಾನ್ಯರ ಮಟ್ಟದಲ್ಲಿ ನಿಂತು ಯೋಚಿಸಿದ ಅವರ ಶಕ್ತಿಗೆ ಈಗ ಫಲ ಸಿಕ್ಕಿದ ಹಾಗಿದೆ.
ಹಿಮಾಚಲ ಪ್ರದೇಶದ ಈ ಚುನಾವಣೆ ಕಾಂಗ್ರೆಸ್‌ಗೆ ಒಬ್ಬ ನಾಯಕಿಯನ್ನು ಪರಿಚಯಿಸಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನಿರುವ ರಾಹುಲ್ ಗಾಂಧಿಗಿಂತ ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಅವರೇ ಕಾಂಗ್ರೆಸ್‌ನ್ನು ಆವರಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ | Himachal Election Result 2022 | ಸ್ವಲ್ಪ ಯಾಮಾರಿದರೂ ಹಿಮಾಚಲದಲ್ಲೂ ‘ಕೈ’ ತಪ್ಪಬಹುದು ಅಧಿಕಾರ!