ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟ ಮತ್ತೆ ಜೋರಾಗಿದೆ. ಕೆಲ ದಿನಗಳ ಹಿಂದೆ ಹಿಮಾಲದ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ ಸೇರಿ ಮಳೆ ಸಂಬಂಧಿತ ಅವಘಡಗಳಿಂದ ನೂರಾರು ಜನ ಮೃತಪಟ್ಟ ಬೆನ್ನಲ್ಲೇ ಮೇಘಸ್ಫೋಟ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh) ಸೋಲನ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದಾಗಿ (Cloudburst) ಏಕಾಏಕಿ ಪ್ರವಾಹ ಸೃಷ್ಟಿಯಾಗಿ ಏಳು ಜನ ಮೃತಪಟ್ಟಿದ್ದಾರೆ. ಐವರನ್ನು ರಕ್ಷಿಸಲಾಗಿದೆ.
ಕಂದಘಾಟ್ ವಿಭಾಗದ ಜಡೋನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೆಲವೆಡೆ ಭೂಕುಸಿತ ಸಂಭವಿಸಿದೆ. ಇನ್ನು ಪ್ರವಾಹದ ಅಬ್ಬರಕ್ಕೆ ಎರಡು ಮನೆಗಳು, ಹತ್ತಾರು ವಾಹನಗಳು ಕೊಚ್ಚಿಹೋಗಿವೆ. ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳು ಕೂಡ ಕೊಚ್ಚಿಹೋಗಿವೆ. ಶಿಮ್ಲಾ-ಚಂಡೀಗಢ ರಸ್ತೆಯಲ್ಲಿ ಸಂಚಾರವೇ ಸ್ಥಗಿತಗೊಂಡಿದ್ದು, ಜನರ ಪರದಾಡುವಂತಾಗಿದೆ. ಹಿಮಾಚಲ ಪ್ರದೇಶಕ್ಕೆ ಜೂನ್ 24ರಂದು ಮುಂಗಾರು ಪ್ರವೇಶವಾಗಿದ್ದು, ಇದುವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭಾರಿ ಮಳೆಗೆ ಕುಸಿದ ಮನೆಗಳು
ಮುಖ್ಯಮಂತ್ರಿ ಸಂತಾಪ
ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿ ಏಳು ಜನ ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸಂತಾಪ ಸೂಚಿಸಿದರು. “ಸೋಲನ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಏಳು ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ಬೇಸರವಾಯಿತು. ಕುಟುಂಬಸ್ಥರ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ” ಎಂದು ಅವರು ಟ್ವೀಟ್ (ಈಗ X) ಮಾಡಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರವಾಹದ ಮಧ್ಯೆಯೇ ಆನ್ಲೈನ್ ಮದುವೆ; ವಿಡಿಯೊ ಕಾನ್ಫರೆನ್ಸ್ನಲ್ಲೇ ಮುಗಿದ ಶಾಸ್ತ್ರಗಳು
621 ರಸ್ತೆಗಳು ಬ್ಲಾಕ್
ಭಾನುವಾರದಿಂದಲೇ (ಆಗಸ್ಟ್ 13) ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸುಮಾರು 621 ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ. ಮಂಡಿಯಲ್ಲಿ 236, ಶಿಮ್ಲಾದಲ್ಲಿ 59, ಬಿಸ್ಲಾಪುರದಲ್ಲಿ 40 ಸೇರಿ 621 ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆ, ಸೇತುವೆಗಳು ಕೊಚ್ಚಿಹೋಗಿರುವುದು, ಭೂಕುಸಿತ, ಮತ್ತೆ ಭೂಕುಸಿತದ ಭೀತಿ ಸೇರಿ ಹಲವು ಮುಂಜಾಗ್ರತಾ ಕ್ರಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.