ಶಿಮ್ಲಾ : ಹಿಮಾಚಲ ಪ್ರದೇಶದ (Himachal Pradesh ) ನೂತನ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್ ಸುಖು (೫೮) ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಶೋಕ್ ಗೆಹ್ಲೋಟ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಸುಖವಿಂದರ್ ಸಿಂಗ್ ಅವರಿಗೆ ಮಣೆ ಹಾಕಿತ್ತು. ಉಪ ಮುಖ್ಯಮಂತ್ರಿಯಾಗಿ ಮುಕೇಶ್ ಅಗ್ನಿಹೋತ್ರಿ ಆಯ್ಕೆಯಾಗಿದ್ದರು.
ನದೌನ್ ವಿಧಾನಸಭೆ ಕ್ಷೇತ್ರದ ಮೂರು ಬಾರಿಯ ಶಾಸಕ ಸುಖವಿಂದರ್ ಸಿಂಗ್ ಸುಖು ಅವರು ಹೋರಾಟದ ಹಾದಿ ಹಿಡಿದು ರಾಜಕೀಯ ಪ್ರವೇಶಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಸುಖವಿಂದರ್ ಸಿಂಗ್, ಕಾಂಗ್ರೆಸ್‌ನ ನ್ಯಾಷನಲ್ ಸ್ಟುಡೆಂಟ್ ಯೂನಿಯನ್ ಆಫ್ ಇಂಡಿಯಾ (NSUI) ಸೇರ್ಪಡೆಯಾಗಿ, ಪಕ್ಷ ವಹಿಸಿದ ಕಾರ್ಯಗಳನ್ನು ನಿರ್ವಹಿಸಿ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪದೋನ್ನತಿ ಹೊಂದಿದ್ದರು. ರಾಜ್ಯದಲ್ಲಿ ವೀರಭದ್ರ ಸಿಂಗ್ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೂ, ಇವರಿಗೆ ಸಿಎಂ ಗಾದಿ ಒಲಿದಿದೆ.