Site icon Vistara News

Himalayan Glaciers: ಬರಿದಾಗುತ್ತಿದೆ ಹಿಮಾಲಯ, 20 ವರ್ಷದಲ್ಲಿ 57 ಕೋಟಿ ಆನೆ ತೂಕದ ಹಿಮ ಮಾಯ!

Himalayas lost glaciers equal to weight of 570 million elephants in 20 years: Researchers

Himalayas lost glaciers equal to weight of 570 million elephants in 20 years: Researchers

ನವದೆಹಲಿ: ಜಾಗತಿಕ ತಾಪಮಾನದ ಪರಿಣಾಮವನ್ನು ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳು ಎದುರಿಸುತ್ತಿವೆ. ಮಳೆಗಾಲದಲ್ಲಿ ಮಳೆ ಬರುವುದಿಲ್ಲ, ಬೇಸಿಗೆಯಲ್ಲಿ ಹೆಚ್ಚಿನ ಮಳೆಯಾಗುವುದು, ಚಳಿಗಾಲದ ಅವಧಿ ಕುಂಠಿತವಾಗುವುದು, ತಾಪಮಾನ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುವುದು ಸೇರಿ ಹಲವು ರೀತಿಯಲ್ಲಿ ತೊಂದರೆ ಆಗುತ್ತಿದೆ. ಹವಾಮಾನದ ಸರಪಳಿಯೇ ಕಡಿದು ಹೋಗಿದೆಯೇನೋ ಎನ್ನುವಷ್ಟರಮಟ್ಟಿಗೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಕೆಲವೇ ದಶಕಗಳಲ್ಲಿ ಜಾಗತಿಕ ತಾಪಮಾನದ ಏರಿಕೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯದ ಅರಿವಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ 20 ವರ್ಷದಲ್ಲಿ ಹಿಮಾಲಯದ ವ್ಯಾಪ್ತಿಯಲ್ಲಿರುವ (Himalayan Glaciers) ಸುಮಾರು 57 ಕೋಟಿ ಆನೆಗಳ ತೂಕದ ಹಿಮವು ಕರಗಿದೆ.

ಜಾಗತಿಕ ಮಟ್ಟದ ಸಂಶೋಧಕರು ಇಂತಹದ್ದೊಂದು ವರದಿಯನ್ನು ನೀಡಿದ್ದು, ತಾಪಮಾನ ಏರಿಕೆಗೆ ಬಹುದೊಡ್ಡ ನಿದರ್ಶನವಾಗಿದೆ. ಭಾರತ, ಚೀನಾ, ನೇಪಾಳ ಮತ್ತು ಭೂತಾನ್‌ ವ್ಯಾಪ್ತಿಯಲ್ಲಿ ಚಾಚಿಕೊಂಡಿರುವ ಹಿಮಾಲಯ ಪ್ರದೇಶದ ಮೇಲೆ ನೀರ್ಗಲ್ಲುಗಳ ಕೊರತೆ, ಹಿಮನದಿಗಳು ಬರಿದಾಗುವುದು, ಹಿಮ ಕರಗಿ ಆವಿಯಾಗುತ್ತಿರುವುದು, ಸರೋವರಗಳ ವ್ಯಾಪ್ತಿ ಕಡಿಮೆಯಾಗುತ್ತಿರುವುದು ಸೇರಿ ಹಲವು ರೀತಿಯಲ್ಲಿ ಹಿಮಾಲಯವು ಬರಿದಾಗುತ್ತಿದೆ. ಸುಮಾರು 57 ಕೋಟಿ ಆನೆಗಳನ್ನು ಒಟ್ಟುಗೂಡಿಸಿದರೆ ಎಷ್ಟು ತೂಕವಾಗುತ್ತದೆಯೋ, ಅಷ್ಟು ತೂಕದ ಹಿಮವು ಕೇವಲ ಎರಡೇ ದಶಕದಲ್ಲಿ ಮಾಯವಾಗಿದೆ ವಿಶ್ವದ ಹಲವು ವಿವಿಗಳ ಸಂಶೋಧಕರು ತಿಳಿಸಿದ್ದಾರೆ. ಹಾಗಾಗಿ, ವರದಿಯು ಭೀತಿ ಹುಟ್ಟಿಸುವಂತಿದೆ.

ಬ್ರಿಟನ್‌ನ ಯುನಿವರ್ಸಿಟಿ ಆಫ್‌ ಆ್ಯಂಡ್ರ್ಯೂಸ್‌, ಚೀನಾದ ಅಕಾಡೆಮಿ ಆಫ್‌ ಸೈನ್ಸಸ್‌, ಆಸ್ಟಿಯಾದ ಗ್ರ್ಯಾಜ್‌ ಯುನಿವರ್ಸಿಟಿ ಆಫ್‌ ಟೆಕ್ನಾಲಜಿ ಹಾಗೂ ಕಾರ್ನೆಜಿ ಮೆಲನ್‌ ಯುನಿವರ್ಸಿಟಿಯ ತಜ್ಞರು ಹಿಮಾಲಯದಲ್ಲಿ ಹಿಮ ಕರಗುವಿಕೆಯ ಕುರಿತು ಅಧ್ಯಯನ ನಡೆಸಿದ್ದಾರೆ. ಹಿಮನದಿಗಳು ನಾಮಾವಶೇಷವಾಗುತ್ತಿರುವ ಕಾರಣ ಎರಡು ದಶಕಗಳಲ್ಲಿ ಹಿಮದ ಪ್ರಮಾಣ ಶೇ.6.5ರಷ್ಟು ಕುಸಿದಿದೆ ಎಂದು ಮಾಹಿತಿ ನೀಡಿದ್ದಾರೆ. ನೇಚರ್‌ ಜಿಯೋಸೈನ್ಸ್‌ ಜರ್ನಲ್‌ನಲ್ಲಿ ವಿಜ್ಞಾನಿಗಳ ಸಂಶೋಧನಾ ವರದಿಯು ಪ್ರಕಟವಾಗಿದೆ. ಇದು ಜಾಗತಿಕ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹೊಸ ಅಂಕಣ: ಪರಿಸರ ಪದ: ಮರಳಿ ಬರುವುದೆ ಊರಿನ ಉಲ್ಲಾಸ?

2000-2020ನೇ ಅವಧಿಯಲ್ಲಿ ಹಿಮಾಲಯದಲ್ಲಿ ಹಿಮನದಿಗಳ ನಾಶದ ಕುರಿತು ವಿಜ್ಞಾನಿಗಳು ಭಯಾನಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಜಾಗತಿಕ ತಾಪಮಾನ ಸೇರಿ ಹಲವು ಕಾರಣಗಳಿಂದಾಗಿ ಹಿಮಾಲಯವು ಬರಿದಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹಿಮ ಕರಗುವಿಕೆಯ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಹೀಗೆಯೇ ಹಿಮಾಲಯ ಬರಿದಾಗುತ್ತ ಹೋದರೆ 21ನೇ ಶತಮಾನದ ವೇಳೆಗೆ ಹೆಚ್ಚಿನ ಅಪಾಯ ಎದುರಾಗುತ್ತದೆ. ನೀರ್ಗಲ್ಲುಗಳ ನಾಶ, ಹಿಮನದಿಗಳ ವಿನಾಶ, ಹಿಮ ಕರಗುವಿಕೆಯಿಂದಾಗಿ ಹೆಚ್ಚಿನ ಪರಿಣಾಮ ಉಂಟಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಗೆ ಪರಿಹಾರ ಕಂಡುಕೊಳ್ಳದ ಹೊರತು ಅಪಾಯ ತಪ್ಪಿದ್ದಲ್ಲ ಎಂದು ಕೂಡ ಎಚ್ಚರಿಸಿದ್ದಾರೆ.

Exit mobile version