ನವದೆಹಲಿ: ಹಿಂದಿ ಹೇರಿಕೆ (Hindi Imposition), ಹಿಂದಿ ರಾಷ್ಟ್ರ(Hindi National Language) ಭಾಷೆ ಕುರಿತಾದ ಚರ್ಚೆಗಳು ಒಂದಿಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಮಂಗಳವಾರ ನಡೆದ ಇಂಡಿಯಾ ಕೂಟದ (India Bloc) ಸಭೆಯಲ್ಲಿ ಹಿಂದಿ ರಾಷ್ಟ್ರ ಭಾಷೆ ಕುರಿತಾಗಿ ವಾದ ವಾಗ್ವಾದ ನಡೆದಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ (Bihar Nitish Kumar) ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆಗ ಡಿಎಂಕೆಯ ನಾಯಕರು (DMK Leaders) ಅನುವಾದಕ್ಕೆ ಆಗ್ರಹಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ನಿತಿಶ್ ಕುಮಾರ್ ಅವರು, ನಾವು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ. ಹಿಂದಿ ನಮ್ಮ ರಾಷ್ಟ್ರ ಭಾಷೆ. ಅದು ನಿಮಗೆ ಗೊತ್ತಿರಬೇಕು ಎಂದು ಹೇಳಿದ್ದಾರೆ.
ಇಂಡಿಯಾ ಕೂಟದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾತನಾಡುತ್ತಿದ್ದರು. ಆದರೆ, ಹಿಂದಿಯ ಭಾಷೆ ಅರ್ಥವಾಗದ್ದಕ್ಕೆ ಡಿಎಂಕೆ ನಾಯಕು ಟಿ ಆರ್ ಬಾಲು ಅವರು, ಅನುವಾದ ಮಾಡುವಂತೆ ಆರ್‌ಜೆಡಿ ಸಂಸದ ಮನೋಜ್ ಕೆ ಝಾ ಅವರಿಗೆ ಸೂಚಿಸಿದ್ದಾರೆ. ಆಗ ಝಾ ಅವರು, ನಿತಿಶ್ ಕುಮಾರ್ ಅವರಿಂದ ಇದಕ್ಕೆ ಅನುಮತಿ ಕೇಳುತ್ತಿದ್ದಂತೆ ಸಿಟ್ಟಿಗೆದ್ದ ನಿತಿಶ್ ಕುಮಾರ್ ಅವರು, ನಾವು ನಮ್ಮ ದೇಶವನ್ನು ಹಿಂದೂಸ್ತಾನ ಎಂದು ಕರೆಯುತ್ತೇವೆ. ಹಿಂದಿ ನಮ್ಮ ರಾಷ್ಟ್ರ ಭಾಷೆ, ಈ ಭಾಷೆ ನಮಗೆ ತಿಳಿದಿರಬೇಕು ಎಂದು ಹೇಳಿದ್ದಾರೆ.
ನಂತರ ಕುಮಾರ್ ತಮ್ಮ ಭಾಷಣವನ್ನು ಭಾಷಾಂತರಿಸದಂತೆ ಮನೋಜ್ ಝಾ ಅವರನ್ನು ಕೇಳಿದರು ಮತ್ತು ಬ್ರಿಟಿಷರನ್ನು ಬಹಳ ಹಿಂದೆಯೇ ಭಾರತದಿಂದ ಹೊರಹಾಕಲಾಯಿತು ಮತ್ತು ಭಾರತೀಯರು ವಸಾಹತುಶಾಹಿ ಹ್ಯಾಂಗೊವರ್‌ನಿಂದ ಇನ್ನೂ ದೂರ ಬಂದಿಲ್ಲ ಎಂದು ಹೇಳಿದರು.
ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರ ಜತೆಗೂಡಿ ಟಿ ಆರ್ ಬಾಲ ಅವರು ಇಂಡಿಯಾ ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದರು. ದಿಲ್ಲಿಯಲ್ಲಿ ಇಂಡಿಯಾ ಕೂಟದ ನಾಲ್ಕನೇ ಸಭೆಯನ್ನು ಆಯೋಜಿಸಲಾಗಿತ್ತು. ಲೋಕಸಭೆ ಚುನಾವಣೆಗೆ ಸೀಟ್ ಷೇರಿಂಗ ಮತ್ತು ಚುನಾವಣಾ ಪ್ರಚಾರದ ಕುರಿತು ಈ ವೇಳೆ ಚರ್ಚಿಸಲಾಯಿತು.
ಈ ಸಭೆಯಲ್ಲಿ ಭಾಗವಹಿಸಿದ್ದವರ ಪ್ರಕಾರ, ನಿತೀಶ್ ಕುಮಾರ್ ಅವರು ಸಭೆಯಲ್ಲಿ ಸಿಟ್ಟಿನ ಮೂಡ್‌ನಲ್ಲಿದ್ದರು. ಅಷ್ಟೊಂದು ಸರಳವಾಗಿ ಅವರು ಸಭೆಯಲ್ಲಿ ಕಂಡುಬರಲಿಲ್ಲ. ಇದೇ ವೇಳೆ, ಜೆಡಿಯು ಸದಸ್ಯರು ನಿತೀಶ್ ಕುಮಾರ್ ಅವರನ್ನು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆಂದು ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಇಂಡಿಯಾ ಕೂಟದ ನಾಯಕತ್ವ ಹೊಣೆಗಾರಿಕೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ!?
ಕನ್ನಡಿಗ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರು ಪ್ರತಿಪಕ್ಷಗಳ ಸಂಗಮವಾಗಿರುವ ಇಂಡಿಯಾ ಮೈತ್ರಿಕೂಟದ (INDIA Bloc) ನಾಯಕರಾಗಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(cm mamata banerjee), ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರು, ಇಂಡಿಯಾ ಕೂಟದ ಪ್ರಧಾನ ಮಂತ್ರಿಯ ಅಭ್ಯರ್ಥಿ (PM Candidate of India bloc) ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸೂಚಿಸಿದ್ದಾರೆ. ಆದರೆ, ಖರ್ಗೆ ಅವರು ಸದ್ಯಕ್ಕೆ ಚುನಾವಣೆ ಗೆಲ್ಲುವುದಷ್ಟೇ ನಮ್ಮ ಮುಂದಿರುವ ಟಾಸ್ಕ್. ಬಳಿಕ ಪಿಎಂ ಅಭ್ಯರ್ಥಿಯ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದ್ದಾರೆ.
ಮಂಗಳವಾರ 28 ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ದೇಶದ ಮೊದಲ ದಲಿತ ಪ್ರಧಾನಿಯಾಗಲು ತಮ್ಮ ಹೆಸರನ್ನು ಪ್ರಸ್ತಾಪಿಸಿದ ನಂತರ ಖರ್ಗೆ ಅವರು, ‘ನಾನು ದೀನದಲಿತರಿಗಾಗಿ ಕೆಲಸ ಮಾಡುತ್ತೇನೆ. ಮೊದಲು ಗೆಲ್ಲೋಣ, ಆಮೇಲೆ ನೋಡೋಣ. ನಾನು ಏನನ್ನೂ ಬೇಡುವುದಿಲ್ಲ” ಎಂದು ಹೇಳಿದರು. ಖರ್ಗೆ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಪ್ರಸ್ತಾಪಿಸಿದ್ದಾರೆ ಎಂದು ಸಭೆಯ ನಂತರ ಎಂಡಿಎಂಕೆ ನಾಯಕ ವೈಕೊ ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಪ್ರಕಾರ, ವಿಪಕ್ಷ ಮೈತ್ರಿಕೂಟದ ಘಟಕಗಳು ಸಭೆಯಲ್ಲಿ “ಮೇನ್ ನಹಿನ್, ಹಮ್ (ನಾವು, ನಾನಲ್ಲ)” ಎಂಬ ವಿಷಯದೊಂದಿಗೆ ಮುಂದುವರಿಯಲು ಉದ್ದೇಶಿಸಿದೆ. ಇಲ್ಲಿನ ಅಶೋಕ ಹೊಟೇಲ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೇರಿದಂತೆ ಪ್ರತಿಪಕ್ಷಗಳ ನಾಯಕು ಪಾಲ್ಗೊಂಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರತಿಪಕ್ಷಗಳ ನಾಯಕ ಸಭೆ ಚೆನ್ನಾಗಿತ್ತು. ಚುನಾವಣಾ ಪ್ರಚಾರ, ಸೀಟು ಹಂಚಿಕೆ ಪ್ರಕ್ರಿಯೆಗಳು ಎಲ್ಲವೂ ಶೀಘ್ರವೇ ಆರಂಭವಾಗಲಿವೆ. ಕೂಟ ಸಮನ್ವಯಕರರನ್ನಾಗಿ ಯಾರನ್ನೂ ಇನ್ನೂ ಆಯ್ಕೆ ಮಾಡಿಲ್ಲ ಎಂದು ತಿಳಿಸಿದರು.
ಈ ಸಭೆಯಲ್ಲಿ ಮುಖ್ಯ ವಿಷಯವೇ ಸೀಟು ಹಂಚಿಕೆಯಾಗಿತ್ತು. ಕೆಲವು ನಾಯಕರು ಜನವರಿ 1ಕ್ಕಿಂತ ಮುಂಚೆಯೇ ಸೀಟು ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ. ಕೂಟದ ಪ್ರಧಾನಿ ಮಂತ್ರಿ ಅಭ್ಯರ್ಥಿ ಕುರಿತೂ ಸಭೆಯಲ್ಲಿ ಚರ್ಚೆಯಾಯಿತು. ಆದರೆ, ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿಲ್ಲ. ಪ್ರತಿಯೊಬ್ಬರು ಚುನಾವಣೆ ಗೆದ್ದ ಬಳಿಕ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ಹೇಳಿದರು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸದ ಮಹುವಾ ಮಾಜಿ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Lok Sabha Election: ಲೋಕಸಭೆ ಎಲೆಕ್ಷನ್ ಮೋದಿ v/s ಖರ್ಗೆ! ಕುತೂಹಲ ಕೆರಳಿಸಿದ ‘ಇಂಡಿಯಾ’ ನಡೆ