ಜೈಪುರ: ರಾಜಸ್ಥಾನದ ಅಲ್ವರ್ ಜಿಲ್ಲೆಯ ಸರ್ಕಾರಿ ಶಾಲೆಗೆ ತಿಲಕ (Tilak Row) ಇಟ್ಟುಕೊಂಡು ಬಂದ ಹಿಂದು ವಿದ್ಯಾರ್ಥಿ ಮೇಲೆ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಹಾಗೆಯೇ, ಇಸ್ಲಾಂ ಧರ್ಮಕ್ಕೂ ಮತಾಂತರಗೊಳ್ಳಬೇಕು ಎಂಬುದಾಗಿ ಮುಸ್ಲಿಂ ವಿದ್ಯಾರ್ಥಿಗಳು ಒತ್ತಾಯಿಸಿದ್ದು, ಇದರಿಂದಾಗಿ ಶಾಲೆಯಲ್ಲಿ ಗಲಾಟೆ ಕೂಡ ನಡೆದಿದೆ ಎಂದು ತಿಳಿದುಬಂದಿದೆ.
ಜುಲೈ 27ರಂದು ಅಲ್ವರ್ ಜಿಲ್ಲೆಯ ಚೋಲಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಶುಭಂ ರಜಪೂತ್ ಎಂಬ ವಿದ್ಯಾರ್ಥಿಯು ಹಣೆಗೆ ತಿಲಕ ಇಟ್ಟುಕೊಂಡು ಬಂದಿದ್ದಾನೆ. ಇದೇ ವೇಳೆ ಬಾಲಕನನ್ನು ತಡೆದ ಮುಸ್ಲಿಂ ವಿದ್ಯಾರ್ಥಿಗಳು ತಿಲಕ ಅಳಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. ಆಗ ಶುಭಂ ಪ್ರಿನ್ಸಿಪಾಲರಿಗೆ ದೂರು ನೀಡಲು ಮುಂದಾಗಿದ್ದಾನೆ. ಇದರಿಂದ ಕೆರಳಿದ ಮುಸ್ಲಿಂ ವಿದ್ಯಾರ್ಥಿಗಳು ಶುಭಂ ಇಟ್ಟಿದ್ದ ತಿಲಕ ಅಳಿಸಿ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಚೋಲಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇದರಿಂದಾಗಿ ಗಲಾಟೆ ಆರಂಭವಾಗಿದೆ. ಗ್ರಾಮದ ಹಿಂದು ಹಾಗೂ ಮುಸ್ಲಿಮರು ಶಾಲೆಗೆ ಆಗಮಿಸಿ ಗಲಾಟೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಶಾಲೆಯ ಗಲಾಟೆ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಕೂಡ ಮೂಲಗಳು ತಿಳಿಸಿವೆ.
ಗಲಾಟೆ ಆರಂಭವಾಗಲು ಕಾರಣ?
ಜುಲೈ 27ರಂದು ತಿಲಕದ ವಿಚಾರಕ್ಕೆ ಗಲಾಟೆ ನಡೆಯಲು ಜುಲೈ 25ರಂದು ಮುಸ್ಲಿಂ ವಿದ್ಯಾರ್ಥಿಗಳು ತೆಗೆದ ತಗಾದೆಯೇ ಕಾರಣ ಎನ್ನಲಾಗಿದೆ. ಜುಲೈ 25ರಂದು ಕೂಡ ಮುಸ್ಲಿಂ ವಿದ್ಯಾರ್ಥಿಗಳು ಶುಭಂಗೆ ತಿಲಕ ತೆಗೆಯಲು ಒತ್ತಾಯಿಸಿದ್ದಾರೆ. ಅವರೇ ಒತ್ತಾಯಪೂರ್ವಕವಾಗಿ ತಿಲಕ ಅಳಿಸಿದ್ದಾರೆ. ಇದಲ್ಲದೆ, ನೀನು ಹಾಗೂ ನಿನ್ನ ಇಡೀ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂಬುದಗಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Hijab for Hindu Girls: ಮಧ್ಯ ಪ್ರದೇಶದ ಖಾಸಗಿ ಶಾಲೆಯಲ್ಲಿ ಹಿಂದು ಹೆಣ್ಣುಮಕ್ಕಳಿಗೂ ಹಿಜಾಬ್!
ಇದರಿಂದಾಗಿ ಉಳಿದೆಲ್ಲ ಹಿಂದು ವಿದ್ಯಾರ್ಥಿಗಳು ತಿಲಕ ಇಟ್ಟುಕೊಂಡು ಶಾಲೆಗೆ ಬರಲು ಆರಂಭಿಸಿದ್ದಾರೆ. ಇದನ್ನು ಸಹಿಸದ ಮುಸ್ಲಿಂ ವಿದ್ಯಾರ್ಥಿಗಳು ಗಲಾಟೆಯನ್ನು ಜಾಸ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಶುಭಂ ಪೋಷಕರು ದೂರು ದಾಖಲಿಸಿದ್ದಾರೆ. ಕರ್ನಾಟಕದಲ್ಲೂ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಗಲಾಟೆ ನಡೆದು, ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.