ಒಟ್ಟಾವಾ: ಖಲಿಸ್ತಾನ್ ಉಗ್ರಗಾಮಿಗಳ ಬೆಳವಣಿಗೆಗೆ ತಮ್ಮದೇ ಪಕ್ಷದ ನೇತೃತ್ವದ ಸರ್ಕಾರವೇ ಕಾರಣ (India Canada Row) ಎಂದು ಆರೋಪಿಸಿದ ಲಿಬರಲ್ ಪಕ್ಷದ ಸಂಸದ ಚಂದ್ರ ಆರ್ಯ, ಉಗ್ರಗಾಮಿ ಶಕ್ತಿಗಳ ಬೆದರಿಕೆಯಿಂದಾಗಿ ಕೆನಡಾದಲ್ಲಿ ನೆಲೆಸಿರುವ ಹಿಂದೂಗಳು ಭಯಭೀತರಾಗಿದ್ದಾರೆ ಎಂದು ಭಾನುವಾರ ಹೇಳಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೋ ಅವರದ್ದೇ ಪಕ್ಷದ ನಾಯಕರಾಗಿರುವ ಆರ್ಯ, ಹಿಂದೂ ಕೆನಡಿಯನ್ನರಿಗೆ ಬೆದರಿಕೆಗಳ ವಿಷಯವನ್ನು ಪದೇ ಪದೇ ಎತ್ತಿದ್ದಾರೆ. ಸಮುದಾಯವು ಶಾಂತವಾಗಿ ಮತ್ತು ಜಾಗರೂಕರಾರಿ ಇರಬೇಕು ಎಂದು ಸಲಹೆ ನೀಡಿದ್ದಾರೆ,
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತು ಇತರ ಉಗ್ರಗಾಮಿ ಶಕ್ತಿಗಳು ಹಿಂದೂ ಕೆನಡಿಯನ್ನರಿಗೆ ಬೆದರಿಕೆಗಳನ್ನು ಒಡ್ಡಿದ ಹಿನ್ನೆಲೆಯಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕೆನಡಾದಲ್ಲಿ ವಾಸಿಸುವ ಭಾರತಿಯ ಹಿಂದೂಗಳು ಆತಂಕದಲ್ಲಿ ಜೀವನ ಮಾಡುವಂತಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಸಿಬಿಸಿ ನ್ಯೂಸ್ ಜೊತೆ ಮಾತನಾಡಿದ ಚಂದ್ರ ಆರ್ಯ “ಪ್ರಧಾನಿ (ಟ್ರುಡೊ) ಹೇಳಿಕೆಯ ನಂತರ ಏನಾಯಿತು ಎಂಬುದರ ಪರಿಣಾಮದ ಬಗ್ಗೆ ನಾನು ಹೆಚ್ಚು ಚಿಂತಿತನಾಗಿದ್ದೇನೆ. ಇಲ್ಲಿನ ಹಿಂದೂ ಕೆನಡಿಯನ್ನರ ಸುರಕ್ಷತೆಯ ಬಗ್ಗೆ ಕಾಳಜಿ ಇದೆ. ಹಿಂದೂ ಕೆನಡಿಯನ್ನರು ಭಯಭೀತರಾಗಿದ್ದಾರೆ. ಕೆನಡಾದಲ್ಲಿ ಜನಾಂಗೀಯ ಮತ್ತು ಪಂಥೀಯ ರಕ್ತಪಾತದ ಅಪಾಯವು ಹೆಚ್ಚಾಗಲಿದೆ ಎಂಬ ಊಹೆ ಸರಿಯಿದೆ ಎಂದು ಆರ್ಯ ಅವರು ಸಮರ್ಥಿಸಿಕೊಂಡಿದ್ದಾರೆ.
ಅಪಾಯಕಾರಿ ಖಲಿಸ್ತಾನಿಗಳು
ಮೊದಲನೆಯದಾಗಿ, ಖಲಿಸ್ತಾನ್ ಚಳವಳಿಯ ಇತಿಹಾಸವು ಹಿಂಸಾಚಾರ ಮತ್ತು ಹತ್ಯೆಗಳಿಂದ ತುಂಬಿದೆ. ಖಲಿಸ್ತಾನಿ ಚಳವಳಿಯ ಇತಿಹಾಸದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಂದ ಸಾವಿರಾರು ಹಿಂದೂಗಳು ಮತ್ತು ಸಿಖ್ಖರು ಕೊಲ್ಲಲ್ಪಟ್ಟಿದ್ದಾರೆ. 38 ವರ್ಷಗಳ ಹಿಂದೆ ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ನಡೆದ ಇತಿಹಾಸದಲ್ಲೇ ಅತಿದೊಡ್ಡ ಸಾಮೂಹಿಕ ಹತ್ಯೆಯನ್ನು ಕೆನಡಾದ ಜನರು ಮರೆತಿದ್ದಾರೆ. ಇದು 9/11 ರ ಮೊದಲು ನಡೆದ ಅತಿದೊಡ್ಡ ವಾಯುಯಾನ ಭಯೋತ್ಪಾದನೆಯಾಗಿತ್ತು. ಅದನ್ನು ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಮಾಡಿದ್ದಾನೆ. ವಾಸ್ತವವೆಂದರೆ ಆ ಭಯೋತ್ಪಾದಕರನ್ನು ಕೆನಡಾದ ಕೆಲವು ಸ್ಥಳಗಳಲ್ಲಿ ಇನ್ನೂ ಪೂಜಿಸಲಾಗುತ್ತದೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸಂಭ್ರಮಾಚರಣೆಗಾಗಿ ಆಯೋಜಿಸಿದ್ದ ಸ್ತಬ್ಧಚಿತ್ರ ಮೆರವಣಿಗೆಯನ್ನು ಆರ್ಯ ಅವರು ಇದೇ ವೇಳ ಖಂಡಿಸಿದರು
ಕೆಲವು ತಿಂಗಳ ಹಿಂದೆ, ಟೊರೊಂಟೊದಲ್ಲಿ ಒಂದು ಮಹಡಿಯಲ್ಲಿ, ರಕ್ತ ಚೆಲ್ಲಿದ ಬಿಳಿ ಸೀರೆ ಉಟ್ಟಿರುವ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕೌಟೌಟ್ ಅನ್ನು ಸಾರ್ವಜನಿಕ ಮೆರವಣಿಗೆ ಮಾಡಿದ್ದರು. ದಾಳಿಯನ್ನು ಸಂಭ್ರಮಿಸುವ ರೀತಿಯೇ ಇದು. ಇದು ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಆಯ್ಕೆಯಾದ ಪ್ರಧಾನಿಯನ್ನು ಕೊಲ್ಲಲಾಗಿದೆ. ಅದನ್ನು ಸಾರ್ವಜನಿಕವಾಗಿ ಸಂಭ್ರಮಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಯಾವ ದೇಶವು ಇದನ್ನು ಅನುಮತಿಸುತ್ತದೆ ಎಂದು ಎಂದು ಆರ್ಯ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಕೃತ್ಯ
ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಹಿಂದೂ ಕೆನಡಿಯನ್ನರಿಗೆ ದೇಶವನ್ನು ತೊರೆದು ಭಾರತಕ್ಕೆ ಹೋಗುವಂತೆ ಬೆದರಿಕೆ ಹಾಕಿದರು. ಮತ್ತು ಈ ರೀತಿಯ ದ್ವೇಷದ ಅಪರಾಧವನ್ನು ಯಾವುದೇ ಪರಿಣಾಮಗಳಿಲ್ಲದೆ ಬಹಿರಂಗವಾಗಿ ಮಾಡಲಾಗುತ್ತದೆ. ಬಹುಪಾಲು ಸಿಖ್- ಕೆನಡಿಯನ್ನರು ಖಲಿಸ್ತಾನಿ ಚಳವಳಿಯನ್ನು ಬೆಂಬಲಿಸುವುದಿಲ್ಲ, ಅವರು ಹಿಂದೂ ಕೆನಡಿಯನ್ನರೊಂದಿಗೆ ನಿಕಟವಾಗಿದ್ದಾರೆ ಎಂಬುದಾಗಿ ಆರ್ಯ ಅವರು ಹೇಳಿದರು.
ಇದನ್ನೂ ಓದಿ : India Canada Row : ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರನಿಗೆ ಎನ್ಐಎ ಟಕ್ಕರ್
ಕೆನಡಾದ ಬಹುಪಾಲು ಸಿಖ್-ಕೆನಡಿಯನ್ನರು ಖಲಿಸ್ತಾನಿ ಚಳುವಳಿಯನ್ನು ಬೆಂಬಲಿಸುತ್ತಿಲ್ಲ. ಅವರು ಖಲಿಸ್ತಾನ್ ಚಳವಳಿಯ ವಿರುದ್ಧ ಬಹಿರಂಗವಾಗಿ ಮಾತನಾಡದಿರಬಹುದು, ಆದರೆ ಅವರು ಕುಟುಂಬ ಸಂಬಂಧಗಳು ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹಿಂದೂ ಕೆನಡಿಯನ್ನರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಇಲ್ಲಿ ಹಿಂದೂ ಮತ್ತು ಸಿಖ್ ಕೆನಡಿಯನ್ನರ ದೊಡ್ಡ ಏಕೀಕರಣವಿದೆ. ಆದಾಗ್ಯೂ, ಸಿಖ್ ಸಮುದಾಯದ ಒಂದು ಸಣ್ಣ ಭಾಗವು ಖಲಿಸ್ತಾನಿ ಭಯೋತ್ಪಾದಕರು ಎಂದು ಆರ್ಯ ಆರೋಪಿಸಿದರು.