Site icon Vistara News

Hindu- Islam: ಹಿಂದೂ ಸಮಾಜದ ಅನಿಷ್ಟಗಳಿಗೆ ಇಸ್ಲಾಂ ಆಕ್ರಮಣವೇ ಕಾರಣ: ಆರೆಸ್ಸೆಸ್‌ ಮುಖಂಡ ಕೃಷ್ಣ ಗೋಪಾಲ್

krishna gopal RSS leader

ಹೊಸದಿಲ್ಲಿ: ಬಾಲ್ಯವಿವಾಹ (Child marriage), ಸತಿ ಪದ್ಧತಿ (Sati practice), ವಿಧವೆಯರ ಮರುವಿವಾಹಕ್ಕೆ (widow remarriage) ನಿಷೇಧದಂತಹ ಸಾಮಾಜಿಕ ಅನಿಷ್ಟಗಳು ಭಾರತೀಯ ಸಮಾಜದಲ್ಲಿ (hindu society) ಇಸ್ಲಾಮಿಕ್ ಆಕ್ರಮಣದಿಂದಾಗಿ (Islamic invasion) ಬಂದಿವೆ ಎಂದು ಆರ್‌ಎಸ್‌ಎಸ್ ಹಿರಿಯ ಕಾರ್ಯಕಾರಿ (RSS leader) ಕೃಷ್ಣ ಗೋಪಾಲ್ ಹೇಳಿದ್ದಾರೆ.

ಮಧ್ಯಕಾಲೀನ ಅವಧಿಯಲ್ಲಿ ಇಸ್ಲಾಮಿಕ್‌ ಆಕ್ರಮಣಕಾರರಿಂದ ಮಹಿಳೆಯರು ಮತ್ತು ಹುಡುಗಿಯರನ್ನು ರಕ್ಷಿಸಲು ಅವರ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹಾಕಲಾಗಿತ್ತು. ಇದರಿಂದಾಗಿ ಮಹಿಳೆಯರ ಹಕ್ಕುಗಳು ದಮನವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಪದಾಧಿಕಾರಿಗಳಾದ ಕೃಷ್ಣ ಗೋಪಾಲ್‌, ದೆಹಲಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ “ನಾರಿ ಶಕ್ತಿ ಸಂಗಮ” ಎಂಬ ಕಾರ್ಯಕ್ರಮದಲ್ಲಿ ಹೇಳಿದರು.

ಮಧ್ಯಕಾಲೀನ ಅವಧಿಯು ಅತ್ಯಂತ ಕಷ್ಟಕರವಾದ ಸಮಯವಾಗಿತ್ತು. ಇಡೀ ದೇಶವು ಆಕ್ರಮಣದ ವಿರುದ್ಧ ಹೋರಾಡುತ್ತಿತ್ತು. ನಮ್ಮ ದೇವಾಲಯಗಳನ್ನು ಕೆಡವಲಾಯಿತು. ದೊಡ್ಡ ವಿಶ್ವವಿದ್ಯಾಲಯಗಳನ್ನು ನಾಶಪಡಿಸಲಾಯಿತು. ಮಹಿಳೆಯರು ಅಪಾಯದಲ್ಲಿದ್ದರು. ಲಕ್ಷಗಟ್ಟಲೆ ಮಹಿಳೆಯರನ್ನು ಅಪಹರಿಸಿ ವಿಶ್ವದಾದ್ಯಂತ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಯಿತು. ಅಹ್ಮದ್ ಷಾ ಅಬ್ದಾಲಿ, ಮುಹಮ್ಮದ್ ಘೋರಿ, ಘಜ್ನಿ ಮಹಮ್ಮದ್ ಅವರೆಲ್ಲರೂ ಇಲ್ಲಿಂದ ಮಹಿಳೆಯರನ್ನು ಕರೆದೊಯ್ದು ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದರು. ಅದು ಅವಮಾನದ ಕಾಲವಾಗಿತ್ತು ಎಂದು ಗೋಪಾಲ್ ಹೇಳಿದರು.

ಆಕ್ರಮಣದಿಂದ ಮಹಿಳೆಯರು ಮತ್ತು ಹುಡುಗಿಯರನ್ನು ರಕ್ಷಿಸಲು ಅವರ ಮೇಲೆ ನಮ್ಮ ಸಮಾಜ ಹಲವಾರು ನಿರ್ಬಂಧಗಳನ್ನು ವಿಧಿಸಿತು. ಇದರ ಪರಿಣಾಮವಾಗಿ ಅವರು ಶಾಲೆಗಳು, ಗುರುಕುಲಗಳಿಗೆ ಹೋಗುವುದನ್ನು ನಿಲ್ಲಿಸಿದರು. ಆಕ್ರಮಣಕಾರರಿಂದ ರಕ್ಷಿಸಲು ಜನ ತಮ್ಮ ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹ ಮಾಡತೊಡಗಿದ್ದರಿಂದ ಬಾಲ್ಯ ವಿವಾಹ ಪ್ರಾರಂಭವಾಯಿತು. ನಮ್ಮ ದೇಶದಲ್ಲಿ ಸತಿ ಪದ್ಧತಿ ಇರಲಿಲ್ಲ. ಆದರೆ ಜೌಹರ್ (ಸ್ವಯಂ ದಹನ) ನಡೆಯಲಾರಂಭಿಸಿತು. ಮಹಿಳೆಯರು ಸತಿಯಾಗಲು ಪ್ರಾರಂಭಿಸಿದರು. ವಿಧವೆಯರ ಮರುವಿವಾಹದ ಮೇಲೆ ನಿರ್ಬಂಧಗಳನ್ನು ಹೇರಲಾಯಿತು. ಹೆಚ್ಚಿನ ಸಂಖ್ಯೆಯ ಪುರುಷರು ಯುದ್ಧಗಳಲ್ಲಿ ಕೊಲ್ಲಲ್ಪಟ್ಟರು, ಪರಿಣಾಮವಾಗಿ ಪುರುಷರ ಕೊರತೆಯುಂಟಾಯಿತು ಎಂದು ಅವರು ಹೇಳಿದರು.

ಇಸ್ಲಾಮಿಕ್ ಆಕ್ರಮಣದ ಮೊದಲು ನಮ್ಮ ಮಹಿಳೆಯರು ಶಾಸ್ತ್ರದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಇಂದು ಬೋರ್ಡ್ ಪರೀಕ್ಷೆಗಳಲ್ಲಿ ಹುಡುಗಿಯರು ಹುಡುಗರನ್ನು ಮೀರಿಸುತ್ತಿದ್ದಾರೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದರೂ, ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗದೆ ತಮ್ಮ ಮಕ್ಕಳಿಗೆ ಭಾರತೀಯ ಮೌಲ್ಯಗಳನ್ನು ವರ್ಗಾಯಿಸುವಂತೆ ಸಲಹೆ ನೀಡಿದರು.

ಮಹಿಳೆಯರು ಪಾಶ್ಚಿಮಾತ್ಯ ಪ್ರಭಾವದ ವಿರುದ್ಧ ಜಾಗರೂಕರಾಗಿರಬೇಕು. ತಂತ್ರಜ್ಞಾನವನ್ನು ಬಳಸಿ, ವಿಮಾನಗಳನ್ನು ಹಾರಿಸಿ, ಇಸ್ರೋದಲ್ಲಿ ಕೆಲಸ ಮಾಡಿ, ವಿಜ್ಞಾನಿ, ವೈದ್ಯ ಅಥವಾ ಇಂಜಿನಿಯರ್ ಆಗಿ- ನಿಮಗೆ ಇಷ್ಟವಾದದ್ದನ್ನು ಮಾಡಿ. ಆದರೆ ಮಹಿಳೆಯಾಗಿ ಉಳಿಯಿರಿ. ಮಹಿಳೆ ತನ್ನ ಕುಟುಂಬದ ಕೇಂದ್ರಬಿಂದು. ಅದನ್ನು ನೆನಪಿಡಿ. ಕುಟುಂಬವನ್ನು ನೋಡಿಕೊಳ್ಳುವುದು ಮತ್ತು ಅಡುಗೆಮನೆ ನಿರ್ವಹಿಸುವುದು ವೃತ್ತಿಜೀವನದಷ್ಟೇ ಮುಖ್ಯ ಎಂದು ಆರ್‌ಎಸ್‌ಎಸ್ ನಾಯಕ ಹೇಳಿದರು. “ನೆಹರೂಜಿ ಪ್ರಧಾನಿಯಾಗಿದ್ದಾಗ ಇಂದಿರಾಜಿ ಅವರ ಅಡುಗೆಮನೆಯನ್ನು ಸ್ವತಃ ನಿರ್ವಹಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ?” ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: Indira Gandhi: ಆರೆಸ್ಸೆಸ್‌ ನಾಯಕರ ಜತೆ ಉತ್ತಮ ಸಂಬಂಧ ಹೊಂದಿದ್ದ ಇಂದಿರಾ ಗಾಂಧಿ; ಈ ಪುಸ್ತಕದಲ್ಲಿ ಇನ್ನೇನಿದೆ?

Exit mobile version