ನವದೆಹಲಿ: ಸಪ್ತಪದಿ (Saptapadi Rituals) ಸೇರಿದಂತೆ ಇತರ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸದ ಹಿಂದೂ ವಿವಾಹವು (Hindu Marriage) ಊರ್ಜಿತವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court)ಹೇಳಿದೆ. ತನ್ನಿಂದ ದೂರವಾಗಿರುವ ಹೆಂಡತಿ, ನನಗೆ ವಿಚ್ಛೇದನ ನೀಡದೆಯೇ ಎರಡನೇ ಮದುವೆ ಮಾಡಿಕೊಂಡಿದ್ದಾಳೆ ಎಂದು ವ್ಯಕ್ತಿಯೊಬ್ಬ ಆರೋಪಿಸಿರುವ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಹಿಂದೂ ಧಾರ್ಮಿಕ ಪ್ರಕ್ರಿಯೆಗಳನ್ನು ಪೂರೈಸದ ಮದುವೆ ಅಪೂರ್ಣ ಎನಿಸಲಿದೆ ಎಂದು ಹೇಳಿದೆ(quashed the proceedings of a case).
ಮದುವೆಗೆ ಸಂಬಂಧಿಸಿದಂತೆ ಶಾಸ್ತ್ರೋಕ್ತ ಎಂದರೆ, ಮದುವೆಯ ಎಲ್ಲ ಧಾರ್ಮಿಕ ಪ್ರಕ್ರಿಯೆಗಳನ್ನು ಪೂರೈಸುವುದಾಗಿರುತ್ತದೆ. ಒಂದು ವೇಳೆ, ಸರಿಯಾದ ಅಥವಾ ಸೂಕ್ತ ಧಾರ್ಮಿಕ ಪ್ರಕ್ರಿಯೆಗಳನ್ನು ಆಚರಿಸದಿದ್ದರೆ ಅಂಥ ಮದುವೆಯನ್ನು ವಿಧಿವತ್ತಾದ ಅಥವಾ ಶಾಸ್ತ್ರೋಕ್ತ ಮದುವೆ ಎಂದು ಹೇಳಲಾಗದು ಎಂದು ಸ್ಮೃತಿ ಸಿಂಗ್ ಅವರು ಸಲ್ಲಿಸಿರುವ ಮನವಿಯನ್ನು ಮಾನ್ಯ ಮಾಡಿ ಹೈಕೋರ್ಟ್‌ನ ಜಸ್ಟೀಸ್ ಸಂಜಯ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಎರಡು ಪಕ್ಷಗಳಿಗೂ ಅನ್ವಯಿಸುವ ಕಾನೂನಿನ ಪ್ರಕಾರ, ಮದುವೆಯು ಮಾನ್ಯವಾದ ಮದುವೆಯಲ್ಲದಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಅದು ಮದುವೆಯಲ್ಲ. ಹಿಂದೂ ಕಾನೂನಿನ ಅಡಿಯಲ್ಲಿ ‘ಸಪ್ತಪದಿ’ ಸಮಾರಂಭವು ವಿವಾಹವನ್ನು ಸಿಂಧುಗೊಳಿಸುವ ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಹೇಳಲಾದ ಸಾಕ್ಷ್ಯಗಳ ಕೊರತೆಯಿದೆ ಎಂದು ನ್ಯಾಯಾಲಯವು ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.
ನ್ಯಾಯಾಲಯವು ಹಿಂದೂ ವಿವಾಹ ಕಾಯಿದೆ, 1955 ರ ಸೆಕ್ಷನ್ 7 ರ ಮೇಲೆ ಅವಲಂಬಿತವಾಗಿದ್ದು, ಇದು ಹಿಂದೂ ವಿವಾಹವನ್ನು ಯಾವುದೇ ಪಕ್ಷಗಳ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳುತ್ತದೆ. ಎರಡನೆಯದಾಗಿ, ಅಂತಹ ವಿಧಿಗಳು ಮತ್ತು ಸಮಾರಂಭಗಳಲ್ಲಿ ‘ಸಪ್ತಪದಿ’ (ಪವಿತ್ರ ಅಗ್ನಿಯ ಸುತ್ತಲೂ ವರ ಮತ್ತು ವಧು ಜಂಟಿಯಾಗಿ ಏಳು ಹೆಜ್ಜೆಗಳನ್ನು ಹಾಕುವುದು) ಕೂಡ ಸೇರಿದೆ. ವಧು-ವರರಿಬ್ಬರೂ ಏಳನೇ ಹೆಜ್ಜೆ ಇಟ್ಟಾಗ ಮದುವೆಯು ವಿಧಿಗಳು ಪೂರ್ಣಗೊಂಡಂತಾಗುತ್ತದೆ.
ಅರ್ಜಿದಾಳ ಆಗಿರುವ ಸ್ಮೃತಿ ಸಿಂಗ್ ಅವರು ಸತ್ಯಮ್ ಸಿಂಗ್ ಜತೆ 2027ರಲ್ಲಿ ವಿಧಿವತ್ತಾಗಿ ಮದುವೆಯಾಗಿದ್ದರು. ಆದರೆ, ಸಂಸಾರದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಗಂಡನ ಮನೆ ತೊರೆದ ಆಕೆ, ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆಕೆಯ ಗಂಡ ಮತ್ತು ಅತ್ತೆಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಈ ಸುದ್ದಿಯನ್ನೂ ಓದಿ: ಭಾರತೀಯ ಸಮಾಜದಲ್ಲಿ ಲಿವ್ ಇನ್ ರಿಲೇಷನ್‌ಶಿಪ್ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್
ಬಳಿಕ, ಸತ್ಯಂ ತನ್ನ ಪತ್ನಿಯ ವಿರುದ್ಧ ದ್ವಿಪತ್ನಿತ್ವದ ಆರೋಪ ಮಾಡಿ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರ ನೀಡಿದ್ದರು. ಈ ಅರ್ಜಿಯನ್ನು ಮಿರ್ಜಾಪುರದ ಪೊಲೀಸ್ ಅಧಿಕಾರಿ ಅವರು ಕೂಲಂಕಷವಾಗಿ ತನಿಖೆ ನಡೆಸಿದ್ದು, ಸ್ಮೃತಿ ವಿರುದ್ಧದ ದ್ವಿಪತ್ನಿತ್ವದ ಆರೋಪಗಳು ಸುಳ್ಳು ಎಂದು ಕಂಡುಬಂದಿದೆ ಎಂದು ವರದಿ ಸಲ್ಲಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದೇ ಗಂಡ ಸತ್ಯಮ್ ತಮ್ಮ ಪತ್ನಿ ಎರಡನೇ ಮದುವೆಯಾಗಿದ್ದಾರೆಂಬ ಆರೋಪಿಸಿ 2021, ಸೆಪ್ಟೆಂಬರ್ 20ರಂದು ಮಿರ್ಜಾಪುರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಮಿರ್ಜಾಪುರದ ಮ್ಯಾಜಿಸ್ಟ್ರೇಟ್ ಅವರು 2022ರ 21ರಂದು ಕೋರ್ಟ್‌ಗೆ ಹಾಜರಾಗುವಂತೆ ಸ್ಮೃತಿಗೆ ಸಮನ್ಸ್ ನೀಡಿದ್ದರು. ಈ ಸಮನ್ಸ್ ಆದೇಶ ಮತ್ತು ದೂರು ಪ್ರಕರಣದ ಸಂಪೂರ್ಣ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಸ್ಮೃತಿ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣ ವಿಚಾರಣೆ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಕೈ ಬಿಡುವಂತೆ ಸೂಚಿಸಿದೆ.