ಚೆನ್ನೈ: ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನಾಚರಣೆ-Valentine’s Day) ವಿರೋಧಿಸಿ ತಮಿಳುನಾಡಿನ ಶಿವಗಂಗಾ ಎಂಬಲ್ಲಿ ಅತ್ಯಂತ ವಿಚಿತ್ರವಾಗಿ ಪ್ರತಿಭಟನೆ ಮಾಡಲಾಗಿದೆ. ಹಿಂದು ಸಂಘಟನೆಯೊಂದು ಇಲ್ಲಿ ನಾಯಿಗಳಿಗೆ ಅಣುಕು ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನವನ್ನು ಅಣುಕಿಸಿದೆ. ವ್ಯಾಲೆಂಟೈನ್ಸ್ ಡೇ ಭಾರತದ ಸಂಸ್ಕೃತಿಯಲ್ಲ ಎಂದು ಪ್ರತಿಪಾದಿಸಿದೆ.
ಪ್ರೇಮಿಗಳ ದಿನಾಚರಣೆಯನ್ನು ಭಾರತದಲ್ಲಿ ಹಲವು ಬಲಪಂಥೀಯ ಸಂಘಟನೆಗಳು ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿವೆ. ಪ್ರತಿವರ್ಷವೂ ಈ ದಿನ ಅವರು ಪ್ರತಿಭಟನೆ ನಡೆಸಿ, ಪ್ರೇಮಿಗಳ ದಿನಾಚರಣೆಯನ್ನು ಭಾರತದಲ್ಲಿ ನಿಷೇಧಿಸಬೇಕು ಎಂಬ ಆಗ್ರಹ ಮಾಡುತ್ತಾರೆ. ಪ್ರಸಕ್ತ ಬಾರಿ ತಮಿಳುನಾಡಿನಲ್ಲಿ ಹಿಂದು ಮುನ್ನಾನಿ ಸಂಘಟನೆಯ ಸದಸ್ಯರು ನಾಯಿಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನವನ್ನು ವಿರೋಧಿಸಿದ್ದಾರೆ.
ಎರಡು ಶ್ವಾನಗಳನ್ನು ಹಿಡಿದು ತಂದ ಹಿಂದು ಸಂಘಟನೆ ಕಾರ್ಯಕರ್ತರು ಆ ಪ್ರಾಣಿಗಳಿಗೆ ಬಟ್ಟೆ ಹಾಕಿದ್ದಾರೆ. ಮಾಲೆಯನ್ನೂ ತೊಡಿಸಿ, ಹಣೆಗೆ ಕುಂಕುಮ ಇಡಿಸಿದ್ದಾರೆ. ಆ ನಾಯಿಗಳಿಗೆ ಸಾಂಕೇತಿಕವಾಗಿ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: Valentines Day Colours Fashion: ವ್ಯಾಲೆಂಟೈನ್ಸ್ ಡೇ ವಿಶೇಷ ಬಣ್ಣಗಳಲ್ಲಿ ಲಗ್ಗೆ ಇಟ್ಟ ಟ್ರೆಂಡಿ ಫ್ಯಾಷನ್‌ವೇರ್ಸ್
ಪ್ರೇಮಿಗಳು ಈ ವ್ಯಾಲೆಂಟೈನ್ಸ್ ಡೇ ದಿನದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಅನುಚಿತವಾಗಿ ನಡವಳಿಕೆ ತೋರಿಸುತ್ತಾರೆ. ಅದನ್ನು ವಿರೋಧಿಸುವ ಸಲುವಾಗಿಯೇ ನಾವು ಶ್ವಾನಗಳಿಗೆ ವಿವಾಹ ಮಾಡಿಸಿದ್ದೇವೆ ಎಂದು ಸಂಘಟನೆ ಹೇಳಿಕೊಂಡಿದೆ.