ಶ್ರೀನಗರ: ಹಿಂದುತ್ವ ಹಾಗೂ ಇಸ್ಲಾಂ ಕುರಿತು ಡೆಮಾಕ್ರಸಿ ಪ್ರೊಗ್ರೆಸ್ಸಿವ್ ಆಜಾದ್ ಪಕ್ಷದ ಮುಖ್ಯಸ್ಥ, ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಮಹತ್ವದ ಹೇಳಿಕೆ ನೀಡಿದ್ದಾರೆ. “ಇಸ್ಲಾಂಗಿಂತ (Islam) ಹಿಂದು ಧರ್ಮವು ಪುರಾತನ ಇತಿಹಾಸ ಹೊಂದಿದೆ. ಭಾರತದಲ್ಲಿರುವ ಮುಸ್ಲಿಮರು (Muslims) ಮೊದಲು ಹಿಂದುಗಳಾಗಿದ್ದರು, ಅವರನ್ನು ಮತಾಂತರಗೊಳಿಸಿ ಮುಸ್ಲಿಮರನ್ನಾಗಿ ಮಾಡಲಾಗಿದೆ” ಎಂದು ಅವರು ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.
ಜಮ್ಮು-ಕಾಶ್ಮೀರದ ದೋಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಲವು ವಿಷಯ ಪ್ರಸ್ತಾಪಿಸಿದರು. “ನಾವು ಹಿಂದುಗಳು, ಮುಸ್ಲಿಮರು, ದಲಿತರ ಹಾಗೂ ಕಾಶ್ಮೀರಿಗರಿಗಾಗಿ ರಾಜ್ಯವನ್ನು ನಿರ್ಮಿಸಿದ್ದೇವೆ. ಯಾರೂ ಹೊರಗಿನಿಂದ ಇಲ್ಲಿಗೆ ಬಂದಿಲ್ಲ. ಸಂಸತ್ತಿನಲ್ಲಿ ನಮ್ಮ ಸಂಸದರೊಬ್ಬರು ಕಾಶ್ಮೀರಕ್ಕೆ ಹೊರಗಿನಿಂದ ಬಂದವರ ಕುರಿತು ಮಾತನಾಡಿದರು. ಆದರೆ, ನಾನು ಅದನ್ನು ನಿರಾಕರಿಸಿದೆ. ಇಸ್ಲಾಂ ಕೇವಲ 1,500 ವರ್ಷದ ಇತಿಹಾಸ ಹೊಂದಿದೆ. ಆದರೆ, ಹಿಂದುತ್ವವು ಇದಕ್ಕಿಂತ ತುಂಬ ಹಳೆಯದು” ಎಂದು ಹೇಳಿದರು.
ಗುಲಾಂ ನಬಿ ಆಜಾದ್ ಭಾಷಣದ ವಿಡಿಯೊ
ಕಾಶ್ಮೀರದಲ್ಲೂ ಹಿಂದುಗಳ ಮತಾಂತರ
“ಮೊಘಲರ ಅವಧಿಯಲ್ಲಿ 10-20 ಜನ ಮಾತ್ರ ಹೊರಗಿನಿಂದ ಕಾಶ್ಮೀರಕ್ಕೆ ಬಂದಿರಬಹುದು. ಕಾಶ್ಮೀರದಲ್ಲಿರುವ ಮುಸ್ಲಿಮರೆಲ್ಲರೂ ಹಿಂದು ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು. ಭಾರತದಲ್ಲಿರುವ ಮುಸ್ಲಿಮರು ಹಿಂದುಗಳೇ ಆಗಿದ್ದರು. ಈಗಿನ ಮುಸ್ಲಿಮರೆಲ್ಲರೂ ಮೊದಲು ಹಿಂದುಗಳಾಗಿದ್ದರು. ಕಾಶ್ಮೀರದಲ್ಲೂ ಇದೇ ಆಗಿದೆ. ಕಾಶ್ಮೀರಿ ಪಂಡಿತರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ” ಎಂದು ಗುಲಾಂ ನಬಿ ಆಜಾದ್ ತಿಳಿಸಿದರು. ಇವರು ಮಾಡಿದ ಭಾಷಣದ ವಿಡಿಯೊ ಈಗ ವೈರಲ್ ಆಗಿದೆ. ಹಾಗೆಯೇ, ಪರ-ವಿರೋಧ ಚರ್ಚೆಗಳು ಕೂಡ ಶುರುವಾಗಿವೆ.
ಇದನ್ನೂ ಓದಿ: ರಾಹುಲ್ ಗಾಂಧಿ ನಾಯಕನೇ ಅಲ್ಲ, ಅವರಿಗೆ ಜನಬೆಂಬಲವೇ ಇಲ್ಲ: ಗುಲಾಂ ನಬಿ ಆಜಾದ್ ಟೀಕೆ; ಅವರ ಹೊಸ ಪುಸ್ತಕದಲ್ಲೇನಿದೆ?
“ಕಾಶ್ಮೀರದಲ್ಲಿ 600 ವರ್ಷಗಳ ಹಿಂದೆ ಮುಸ್ಲಿಮರು ಎಲ್ಲಿದ್ದರು? ಕಣಿವೆಯಲ್ಲಿ ಇದ್ದವರೆಲ್ಲ ಕಾಶ್ಮೀರಿ ಪಂಡಿತರೇ ಆಗಿದ್ದರು. ಅಂದರೆ, ಈಗಿರುವ ಮುಸ್ಲಿಮರು ಮೊದಲು ಕಾಶ್ಮೀರಿ ಪಂಡಿತರೇ ಆಗಿದ್ದರು. ಹಾಗಾಗಿ, ಇಲ್ಲಿನ ಮುಸ್ಲಿಮರ ಮೂಲ ಹಿಂದು ಧರ್ಮವೇ ಆಗಿತ್ತು. ಹಿಂದು ಧರ್ಮದ ಆಧಾರದ ಮೇಲೆಯೇ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಇದೆ. ಹಾಗಾಗಿ, ನಮ್ಮ ಮೂಲ ಹಿಂದು ಧರ್ಮವೇ ಆಗಿದೆ” ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.