ಗುವಾಹಟಿ: ಹಿಂದುಗಳು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮುಸ್ಲಿಮರಂತೆ ಕಡಿಮೆ ವಯಸ್ಸಿಗೇ ಮದುವೆಯಾಗಬೇಕು ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಅಸ್ಸಾಂ ಸಂಸದ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಅಧ್ಯಕ್ಷ ಮೌಲಾನಾ ಬದ್ರುದ್ದೀನ್ ಅಜ್ಮಲ್ ಈಗ ಲವ್ ಜಿಹಾದ್ (Love Jihad) ಕುರಿತೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಹಿಂದುಗಳೂ ಲವ್ ಜಿಹಾದ್‌ನಲ್ಲಿ ತೊಡಗಬೇಕು” ಎಂದು ಕರೆ ನೀಡಿದ್ದು, ಬಿಜೆಪಿ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರದ್ಧಾ ವಾಳ್ಕರ್ ಕೊಲೆ ಪ್ರಕರಣದಲ್ಲಿ ಲವ್ ಜಿಹಾದ್ ಇದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅಜ್ಮಲ್, “ಹಿಮಂತ ಬಿಸ್ವಾ ಶರ್ಮಾ ಅವರು ದೇಶದ ದೊಡ್ಡ ನಾಯಕರಾಗಿದ್ದಾರೆ. ಅಷ್ಟಕ್ಕೂ, ಹಿಂದುಗಳನ್ನು ತಡೆಯುತ್ತಿರುವವರು ಯಾರು? ಅವರೂ ಲವ್ ಜಿಹಾದ್‌ನಲ್ಲಿ ತೊಡಗಿಸಿಕೊಳ್ಳಲಿ. ಮೂರ್ನಾಲ್ಕು ಮುಸ್ಲಿಂ ಹೆಣ್ಣುಮಕ್ಕಳನ್ನು ಹೊತ್ತುಕೊಂಡು ಹೋಗಲಿ. ಇದಕ್ಕೆ ನಾವೇನೂ ಹೋರಾಟ ಮಾಡುವುದಿಲ್ಲ” ಎಂದಿದ್ದಾರೆ.
ಅಜ್ಮಲ್ ಹೇಳಿಕೆಗೆ ಬಿಜೆಪಿ ಶಾಸಕ ಡಿ ಕಲಿತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅಜ್ಮಲ್ ಅವರು ತಮ್ಮ ತಾಯಿ ಹಾಗೂ ಸಹೋದರಿಗೇ ಅವಮಾನ ಮಾಡಿದ್ದಾರೆ. ಅವರ ಘನತೆಗೆ ಧಕ್ಕೆ ತಂದಿದ್ದಾರೆ. ನಾನು ಇಂತಹ ಹೇಳಿಕೆಯನ್ನು ಖಂಡಿಸುತ್ತೇನೆ. ಹಿಂದುಗಳೂ ಇದನ್ನು ಸ್ವೀಕರಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Muslim Formula | ಜನಸಂಖ್ಯೆ ಹೆಚ್ಚಳದಲ್ಲಿ ಮುಸ್ಲಿಮರಿಗಿಂತ ಹಿಂದುಗಳು ಹಿಂದೆ, ಅಸ್ಸಾಂ ಸಂಸದ ಮೌಲಾನಾ ವಿವಾದ