Site icon Vistara News

Himanta Sarma: ಹಿಂದು ಅಲ್ಲ, ಆ ಒಂದು ಧರ್ಮದಿಂದ ಕೋಮುವಾದ ಸೃಷ್ಟಿ ಎಂದ ಹಿಮಂತ ಶರ್ಮಾ! ಯಾವುದದು?

Himanta Sarma

Hindus Don't Indulge In Communalism, Only One Religion Does That; Says Himanta Biswa Sarma

ದಿಸ್ಪುರ: ಅಬ್ಬರದ ಭಾಷಣ, ನೇರ ನುಡಿಗಳಿಂದ ಸುದ್ದಿಯಲ್ಲಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Sarma) ಈಗ ಕೋಮುವಾದದ ಕುರಿತು ಹೇಳಿಕೆ ನೀಡಿದ್ದಾರೆ. “ಹಿಂದುಗಳಿಂದ ದೇಶದಲ್ಲಿ ಕೋಮುವಾದ ಸೃಷ್ಟಿಯಾಗುವುದಿಲ್ಲ. ದೇಶದಲ್ಲಿ ಬಾಂಗ್ಲಾದೇಶ (Bangladesh) ಮೂಲದ ಧರ್ಮವು (ಇಸ್ಲಾಂ) ಕೋಮುವಾದ (Communalism) ಸೃಷ್ಟಿಸುತ್ತದೆ. ಇದಕ್ಕೆ ಲೋಕಸಭೆ ಚುನಾವಣೆಯೇ ಸಾಕ್ಷಿಯಾಗಿದೆ” ಎಂದು ಅವರು ಹೇಳಿದ್ದಾರೆ. ಅಸ್ಸಾಂನಲ್ಲಿ ಯಾವ ಧರ್ಮದವರು ಯಾವ ಪಕ್ಷಕ್ಕೆ ಮತ ನೀಡಿದ್ದಾರೆ ಎಂಬುದನ್ನು ವಿಶ್ಲೇಷಿಸುತ್ತ ಅವರು ಹೀಗೆ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಸನ್ಮಾನಿಸುವ ದಿಸೆಯಲ್ಲಿ ಗುವಾಹಟಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಅಸ್ಸಾಂನಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳು ಸೇರಿ ಶೇ.47ರಷ್ಟು ಮತಗಳನ್ನು ಪಡೆದಿವೆ. ಇನ್ನು ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳು ಶೇ.39ರಷ್ಟು ಮತಗಳನ್ನು ಗಳಿಸಿವೆ. ಅಲ್ಪಸಂಖ್ಯಾತರೇ ಜಾಸ್ತಿ ಇರುವ 21 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಇಲ್ಲೆಲ್ಲ ಬಿಜೆಪಿಯು ಶೇ.3ರಷ್ಟು ಮತಗಳನ್ನು ಮಾತ್ರ ಪಡೆದುಕೊಂಡಿದೆ. ಇದರಿಂದಾಗಿ ಯಾವ ಒಂದು ಧರ್ಮವು ಕೋಮುವಾದವನ್ನು ಸೃಷ್ಟಿಸುತ್ತದೆ, ಅದಕ್ಕೆ ಮಾತ್ರ ಬೆಂಬಲ ನೀಡುತ್ತದೆ” ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

“ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತ ಸಮುದಾಯದವರ ಶೇ.99ರಷ್ಟು ಮತಗಳು ಕಾಂಗ್ರೆಸ್‌ಗೆ ಹೋಗುತ್ತವೆ. ಅಲ್ಪಸಂಖ್ಯಾತರು ಜಾಸ್ತಿ ಇರುವ ಕಡೆ ಕಾಂಗ್ರೆಸ್‌ ಗೆಲ್ಲುತ್ತದೆ. ಅಲ್ಪಸಂಖ್ಯಾತರೇ ಹೆಚ್ಚಿರುವ ಪ್ರದೇಶಗಳಲ್ಲಿ ರಸ್ತೆ ಇರುವುದಿಲ್ಲ, ವಿದ್ಯುತ್‌ ಇರುವುದಿಲ್ಲ. ಆದರೂ, ಅವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಆದರೆ, ಬಿಜೆಪಿಯು ಅಸ್ಸಾಂನ ಎಲ್ಲ ಜನರ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಕೇಂದ್ರದ ಯೋಜನೆಗಳೂ ಅಸ್ಸಾಂ ಜನರನ್ನು ತಲುಪಿವೆ. ಅಲ್ಲಿಗೆ, ಕೋಮುವಾದವನ್ನು ಸೃಷ್ಟಿಸುವ ಆ ಒಂದು ಧರ್ಮ ಯಾವುದು ಎಂಬುದು ಗೊತ್ತಾಯ್ತಲ್ಲ” ಎಂದು ತಿಳಿಸಿದರು.

“ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತ ಸಮುದಾಯದವರು ಪ್ರಬಲರಾಗಲು, ರಾಜ್ಯದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದಾರೆ. ಅಸ್ಸಾಂಅನ್ನು ಇನ್ನೂ 10 ವರ್ಷ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಅವರ ಉದ್ದೇಶವಾಗಿದೆ. ಇವರೇ ಪೊಲೀಸ್‌ ಠಾಣೆಗಳ ಮೇಲೆ ದಾಳಿ ಮಾಡುತ್ತಾರೆ. ಕೋಮುವಾದವನ್ನು ಹಬ್ಬಿಸುತ್ತಾರೆ. ಭೂಮಿಯನ್ನು ಅಕ್ರಮವಾಗಿ ಕಬಳಿಸುತ್ತಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರದಿದ್ದರೆ, ಇವರು ಬೇರೆ ಸಮುದಾಯದವರ ಮೇಲೆ ಎಷ್ಟು ಬಾರಿ ದಾಳಿ ಮಾಡುತ್ತಿದ್ದರೋ” ಎಂಬುದಾಗಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಸ್ಸಾಂನ 14 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 11 ಹಾಗೂ 3 ಕ್ಷೇತ್ರಗಳನ್ನು ಕಾಂಗ್ರೆಸ್‌ ವಶಪಡಿಸಿಕೊಂಡಿದೆ.

Exit mobile version