ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪಂಡಿತರನ್ನು (Kashmiri Pandit) ಗುರಿಯಾಗಿಸಿ ದಾಳಿ ಮುಂದುವರಿದಿದೆ. ಶನಿವಾರವಷ್ಟೇ ಪೂರನ್ ಕ್ರಿಶನ್ ಭಟ್ ಎಂಬ ಪಂಡಿತರೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಸುರಕ್ಷತೆ ಬಗ್ಗೆ ಕ್ರಿಶನ್ ಭಟ್ ಅವರ ಸಹೋದರಿ ನೀಲಮ್ ಅವರು ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. “ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷತೆಯಿಂದ ಇಲ್ಲ. ಉಗ್ರರು ಒಬ್ಬನೇ ಒಬ್ಬ ಕಾಶ್ಮೀರಿ ಪಂಡಿತನನ್ನು ಉಳಿಸುವುದಿಲ್ಲ” ಎಂದು ಹೇಳಿದ್ದಾರೆ. ಆ ಮೂಲಕ ಕಣಿವೆಯಲ್ಲಿ ಪಂಡಿತರ ಸ್ಥಿತಿ ಹೇಗಿದೆ ಎಂಬುದು ಬಹಿರಂಗಪಡಿಸಿದ್ದಾರೆ.
“ಹಿಂದೂಗಳನ್ನು ಹತ್ಯೆ ಮಾಡಲು ಉಗ್ರರು ಇನ್ನಿಲ್ಲದ ಯೋಜನೆ ರೂಪಿಸುತ್ತಿದ್ದಾರೆ. ಕಣಿವೆಯಲ್ಲಿ ಪಂಡಿತರಿಗೆ ಸುರಕ್ಷತೆ ಮರೀಚಿಕೆಯಾಗಿದೆ. ಶಾಲೆ, ಕಚೇರಿಗಳಿಗೆ ನುಗ್ಗಿ ಹತ್ಯೆ ಮಾಡುತ್ತಿದ್ದಾರೆ. ಹಾಗಾಗಿ, ಹಿಂದೂಗಳು ಕಾಶ್ಮೀರವನ್ನು ತೊರೆಯುವುದೇ ಜೀವ ಉಳಿಸಿಕೊಳ್ಳಲು ಇರುವ ಮಾರ್ಗವಾಗಿದೆ. ಉಗ್ರರು ಒಬ್ಬ ಪಂಡಿತನನ್ನೂ ಉಳಿಸುವುದಿಲ್ಲ” ಎಂದು ಹೇಳಿದ್ದಾರೆ.
ಆಕ್ರೋಶದ ಮಧ್ಯೆ ಅಂತ್ಯಸಂಸ್ಕಾರ
ಕಾಶ್ಮೀರದಲ್ಲಿ ಹತ್ಯೆಗೀಡಾದ ಪೂರನ್ ಕ್ರಿಶನ್ ಭಟ್ ಅವರ ಅಂತ್ಯಕ್ರಿಯೆಯು ಜಮ್ಮುವಿನಲ್ಲಿ ನೆರವೇರಿದೆ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಹತ್ಯೆ ನಡೆಯುತ್ತಿರುವುದರ ವಿರುದ್ಧ ಘೋಷಣೆ, ಆಕ್ರೋಶ ವ್ಯಕ್ತಪಡಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ೫೬ ವರ್ಷದ ಪೂರನ್ ಕ್ರಿಶನ್ ಭಟ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇದನ್ನೂ ಓದಿ | ಉಗ್ರರ ದಾಳಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ ಬಲಿ; ಮನೆ ಬಾಗಿಲಿಗೇ ಬಂದು ಗುಂಡಿಟ್ಟ ಭಯೋತ್ಪಾದಕರು