Site icon Vistara News

Yoga Day 2023: ವೇದಪೂರ್ವ ಕಾಲದಲ್ಲೂ ಇತ್ತು ಯೋಗ! ಇಲ್ಲಿದೆ ಯೋಗದ ಇತಿಹಾಸ

Yoga Pose

-ಅಲಕಾ ಕೆ. ಮೈಸೂರು
ಯೋಗವೆಂಬುದನ್ನು (Yoga Day 2023) ಪ್ರತ್ಯೇಕವಾಗಿ ಗುರುತಿಸದೆಯೂ, ದೇಹ ಮತ್ತು ಮನಸ್ಸುಗಳು ಒಂದಾಗಿ ಸಾಗುವ ಬಗ್ಗೆ ಪ್ರಾಚೀನ ಜನರಿಗೆ ಸ್ಪಷ್ಟ ಕಲ್ಪನೆಯಿತ್ತು. ಆದರೆ ಇಂದು, ರೋಗಗಳ ಚಿಕಿತ್ಸೆಗೆ ಬಳಕೆಯಾಗುತ್ತಿರುವ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಮತ್ತು ಮಾನಸಿಕ ಒತ್ತಡ ಶಮನ ಮಾಡುವ ಮಾರ್ಗವಾಗಿ ಮಾತ್ರ ಯೋಗ ಉಪಯೋಗವಾಗುತ್ತಿದೆ. ನಿಜಕ್ಕೂ ಯೋಗವೆಂದರೆ ವಿಶ್ವದೊಂದಿಗೆ, ಸಮಷ್ಟಿಯ ಜೊತೆಗೆ ಒಂದಾಗಿ ಬದುಕುವುದು. ಆಗ ಮಾತ್ರ ದೇಹ, ಮನಸ್ಸು ಮತ್ತು ಚೈತನ್ಯಗಳು ಸಮನ್ವಯಗೊಳ್ಳುವುದಕ್ಕೆ, ಆರೋಗ್ಯ ಮತ್ತು ಆನಂದದಿಂದ ಬದುಕುವುದಕ್ಕೆ ಸಾಧ್ಯ. ಈ ಹಿನ್ನೆಲೆಯಲ್ಲಿ, ಜೂನ್‌ ತಿಂಗಳ ೨೧ರಂದು ವಿ‍ಶ್ವದೆಲ್ಲೆಡೆ ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನ ಮಹತ್ವ ಪಡೆದಿದೆ.

ʻಯೋಗʼ ಎನ್ನುತ್ತಿದ್ದಂತೆ ಅಭ್ಯಾಸಿಗಳು ಸಾಮಾನ್ಯರಿಗೆ ಅಸಾಧ್ಯವಾದ ಭಂಗಿಗಳಲ್ಲಿ ತಲ್ಲೀನರಾದ ಚಿತ್ರವೊಂದು ಕಣ್ಮುಂದೆ ಬರಬಹುದು. ಎಷ್ಟೋ ವರ್ಷಗಳ ಅಭ್ಯಾಸವೋ ಅಥವಾ ಬಿಲ್ಲಿನಂತೆ ಹೇಗೆಂದರೆ ಹಾಗೆ ಬಗ್ಗಿಸಬಲ್ಲಂಥ ದೇಹವೋ ಇದ್ದರೆ ಯೋಗ ಮಾಡಲಾದೀತು ಎಂಬ ಹಿಂಜರಿಕೆಯೂ ಮನಸ್ಸಿಗೆ ಬಂದರೆ ಅಚ್ಚರಿಯಿಲ್ಲ. ಹಾಗಿದ್ದೂ, ದೇಹ ಮತ್ತು ಮನಸ್ಸಿಗೆ ಪುನಶ್ಚೇತನ ನೀಡುವ ಕ್ರಿಯೆಯಾಗಿ ಎಲ್ಲೆಡೆ ಯೋಗ ಪ್ರಚಲಿತದಲ್ಲಿದೆ. ನಿತ್ಯದ ಬದುಕಿನಲ್ಲಿ ಕೆಲವೇ ನಿಮಿಷಗಳ ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸದಿಂದ ಬದುಕು ಬದಲಾದ ಕಥೆಗಳು ಎಲ್ಲೆಡೆಯಿಂದ ಕೇಳುತ್ತವೆ. ಹಾಗಾದರೆ, ಯೋಗ ಎಂದರೆ ʻಮಾಡಲಸಾಧ್ಯʼ ಎಂಬಂಥ ಭಂಗಿಗಳಿಗಿಂತ ಮಿಗಿಲಾದ್ದು ಏನೋ ಇರಬೇಕಲ್ಲವೇ?

Yoga Day 2023: ಏನು ಯೋಗವೆಂದರೆ?

ಯೋಗವೆಂದರೆ ಆಸನಗಳು ಮಾತ್ರವಲ್ಲ; ಆದರೆ ಆಸನಗಳೂ ಹೌದು! ಕಳೆದ ಕೆಲವು ದಶಕಗಳಿಂದ ಇದ್ದಕ್ಕಿದ್ದಂತೆ ಏರಿರುವ, ಎಂದಾದರೂ ಇಳಿಯಬಹುದಾದ, ಜನಪ್ರಿಯ ಅಲೆಯಲ್ಲವಿದು. ಹಲವು ಸಹಸ್ರಮಾನಗಳಿಂದ ಚಾಲ್ತಿಯಲ್ಲಿರುವ ಸರಳ ಜೀವನಾಭ್ಯಾಸವಿದು. ಹಾಗೆಂದೇ ಜಗತ್ತಿನ ಮೂಲೆಮೂಲೆಗಳಿಂದ ಆಸಕ್ತರು ಈ ಅಭ್ಯಾಸದೆಡೆಗೆ ಉತ್ಸುಕರಾಗಿದ್ದಾರೆ. ಆದರೂ ಯೋಗವೆಂದರೇನು ಎಂಬುದು ಸ್ಪಷ್ಟವಾಗಲಿಲ್ಲ ಅಲ್ಲವೇ?

ಸಂಸ್ಕೃತದ ʻಯುಜ್‌ʼ ಎಂಬ ಪದದಿಂದ ಹುಟ್ಟಿದ್ದು ಯೋಗ. ಯುಜ್‌ ಎಂದರೆ ಸೇರುವುದು, ಜೊತೆಯಾಗುವುದು ಎಂದರ್ಥ. ಅಂದರೆ, ಭಂಗಿಗಳಲ್ಲಿ ಬಗ್ಗುವಾಗ ಮಂಡಿಯನ್ನು ಮೂಗು ತಾಗುವಂಥ ಭೌತಿಕ ಸೇರುವಿಕೆಯ ಬಗ್ಗೆ ಅಲ್ಲ ಇಲ್ಲಿ ಹೇಳುತ್ತಿರುವುದು! ದೇಹ ಮತ್ತು ಮನಸ್ಸುಗಳು ಒಂದಾಗುವ ಬಗ್ಗೆ, ಅಭ್ಯಾಸಿಗಳು ತಮ್ಮ ಸುತ್ತಲಿನ ಪರಿಸರದಲ್ಲಿ ಲೀನವಾಗುವ ಬಗ್ಗೆ, ವ್ಯಕ್ತಿಗತ ಪ್ರಜ್ಞೆಯು ವಿಶ್ವ ಪ್ರಜ್ಞೆಯಲ್ಲಿ ಸಂಗಮಿಸುವ ಬಗ್ಗೆ ಈ ʻಯುಜ್‌ʼ ಎನ್ನುವ ಶಬ್ದ ಸೂಚಿಸುತ್ತದೆ. ಇನ್ನೀಗ ಯೋಗದ ಇತಿಹಾಸವನ್ನು ಪರಾಂಬರಿಸೋಣ.

ವೇದಪೂರ್ವ ಮತ್ತು ವೇದಕಾಲ

ʻಯೋಗʼ ಎನ್ನುವ ಪದದ ಮೊದಲ ಉಲ್ಲೇಖ ದೊರೆಯುವುದು ಪ್ರಾಚೀನವಾದ ಋಗ್ವೇದದಲ್ಲಿ. ಇದು ದೊರೆತ ಕಾಲಘಟ್ಟ ಸುಮಾರು ಕ್ರಿಸ್ತಪೂರ್ವ 1500 ವರ್ಷಗಳು! ಕ್ರಿ.ಪೂ. 1200-1000 ಕಾಲದಲ್ಲಿ ಬರೆಯಲಾಗಿದ್ದೆಂದು ಹೇಳಲಾಗುವ ಅಥರ್ವ ವೇದದಲ್ಲಿ ಉಸಿರಾಟದ ಮೇಲೆ ಹಿಡಿತ ಹೊಂದುವ ಮಹತ್ವದ ಬಗ್ಗೆ ತಿಳಿಸಲಾಗಿದೆ. ಆದಾಗ್ಯೂ ಈ ಉಲ್ಲೇಖಗಳ ನಿಖರ ಕಾಲವನ್ನು ಹೇಳುವುದು ಕಷ್ಟ. ಏಕೆಂದರೆ, ಜ್ಞಾನ ಬಾಯಿಂದ ಬಾಯಿಗೆ ಹರಿದು ಬರುತ್ತಿದ್ದ ಅತ್ಯಂತ ಪ್ರಾಚೀನ ಕಾಲದಲ್ಲೇ ವೇದಗಳು ಮತ್ತು ಅದರಲ್ಲಿ ಯೋಗದ ಉಲ್ಲೇಖ ರಚನೆಗೊಂಡಿದ್ದಿರಬಹುದು. ಕ್ರಿ.ಪೂ. 2700 ಕಾಲದ ಸಿಂಧೂ ಕಣಿವೆಯ ನಾಗರಿಕತೆಯಲ್ಲೂ ಯೋಗ ಪ್ರಯೋಗದಲ್ಲಿದ್ದ ಚಿಹ್ನೆಗಳು ದೊರೆತಿವೆ ಎಂಬಲ್ಲಿಗೆ, ನಾಗರಿಕತೆಯ ಆರಂಭದಿಂದಲೇ ಯೋಗ ಅಭ್ಯಾಸದಲ್ಲಿದೆ ಎನ್ನಬಹುದು.

ಉಪನಿಷತ್ ಕಾಲ

ವೇದಗಳಲ್ಲಿ ಹುದುಗಿರುವ ಜ್ಞಾನವನ್ನು ಜಗತ್ತಿಗೆ ಸಾರಿದ ಉಪನಿಷದ್ಗಳು ರಚನೆಗೊಂಡ ಕಾಲವಿದು. ದೇಹ, ಮನಸ್ಸು ಮತ್ತು ಆತ್ಮದ ಕಾರ್ಯವೈಖರಿಯನ್ನು ಬೋಧನೆಯ ಮೂಲಕ ತಿಳಿಸುವ ಪ್ರಯತ್ನವನ್ನಿಲ್ಲಿ ಕಾಣಬಹುದು. ಜ್ಞಾನೋದಯದೆಡೆಗೆ ಸಾಗುವಲ್ಲಿ ಧ್ಯಾನ ಮತ್ತು ಮಂತ್ರೋಚ್ಚಾರಗಳು ಸಹಕಾರಿ ಎನ್ನುತ್ತವೆ. ಇರುವಂಥ 108 ಉಪನಿಷತ್ತುಗಳ ಪೈಕಿ 20 ಯೋಗ ಉಪನಿಷತ್ತುಗಳು. ಇದರಲ್ಲಿ ಹಲವು ರೀತಿಯ ಯೋಗಾಭ್ಯಾಸಗಳು, ಪ್ರಾಣಾಯಾಮ, ಶಬ್ದ, ಧ್ಯಾನ ಮುಂತಾದವುಗಳನ್ನು ವಿವರಿಸಲಾಗಿದೆ.

ಶಾಸ್ತ್ರೀಯ ಕಾಲ (ಕ್ರಿ.ಪೂ. 500ರಿಂದ ಕ್ರಿ.ಶ 800): ಈ ಕಾಲದಲ್ಲಿ, ಬುದ್ಧ ಮತ್ತು ಮಹಾವೀರರ ಉಪದೇಶಗಳು ಯೋಗಸಾಧನೆಯ ಮೆಟ್ಟಿಲೆನಿಸಿದವು. ಧ್ಯಾನದ ಮೂಲಕ ಕೈವಲ್ಯ ಸಾಧನೆಯ ಬಗ್ಗೆ ಮಹಾವೀರ ಹೇಳಿದರೆ, ಜ್ಞಾನಸಾಧನೆಗಾಗಿ ಯೋಗಾಸನ ಮತ್ತು ಧ್ಯಾನದ ಅವಲಂಬನೆಯ ಬಗ್ಗೆ ಬುದ್ಧ ಹೇಳಿದ.

ಭಗವದ್ಗೀತೆ ರಚನೆಗೊಂಡಿದ್ದೂ ಈ ಕಾಲಘಟ್ಟದಲ್ಲಿ. ವಿಶ್ವಪ್ರಜ್ಞೆಯಾದ ಕೃಷ್ಣ ಮತ್ತು ವ್ಯಕ್ತಿಗತ ಪ್ರಜ್ಞೆಯಾದ ಅರ್ಜುನನ ನಡುವಿನ ಸಂಭಾಷಣೆಯ ರೂಪದಲ್ಲಿದು ರಚಿತವಾಗಿದೆ. ಇಲ್ಲಿ ಧರ್ಮ, ಕರ್ಮಯೋಗ, ಭಕ್ತಿ ಯೋಗ ಮತ್ತು ಜ್ಞಾನಯೋಗಗಳನ್ನು ವಿಸ್ತರಿಸಲಾಗಿದೆ. “ಸಮತ್ವಂ ಯೋಗ ಉಚ್ಯತೆ” ಅಂದರೆ ಸಮಚಿತ್ತತೆ ಎನ್ನುವುದು ಯೋಗದ ಲಕ್ಷಣ ಎನ್ನುತ್ತದೆ ಗೀತೆ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಸ್ಥಿರಚಿತ್ತದಿಂದ ಇರುವ ಸಾಮರ್ಥ್ಯವನ್ನು ಯೋಗ ಎನ್ನಬಹುದು. ಸಂತಸದಾಯಕ ಮತ್ತು ಸಮನ್ವಯಭರಿತ ಪ್ರವೃತ್ತಿಗೆ ಮೂಲ ಪ್ರವೃತ್ತಿಗೆ ನಮ್ಮನ್ನು ಕರೆದೊಯ್ಯುವುದನ್ನು ಯೋಗ ಎನ್ನಬಹುದು. ಮಹಾಭಾರತದಲ್ಲಿ ಉಲ್ಲೇಖವಾದ ಕೆಲವು ಶಬ್ದಗಳು, ಅಂದರೆ ವಿಚಾರ, ವಿವೇಕ ಮುಂತಾದವು, ಋಷಿವರ್ಯ ಪತಂಜಲಿಯಿಂದಲೂ ವಿವರಿಸಲ್ಪಟ್ಟಂಥವು.

ಮಹರ್ಷಿ ಪತಂಜಲಿ

ಯೋಗ ಪಿತಾಮಹ

ಮಹರ್ಷಿ ಪತಂಜಲಿಯನ್ನು ಯೋಗ ಪಿತಾಮಹ ಎಂದು ಕರೆಯಲಾಗುತ್ತದೆ. ಯೋಗದ ಅಭ್ಯಾಸಕ್ಕೆ ರೂಪರೇಷೆಗಳನ್ನು ಒದಗಿಸಿದ್ದು ಮಹರ್ಷಿ ಪತಂಜಲಿ, ಅದೂ ಕ್ರಿ.ಪೂ. ಎರಡನೇ ಶತಮಾನದಲ್ಲಿ. ಯೋಗದಲ್ಲಿ ಹುದುಗಿರುವ ಜ್ಞಾನವನ್ನು ಆತ ʻಯೋಗಸೂತ್ರʼದ ಮೂಲಕ ಲೋಕಕ್ಕೆ ತಿಳಿಸಿದ್ದರು. ಇದನ್ನು ರಾಜಯೋಗ ಎನ್ನಲಾಗುತ್ತದೆ. ಮಾತ್ರವಲ್ಲ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಗ್ರಹ, ಧಾರಣ, ಧ್ಯಾನ ಮತ್ತು ಸಮಾಧಿಯೆಂಬ ಅಷ್ಟಾಂಗ ಯೋಗಗಳನ್ನೂ ರಚಿಸಿದ್ದಾರೆ. ಪತಂಜಲಿ ಯೋಗದ ಕೆಲವು ಅಂಶಗಳನ್ನು ನಾಟ್ಯಶಾಸ್ತ್ರದಲ್ಲೂ ಬಳಸಲಾಗುತ್ತದೆ. ಕರಾಟೆಯಂಥ ಸಾಹಸ ಕಲೆಗಳಲ್ಲೂ ಇದು ಬಳಕೆಯಲ್ಲಿದೆ.

ಶಾಸ್ತ್ರೀಯೋತ್ತರ ಕಾಲಘಟ್ಟ

ಈ ಯುಗದಲ್ಲಿ, ರಾಜಯೋಗ ಮತ್ತು ಜ್ಞಾನ ಯೋಗದ ಪ್ರಮುಖ ಪ್ರತಿಪಾದಕರಾಗಿ ಒದಗಿಬಂದವರು ಆದಿಶಂಕರಾಚಾರ್ಯರಂಥ ಸಂತರು. ಮುಕ್ತಿ ಅಥವಾ ನಿರ್ವಾಣ ಸಾಧನೆಗಾಗಿ ಯೋಗ ಮಾರ್ಗದ ಅವಲಂಬನೆಯ ಬಗ್ಗೆ ಅವರು ವಿಸ್ತರಿಸಿದ್ದಾರೆ. ಮನಸ್ಸಿನ ಶುದ್ಧಿಗಾಗಿ ಧ್ಯಾನವೂ ಮುಖ್ಯ ಎನ್ನುತ್ತವೆ ಅವರ ಬೋಧನೆಗಳು. ಪುರಂದರದಾಸ ಮತ್ತು ತುಳಸೀದಾಸರು ಸಹ ಯೋಗವಿಜ್ಞಾನಕ್ಕೆ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ಇಂದು ಬಹಳಷ್ಟು ಕಡೆಗಳಲ್ಲಿ ಚಾಲ್ತಿಯಲ್ಲಿರುವ ಹಠಯೋಗದ ಆಸನಗಳು ಇದೇ ಕಾಲದಲ್ಲಿ ಪ್ರಚಲಿತಕ್ಕೆ ಬಂದಂಥವು.

ಆಧುನಿಕ ಕಾಲ (ಕ್ರಿ. ಶ 1700- 1900)

ಪಶ್ಚಿಮ ದೇಶಗಳಲ್ಲಿ ಯೋಗದ ಕಂಪು ಹರಡುವುದಕ್ಕೆ ಪ್ರಮುಖ ಕಾರಣವಾಗಿದ್ದವರು ಸ್ವಾಮಿ ವಿವೇಕಾನಂದರು. ದೈಹಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಒತ್ತು ನೀಡುವ ಕ್ರಮವೂ ಯೋಗದಲ್ಲಿ ಆರಂಭವಾಯಿತು. ರಾಜ ಯೋಗ ಪ್ರಕಾರದಲ್ಲಿ ಮತ್ತಷ್ಟು ಬೆಳವಣಿಗೆಗಳಾದವು. ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ, ಬಿಕೆಎಸ್‌ ಅಯ್ಯಂಗಾರ್‌, ಕೆ. ಪಟ್ಟಾಭಿ ಜೋಯಿಸ್‌, ಪರಮಹಂಸ ಯೋಗಾನಂದ ಮತ್ತು ವಿವೇಕಾನಂದರು ರಾಜಯೋಗದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ವೇದಾಂತ, ಭಕ್ತಿ ಮತ್ತು ಹಠಯೋಗ ಪಶ್ಚಿಮ ದೇಶಗಳಲ್ಲಿ ಜನಪ್ರಿಯವಾಯಿತು. ಇಷ್ಟೊಂದು ಸುದೀರ್ಘ ಇತಿಹಾಸವನ್ನು ಹೊಂದಿರುವ ಯೋಗ ಬಹಳಷ್ಟು ಪ್ರಯೋಗಕ್ಕೆ ಒಳಗಾಗಿದ್ದರೂ ಮೂಲ ಸ್ವರೂಪದಲ್ಲಿ ಬದಲಾವಣೆಗಳಾಗಿಲ್ಲ.

ಬದಲಾವಣೆ ಎಲ್ಲಿದೆ?

ಪ್ರಾಚೀನ ಮತ್ತು ಆಧುನಿಕ ಮನೋಧರ್ಮಗಳಲ್ಲಿ ವ್ಯತ್ಯಾಸವಾಗುತ್ತಿದೆ. ಅಂದರೆ, ನಿಸರ್ಗದೊಂದಿಗೆ ಒಂದಾಗಿಯೇ ಬದುಕುವುದು ಹಿಂದಿನ ಕಾಲದ ಜನರ ರೀತಿಯಾಗಿತ್ತು. ಹಾಗಾಗಿ ನೈಸರ್ಗಿಕವಾಗಿಯೇ ಜನರ ಬದುಕು ವಿಕಾಸವಾಗುತ್ತಿತ್ತು. ಯೋಗವೆಂಬುದನ್ನು ಪ್ರತ್ಯೇಕವಾಗಿ ಗುರುತಿಸದೆಯೂ, ದೇಹ ಮತ್ತು ಮನಸ್ಸುಗಳು ಒಂದಾಗಿ ಸಾಗುವ ಬಗ್ಗೆ ಜನರಿಗೆ ಸ್ಪಷ್ಟ ಕಲ್ಪನೆಯಿತ್ತು. ಇದರಿಂದ ಯಾವುದೇ ಭಂಗಿಗಳು, ಆಸನಗಳು ಸಾಧ್ಯವಾಗುತ್ತಿದ್ದವು. ಇದಕ್ಕೆ ಉಸಿರಾಟದ ಮೇಲೆ ಹಿಡಿತ ಬೇಕು ಎಂಬುದೂ ತಿಳಿದಿತ್ತು.

ಹಾಗಾದರೆ, ಇಂದಿನ ದಿನಗಳಲ್ಲಿ ಯೋಗವೆಂಬುದು ಏನು? ರೋಗಗಳ ಚಿಕಿತ್ಸೆಗೆ ಬಳಕೆಯಾಗುತ್ತಿರುವ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಮತ್ತು ಮಾನಸಿಕ ಒತ್ತಡ ಶಮನ ಮಾಡುವ ಮಾರ್ಗವಾಗಿ ಯೋಗ ಉಪಯೋಗವಾಗುತ್ತಿದೆ. ಯೋಗದ ಮೂಲ ಸ್ವರೂಪಕ್ಕೆ ಭಿನ್ನವಾದ, ಮೇಲ್ನೋಟಕ್ಕಷ್ಟೇ ತಲುಪುವ ಸ್ವರೂಪವಿದು. ಉದಾ, ಶುದ್ಧಿ ಎನ್ನುವುದು ಇತ್ತೀಚಿನ ಕೈ-ಕಾಲು ತೊಳೆಯುವ ಸೀಮಿತ ಅರ್ಥದಲ್ಲಿ ಹೇಳುವುದಲ್ಲ. ದೇಹ-ಮನಸ್ಸುಗಳನ್ನು ಶುದ್ಧವಾಗಿರಿಸಿಕೊಳ್ಳುವ ಬಗೆಯಿದು. ಇದರಿಂದ ಜೀವನದ ಒಟ್ಟಾರೆ ಸ್ವಾಸ್ಥ್ಯ ಹೆಚ್ಚುತ್ತದೆ.

ಇಂದಿನ ದಿನಗಳಲ್ಲಿ ಯೋಗವೆಂದರೆ ಭಂಗಿ, ಆಸನಗಳು ಮಾತ್ರ. ಆಸನಗಳು ಯೋಗ ಕ್ರಿಯೆಯ ಮಹತ್ವದ ಅಂಶಗಳೆನ್ನುವುದು ಹೌದಾದರೂ, ಅಷ್ಟಕ್ಕೇ ಸೀಮಿತಗೊಳಿಸುವುದು ಸರಿಯಲ್ಲ. ವಿಶ್ವದೊಂದಿಗೆ, ಸಮಷ್ಟಿಯ ಜೊತೆಗೆ ಒಂದಾಗಿ ಬದುಕುವುದನ್ನು ಯೋಗ ಪ್ರತಿಪಾದಿಸುತ್ತದೆ. ಆಗ ಮಾತ್ರ ದೇಹ, ಮನಸ್ಸು ಮತ್ತು ಚೈತನ್ಯಗಳು ಸಮನ್ವಯಗೊಳ್ಳುವುದಕ್ಕೆ, ಆರೋಗ್ಯ ಮತ್ತು ಆನಂದದಿಂದ ಬದುಕುವುದಕ್ಕೆ ಸಾಧ್ಯ. ಈ ಹಿನ್ನೆಲೆಯಲ್ಲಿ, ಜೂನ್‌ ತಿಂಗಳ ೨೧ರಂದು ವಿ‍ಶ್ವದೆಲ್ಲೆಡೆ ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನ ಮಹತ್ವ ಪಡೆದಿದೆ. ಈ ಪ್ರಾಚೀನ ಪದ್ಧತಿಗೆ ಸಲ್ಲಬೇಕಾದ ಮಹತ್ವವನ್ನು ನೀಡಿ, ಶಾಂತಿ, ಸಾಮರಸ್ಯ ಮತ್ತು ವಿಶ್ವಪ್ರಜ್ಞೆಯೊಂದಿಗಿನ ಸಂಯೋಗವನ್ನು ಸಾಧಿಸುವಂಥ ಬದುಕು ನಮ್ಮದಾಗಲಿ.

ಈ ಸುದ್ದಿಯನ್ನೂ ಓದಿ: Vijayanagara News : ಉತ್ತಮ ಆರೋಗ್ಯ, ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ: ಡಾ. ಎಸ್‌. ಬಿ.ಹಂದ್ರಾಳ

ಸೃಷ್ಟಿಯ ಮೊದಲ ಯೋಗಿ ಶಿವ

ತನ್ನಲ್ಲಿರುವ ಜ್ಞಾನವನ್ನು ಪಸರಿಸುವುದಕ್ಕೆ ಸಪ್ತರ್ಷಿಗಳೆಂದೇ ಖ್ಯಾತರಾದ ಏಳು ಋಷಿಗಳನ್ನು ಆತ ವಿನಿಯೋಗಿಸಿಕೊಂಡ. ದೈಹಿಕ ಮಿತಿಗಳನ್ನು ಮೀರಿಯೂ ಮಾನವರು ವಿಕಸಿತರಾಗಬಲ್ಲರು ಎಂಬ ಮಹಾಜ್ಞಾನವನ್ನು ವಿಶ್ವದೆಲ್ಲೆಡೆಗೆ ಸಪ್ತರ್ಷಿಗಳು ಪ್ರಚುರಪಡಿಸಿದರು ಎನ್ನಲಾಗುತ್ತದೆ.

· ಕರ್ಮ ಯೋಗ: ಕಾಯಕದ ಮಾರ್ಗವನ್ನು ಪ್ರತಿಪಾದಿಸುತ್ತದೆ

· ಭಕ್ತಿ ಯೋಗ: ಭಕ್ತಿ ಸೂತ್ರವೇ ಮೋಕ್ಷ ಮಾರ್ಗ ಎನ್ನುತ್ತದೆ

· ಜ್ಞಾನ ಯೋಗ: ಸಮೀಕ್ಷೆ, ಜ್ಞಾನದ ಮಾರ್ಗವನ್ನು ಪ್ರತಿಪಾದಿಸುತ್ತದೆ

· ರಾಜಯೋಗ: ಆತ್ಮಾವಲೋಕನದ ಮಾರ್ಗವಿದು

· ಹಠಯೋಗ: ದೇಹ, ಮನಸ್ಸು ಮತ್ತು ಪ್ರಾಣಗಳ ಸಮತೋಲನದ ಮಾರ್ಗ

Exit mobile version