Site icon Vistara News

Hit and Run Case: ಶಿವಸೇನೆ ಮುಖಂಡನ ಪುತ್ರನಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌; ಸ್ಕೂಟರ್‌ಗೆ BMW ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು

Hit and Run case

ಮುಂಬೈ: ಪುಣೆ ಪೋರ್ಶ್‌ ಕಾರು ಹಿಟ್‌ ಆಂಡ್‌ ರನ್‌ ಕೇಸ್‌(Hit and Run Case) ಮಾಸುವ ಮುನ್ನವೇ ಮುಂಬೈನಲ್ಲೂ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಮೀನು ತರಲೆಂದು ಮನೆಯಿಂದ ಹೊರಗೆ ಬಂದಿದ್ದ ದಂಪತಿಗೆ ಬಿಎಂಡಬ್ಲ್ಯೂ ಕಾರು(BMW Car) ಡಿಕ್ಕಿ ಹೊಡೆದಿದೆ. ಇನ್ನು ಕುಡಿದು ಕಾರು ಓಡಿಸಿದ ಚಾಲಕ ಘಟನೆ ಬಳಿಕ ಕಾರು ಸಮೇತ ಎಸ್ಕೇಪ್‌ ಆಗಿದ್ದಾನೆ. ಮುಂಬೈಯ ವರ್ಲಿಯಲ್ಲಿ ಈ ಘಟನೆ ನಡೆದಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ಪತಿಗೆ ಗಂಭೀರ ಗಾಯಗಳಾಗಿವೆ.

ಕೋಳಿವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದು ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದಾರೆ.

ಶಿವಸೇನೆ ನಾಯಕನ ಪುತ್ರನಿಂದ ಡ್ರಂಕ್‌ ಆಂಡ್‌ ಡ್ರೈವ್‌

ಇನ್ನು ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಕಾರನ್ನು ಪತ್ತೆ ಹಚ್ಚಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆಯವರ ಶಿವಸೇನೆ ಬಣದ ಪಾಲ್ಗರ್‌ ಜಿಲ್ಲಾ ಉಪಾಧ್ಯಕ್ಷ ರಾಜೇಶ್‌ ಅವರ ಪುತ್ರನಿಂದ ಈ ಕೃತ್ಯ ನಡೆದಿದೆ ಎಂಬುದು ಬಯಲಾಗಿದೆ. ರಾಜೇಶ್‌ ಅವರ 24 ವರ್ಷದ ಪುತ್ರ ಮಿಹಿರ್‌ ಶಾ ಕುಡಿದು ವಾಹನ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣವಾಗಿದ್ದಾನೆ. ಮಿಹಿರ್‌ ಮತ್ತು ಆತನ ಕಾರಿನ ಚಾಲಕ ಕಾರಿನಲ್ಲಿದ್ದರು ಎನ್ನಲಾಗಿದೆ.

ಮಿಹಿರ್‌ ನಾಪತ್ತೆ, ಪೊಲೀಸರ ಹುಡುಕಾಟ

ಇನ್ನು ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಿಹಿರ್‌ ಶಾ ನಾಪತ್ತೆಯಾಗಿದ್ದಾನೆ. ಮಿಹಿರ್‌ ಶಾ ತನ್ನ ಫೋನನ್ನೂ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಪೊಲೀಸರ ಪ್ರಕಾರ ಮಿಹಿರ್‌ ಕಳೆದ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದು. ತನ್ನ ಮನೆಗೆ ಹಿಂದಿರುಗುವ ವೇಳೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಸಿಎಂ ಪ್ರತಿಕ್ರಿಯೆ

ಇನ್ನು ಘಟನೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾತ್‌ ಶಿಂಧೆ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ದುರಾದೃಷ್ಟಕರವಾದುದು. ಕಾನೂನಿನ ಎದುರು ಎಲ್ಲರೂ ಸಮಾನ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಪೊಲೀಸರು ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Nafees Iqbal : ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗನಿಗೆ ಮೆದುಳಿನ ರಕ್ತಸ್ರಾವ; ಪರಿಸ್ಥಿತಿ ಗಂಭೀರ

Exit mobile version