Site icon Vistara News

ಹಿಟ್ ಆ್ಯಂಡ್‌ ರನ್‌ ಕಾನೂನು ಜಾರಿ ಇಲ್ಲ; ಮುಷ್ಕರ ಬೆನ್ನಲ್ಲೇ ಕೇಂದ್ರದಿಂದ ಮಹತ್ವದ ಆದೇಶ

Protest

Hit And Run Law Will Not Implement Without Discussion; Centre Clarifies

ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿದ್ದ ಹಿಟ್ ಆ್ಯಂಡ್‌ ರನ್‌ ಕಠಿಣ ಕಾನೂನು (Hit And Run Law) ವಿರುದ್ಧ ದೇಶಾದ್ಯಂತ ಟ್ರಕ್‌ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರಕ್ಸ್, ಟ್ಯಾಂಕರ್ಸ್, ಬಸ್‌ ಸೇರಿದಂತೆ ವಾಣಿಜ್ಯ ಬಳಕೆಯ ವಾಹನಗಳ ಚಾಲಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಇನ್ನು, ಕರ್ನಾಟಕದಲ್ಲಿ ಜನವರಿ 17ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ ಕರೆ ನೀಡಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು (Central Government) ಹಿಟ್ ಆ್ಯಂಡ್‌ ರನ್‌ ಕಠಿಣ ಕಾನೂನು ಜಾರಿ ಸದ್ಯಕ್ಕಿಲ್ಲ ಎಂದು ತಿಳಿಸಿದೆ. ಇದರಿಂದಾಗಿ ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರ ವಾಪಸ್‌ ಪಡೆದಿವೆ.

ಭಾರತೀಯ ದಂಡ ಸಂಹಿತೆಯು (IPC) ಈಗ ಭಾರತೀಯ ನ್ಯಾಯ ಸಂಹಿತೆ ಆಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 102ರ ಅಡಿಯಲ್ಲಿ ಹಿಟ್ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಲು ಮುಂದಾಗಿರುವುದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಹಾಗಾಗಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ನ (AIMTC) ಮುಖಂಡರ ಜತೆ ಮಾತುಕತೆ ನಡೆಸಿದ್ದು, ಎಐಎಂಟಿಸಿ ಜತೆ ಚರ್ಚಿಸಿಯೇ ಹಿಟ್ ಆ್ಯಂಡ್‌ ರನ್‌ ಕಾನೂನು ಜಾರಿಗೆ ತರಲಾಗುತ್ತದೆ. ಅಲ್ಲಿಯವರೆಗೆ ಕಾನೂನು ಜಾರಿಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಕುರಿತು ಭಲ್ಲಾ ಅವರೇ ಪ್ರಕಟಣೆ ಹೊರಡಿಸಿದ್ದಾರೆ.

ಎಐಎಂಟಿಸಿ ಗೌರವಾಧ್ಯಕ್ಷ ಡಾ.ಜಿ.ಆರ್.‌ ಷಣ್ಮುಗಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಕೇಂದ್ರ ಸರ್ಕಾರವು ನಮ್ಮ ಜತೆ ಮಾತನಾಡಿ, ಚರ್ಚಿಸದ ಹೊರತು ಹಿಟ್ ಆ್ಯಂಡ್‌ ರನ್‌ ಕಾನೂನು ಜಾರಿಗೊಳಿಸುವುದಿಲ್ಲ ಎಂಬ ಭರವಸೆ ನೀಡಿದೆ. ಹಾಗಾಗಿ, ಟ್ರಕ್‌ ಚಾಲಕರು ಸೇರಿ ಎಲ್ಲ ಸಂಘಟನೆಗಳ ಕಾರ್ಯಕರ್ತರು ಕೆಲಸಕ್ಕೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಮುಷ್ಕರ, ಪ್ರತಿಭಟನೆ ಕೈಗೊಳ್ಳಬಾರದು. ನಮ್ಮನ್ನು ಸಂಪರ್ಕಿಸದೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದರೆ ಮಾತ್ರ ಹೋರಾಟ ಮಾಡೋಣ” ಎಂದಿದ್ದಾರೆ.

ಏನಿದು ಹಿಟ್ ಆ್ಯಂಡ್‌ ರನ್‌ ಕಾನೂನು?

ಹಳೆಯ ಭಾರತೀಯ ದಂಡ ಸಂಹಿತೆಯನ್ನು ಬದಲಿಸುವ ಭಾರತೀಯ ನ್ಯಾಯ್ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟುಮಾಡುವ ಮತ್ತು ಪೊಲೀಸರಿಗೆ ಅಥವಾ ಆಡಳಿತದ ಯಾವುದೇ ಅಧಿಕಾರಿಗೆ ತಿಳಿಸದೆ ಓಡಿಹೋದ ಚಾಲಕರು 10 ವರ್ಷಗಳವರೆಗೆ ಶಿಕ್ಷೆ ಅಥವಾ 7 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Hit and Run Law: ಹೆದ್ದಾರಿ, ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತಿರುವ ಚಾಲಕರು! ಕಾರಣ ಏನು?

ಯಾವುದೇ ದುಡುಕಿನ ಅಥವಾ ನಿರ್ಲಕ್ಷ್ಯದ ಮೂಲಕ ಯಾವುದೇ ವ್ಯಕ್ತಿಯ ಸಾವಿಗೆ ಕಾರಣರಾದವರು ಅಪರಾಧಿ ನರಹತ್ಯೆಗೆ ಸಮನಾಗಿರುವುದಿಲ್ಲ, ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ವಿವರಣೆಯ ಜೈಲುವಾಸದಿಂದ ಶಿಕ್ಷೆಗೆ ಒಳಗಾಗುತ್ತಾರೆ ಮತ್ತು ದಂಡಕ್ಕೆ ಸಹ ಹೊಣೆಗಾರರಾಗುತ್ತಾರೆ ಎಂದು ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಭಾರತೀಯ ದಂಡ ಸಂಹಿತೆ ಪ್ರಕಾರ, ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಆರೋಪಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version