ಮಣಿಪುರದಲ್ಲಿ ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ಸಂಬಂಧ ನಡೆಯುತ್ತಿರುವ ಹಿಂಸಾಚಾರ (Manipur Violence) ವಿಕೋಪಕ್ಕೆ ತಲುಪಿದ ಬೆನ್ನಲ್ಲೇ, ಈ ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ವಹಿಸಿ ಗೃಹ ಸಚಿವ ಅಮಿತ್ ಶಾ (Home Minister Amit Shah) ಆದೇಶ ಹೊರಡಿಸಿದ್ದಾರೆ.
ಮಣಿಪುರದಲ್ಲಿ, ಪರಿಶಿಷ್ಟ ಪಂಗಡ ಸ್ಥಾನ-ಮಾನ ಕೊಡುವಂತೆ ಮೈತೈ ಸಮುದಾಯದವರು ಆಗ್ರಹಿಸುತ್ತಿದ್ದರೆ, ಕುಕಿ ಮತ್ತು ಇತರ ಕೆಲವು ಸಮುದಾಯದವರು ಇದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೈತೈಗಳು ಬುಡಕಟ್ಟು ಜನಾಂಗದವರು ಅಲ್ಲ, ಹೀಗಾಗಿ ಅವರಿಗೆ ಪರಿಶಿಷ್ಟ ಪಂಗಡ (ST) ಸ್ಟೇಟಸ್ ಕೊಡಬಾರದು ಎಂದು ಪ್ರತಿಭಟಿಸುತ್ತಿದ್ದಾರೆ. ಈ ಎರಡೂ ಸಮುದಾಯಗಳ ನಡುವಿನ ಸಂಘರ್ಷ ಮಿತಿಮೀರಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗುತ್ತಿವೆ. ಜನರ ಜೀವ ಹೋಗುತ್ತಿದೆ. ಅಲ್ಲಿನ ಪರಿಸ್ಥಿತಿಯನ್ನು ಗೃಹ ಸಚಿವ ಅಮಿತ್ ಶಾ ಕೂಲಂಕಷವಾಗಿ ಗಮನಿಸಿ, ಸಂಪೂರ್ಣ ವಿವರ ಪಡೆದಿದ್ದಾರೆ.
ಮಣಿಪುರ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಷ್ಟು ದೊಡ್ಡಮಟ್ಟದಲ್ಲಿ ಹಿಂಸಾಚಾರ ನಡೆಯಲು ಕಾರಣವೇನು? ಎಂಬ ಬಗ್ಗೆ ತನಿಖೆ ನಡೆಸಲು ಒಂದು ತನಿಖಾ ಸಮಿತಿ ರಚನೆ ಮಾಡಲಾಗುವದು. ಈ ಪ್ಯಾನೆಲ್ನ ಮುಖ್ಯಸ್ಥರು ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ. ಕೇಂದ್ರ ಸರ್ಕಾರವೇ ತನಿಖೆ ನಡೆಸಲಿದೆ. ಹಾಗೇ, ಮಣಿಪುರ ರಾಜ್ಯಪಾಲರ ಮಾರ್ಗದರ್ಶನ ಅನ್ವಯ ಒಂದು ಶಾಂತಿ ಸಮಿತಿ ಕೂಡ ರಚನೆ ಮಾಡುತ್ತೇವೆ’ ಎಂದು ಹೇಳಿರುವ ಅಮಿತ್ ಶಾ ಗಲಭೆಯನ್ನು ಸೃಷ್ಟಿಸುತ್ತಿರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ‘ಕೂಡಲೇ ಹಿಂಸಾಚಾರ ನಿಲ್ಲಿಸಿ, ಇಲ್ಲವೇ ನಾವು ತೆಗೆದುಕೊಳ್ಳುವ ಕಠಿಣ ಕ್ರಮ ಅನುಭವಿಸಲು ಸಿದ್ಧರಾಗಿ’ ಎಂದಿದ್ದಾರೆ.
ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ ಅಮಿತ್ ಶಾ ಮೂರು ದಿನ ಅಲ್ಲಿಯೇ ಇದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ, ತನಿಖಾ ಸಮಿತಿ ರಚನೆಯ ಪ್ರಕಟಣೆ ಹೊರಡಿಸಿದ್ದಾರೆ. ‘ಮಣಿಪುರದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದೇನೆ, ಅಧಿಕಾರಿಗಳು, ಮಂತ್ರಿಗಳು, ಬೇರೆ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದೇನೆ. ಮೈತೈ ಮತ್ತು ಕುಕಿ ಸಮುದಾಯದ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಹಿಂಸಾಚಾರಕ್ಕೆ ಸಂಬಂಧಪಟ್ಟ 6 ಪ್ರಕರಣಗಳ ತನಿಖೆಯನ್ನು ಸಿಬಿಐ ವಿಶೇಷ ತಂಡಕ್ಕೆ ವಹಿಸಲಾಗುವುದು. ನಿಷ್ಪಕ್ಷಪಾತವಾಗಿ ಮತ್ತು ನ್ಯಾಯೋಚಿತವಾಗಿ ತನಿಖೆ ನಡೆಸಲಾಗುವುದು ಎಂಬ ಭರವಸೆಯನ್ನು ಮಣಿಪುರ ಜನರಿಗೆ ನೀಡುತ್ತೇನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೇ, ಮುಂದೆ ಇನ್ನೊಮ್ಮೆ ಇಂಥ ಹಿಂಸಾಚಾರ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ಮಣಿಪುರದಲ್ಲಿ ಮತ್ತೆ ಹಿಂಸೆಯ ಭುಗಿಲು; ಬುಡಕಟ್ಟು ಜನರ ಕದನಕ್ಕೆ ಇಲ್ಲಿದೆ ಕಾರಣ
ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. (ಕೇಂದ್ರದಿಂದ 5 ಲಕ್ಷ ರೂ ಮತ್ತು ರಾಜ್ಯದಿಂದ 5 ಲಕ್ಷ ರೂ.) ನೀಡುವುದಾಗಿ ಅಮಿತ್ ಶಾ ಘೋಷಣೆ ಮಾಡಿದರು. ಹಾಗೇ, ಮಣಿಪುರ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಜನರಿಗೆ ಮನವಿ ಮಾಡಿದರು.