ವಿಸ್ತಾರ Explainer: ಮಣಿಪುರದಲ್ಲಿ ಮತ್ತೆ ಹಿಂಸೆಯ ಭುಗಿಲು; ಬುಡಕಟ್ಟು ಜನರ ಕದನಕ್ಕೆ ಇಲ್ಲಿದೆ ಕಾರಣ Vistara News
Connect with us

EXPLAINER

ವಿಸ್ತಾರ Explainer: ಮಣಿಪುರದಲ್ಲಿ ಮತ್ತೆ ಹಿಂಸೆಯ ಭುಗಿಲು; ಬುಡಕಟ್ಟು ಜನರ ಕದನಕ್ಕೆ ಇಲ್ಲಿದೆ ಕಾರಣ

ಮಣಿಪುರದಲ್ಲಿ ಎರಡು ಬುಡಕಟ್ಟು ಸಮುದಾಯಗಳ ನಡುವಿನ ಅಪನಂಬಿಕೆ, ಅವಿಶ್ವಾಸ, ಎಸ್‌ಟಿ ಸಮುದಾಯಕ್ಕಾಗಿನ ಹೋರಾಟ, ಅರಣ್ಯದಿಂದ ತೆರವು ಕಾರ್ಯಾಚರಣೆಗಳೆಲ್ಲ ಸೇರಿ ಇಂದು ಭಾರಿ ಹಿಂಸಾಚಾರ, (manipur violence) ಘರ್ಷಣೆಗೆ ಕಾರಣವಾಗಿವೆ.

VISTARANEWS.COM


on

violence hit Manipur
Koo

ಮಣಿಪುರದಲ್ಲಿ ಹಿಂಸಾಚಾರ (manipur violence) ಮತ್ತೆ ಭುಗಿಲೆದ್ದಿದೆ. ಮೂರು ವಾರಗಳ ಹಿಂದೆ ಇಲ್ಲಿ ಹಿಂಸಾಚಾರ ತೀವ್ರಗೊಂಡು, ನಂತರ ತಣ್ಣಗಾಗಿತ್ತು. ಇದೀಗ ರಾಜಧಾನಿ ಇಂಫಾಲದ ಮಾರುಕಟ್ಟೆಯೊಂದರಲ್ಲಿ ಮೈತೆಯಿ ಬುಡಕಟ್ಟಿನವರ ಅಂಗಡಿಗಳ ಮೇಲೆ ಕೆಲವರು ದಾಳಿ ಮಾಡುವುದರೊಂದಿಗೆ ಮತ್ತೆ ಹಿಂಸೆ ತೊಡಗಿದೆ. ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅರೆ ಸೇನಾಪಡೆಗಳು ಸ್ಥಳಕ್ಕೆ ಧಾವಿಸಿದ್ದು , ಸೆಕ್ಷನ್‌ 144 ವಿಧಿಸಲಾಗಿದೆ.

ಫೆಬ್ರವರಿಯಲ್ಲಿ ಇಲ್ಲಿ ಶಾಂತಿ ಕದಡಿತ್ತು; ಎರಡು ಬುಡಕಟ್ಟುಗಳು ಕಾದಾಟದಲ್ಲಿ ತೊಡಗಿದ್ದರಿಂದ ಸಾವು- ಗಾಯ- ಹಿಂಸೆ ಸೃಷ್ಟಿಯಾಗಿತ್ತು. 7,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಮನೆ- ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. 50ಕ್ಕೂ ಅಧಿಕ ಮಂದಿ ಸತ್ತಿದ್ದರು. ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಮಣಿಪುರ ರಾಜ್ಯಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯ ನಿಗಾ ವಹಿಸಿದ್ದರು.

ಆದರೆ ಇದ್ದಕ್ಕಿದ್ದಂತೆ ಮಣಿಪುರ ಹೊತ್ತಿಕೊಂಡು ಉರಿಯಲು ಕಾರಣವೇನು? ಈ ಹಿಂಸೆಯ ಹಿಂದೆ ಏನಿದೆ? ವಿವರವಾಗಿ ನೋಡೋಣ:

ಮೇ ತಿಂಗಳ ಮೊದಲ ವಾರದಲ್ಲಿ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ (ATSUM) ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ಯನ್ನು ಚುರಾಚಂದ್‌ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಆಯೋಜಿಸಿತ್ತು. ಮೈತೈ (Meitei) ಬುಡಕಟ್ಟಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ನಾಗಾಗಳು, ಜೋಮಿಗಳು ಮತ್ತು ಕುಕಿಗಳು ಸೇರಿದಂತೆ ಹಲವು ಬುಡಕಟ್ಟು ಜನಾಂಗದವರು ಒಟ್ಟು ಸೇರಿ ಈ ಮೆರವಣಿಗೆಯನ್ನು ಆಯೋಜಿಸಿದ್ದರು. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 40 ಪ್ರತಿಶತ ಈ ಸಮುದಾಯಗಳ ಜನಸಂಖ್ಯೆ ಇದೆ.

ಇದಕ್ಕೂ ಮುನ್ನ, ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೈ ಬುಡಕಟ್ಟಿನ ಬೇಡಿಕೆಯ ಕುರಿತು ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಕಳೆದ ತಿಂಗಳು ಸೂಚಿಸಿತ್ತು. ಮೈತೈಗಳು ರಾಜ್ಯದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಇದ್ದಾರೆ. ಆದರೆ ಇವರು ರಾಜ್ಯದ ಕೇವಲ 10 ಪ್ರತಿಶತದಷ್ಟು ಜಾಗದಲ್ಲಿ ಇದ್ದಾರೆ. ರಾಜ್ಯ ವಿಧಾನಸಭೆಯ 2/3ನೇ ಭಾಗವನ್ನು ಮೈತೈಗಳು ಹೊಂದಿದ್ದಾರೆ. ಆದರೆ ಇತರ ಬುಡಕಟ್ಟು ಜನಾಂಗದವರು, ಅರ್ಧಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ, 90 ಪ್ರತಿಶತದಷ್ಟು ಭೂಪ್ರದೇಶದಲ್ಲಿ ಹರಡಿದ್ದಾರೆ.

ಈಗ ಮೈತೈಗಳ ಬೇಡಿಕೆ ಎಂದರೆ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ನಿರಂತರವಾಗಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದಾಗಿ ತಮ್ಮ ಅಸ್ತಿತ್ವಕ್ಕೆ, ಬದುಕುವ ಅವಕಾಶಗಳಿಗೆ ಧಕ್ಕೆಯಾಗಿದೆ. ಹೀಗಾಗಿ ST ಸ್ಥಾನಮಾನ ಬೇಕು.

ಕುಕೀ, ನಾಗಾಗಳ ಆತಂಕವೇನು?

ಆದರೆ ಅದನ್ನು ಇತರ ಬುಡಕಟ್ಟುಗಳು ವಿರೋಧಿಸುತ್ತಿವೆ. ಮೈತೈಯಂತಹ ಹೆಚ್ಚು ಮುಂದುವರಿದ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವುದು ತಪ್ಪು. ಇದರಿಂದ ಇತರ ತಳ ಸಮುದಾಯಗಳ ಉದ್ಯೋಗಾವಕಾಶ ನಷ್ಟವಾಗಲಿದೆ. ಹೆಚ್ಚಿನ ಮೈತೈಗಳು ಮಾತನಾಡುವ ಭಾಷೆಯಾದ ಮಣಿಪುರಿಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಈಗಾಗಲೇ ಸೇರಿಸಲಾಗಿದೆ. ಮೈತೈ ಸಮುದಾಯದ ಕೆಲವು ವಿಭಾಗಗಳನ್ನು ಈಗಾಗಲೇ ಪರಿಶಿಷ್ಟ ಜಾತಿಗಳು (SC) ಅಥವಾ ಇತರೆ ಹಿಂದುಳಿದ ವರ್ಗಗಳ (OBC) ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ಅದರಿಂದ ಒದಗಿಸಲಾದ ಅವಕಾಶಗಳನ್ನು ಅವು ಪಡೆಯುತ್ತಿವೆ.

ಮಣಿಪುರದ ಕೆಲವು ಶಾಸಕರು ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೈ ಸಂಘಟನೆಗಳ ಬೇಡಿಕೆಯನ್ನು ಈ ಹಿಂದೆ ಬಹಿರಂಗವಾಗಿ ಅನುಮೋದಿಸಿದ್ದರು. ಇದರಿಂದ ಪರಿಶಿಷ್ಟ ಸಮುದಾಯಗಳು ವ್ಯಗ್ರಗೊಂಡಿದ್ದವು. ರಾಜ್ಯದ ಹೆಚ್ಚಿನ ಭೂಮಿ ಗುಡ್ಡಗಾಡು ಜಿಲ್ಲೆಗಳಿಂದ ಕೂಡಿದೆ. ಇಲ್ಲಿ ಹೆಚ್ಚಾಗಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಮುಖ್ಯವಾಗಿ ಕ್ರಿಶ್ಚಿಯನ್ನರಾದ ನಾಗಾಗಳು ಮತ್ತು ಕುಕಿಗಳು.

ಇದೀಗ ಹಲವು ಕಡೆ ಅರಣ್ಯ ಭೂಮಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ತಮ್ಮನ್ನು ತೆರವು ಮಾಡಲಾಗುತ್ತಿದೆ ಎಂಬುದು ಕುಕಿಗಳ ಹಾಗೂ ನಾಗಾಗಳ ಸಿಟ್ಟು. ರಾಜ್ಯ ಸರ್ಕಾರ ಒಂದೆಡೆಯಿಂದ ಮೈತೈಗಳನ್ನು ಓಲೈಸುತ್ತಿದೆ; ತಮ್ಮನ್ನು ಹಣಿಸಯುತ್ತಿದೆ ಎಂಬುದು ಇವರ ಆಕ್ರೋಶ.

nagas

ಸಂವಿಧಾನದ ಆರ್ಟಿಕಲ್ 371ಸಿ ಗುಡ್ಡಗಾಡು ಪ್ರದೇಶಗಳಿಗೆ ಕೆಲವು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುತ್ತದೆ. ಅದನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಕುಕಿ ನಾಯಕರು ಆರೋಪಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು, “ಅಕ್ರಮ ನಿವಾಸಿಗಳು ಮೀಸಲು ಅರಣ್ಯಗಳು, ಸಂರಕ್ಷಿತ ಅರಣ್ಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಅತಿಕ್ರಮಿಸಿ ಅಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯ ವ್ಯವಹಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಮೈತೈಗಳು ಎಸ್‌ಟಿ ಸ್ಥಾನಮಾನ ಬಯಸಿದ್ದಾರೆ. ಆದರೆ ಮುಂದುವರಿದ ಸಮುದಾಯವಾದ ಅವರು ಎಸ್‌ಟಿ ಸ್ಥಾನಮಾನ ಹೊಂದಲು ಹೇಗೆ ಸಾಧ್ಯ? ಅವರು ಎಸ್‌ಟಿ ಸ್ಥಾನಮಾನ ಪಡೆದರೆ ನಮ್ಮ ಎಲ್ಲಾ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ” ಎಂಬುದು ಆಲ್ ಮಣಿಪುರ ಬುಡಕಟ್ಟು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆಲ್ವಿನ್ ನೆಹ್ಸಿಯಲ್ ಅವರ ಆತಂಕ. ʼʼಕುಕಿಗಳು ಅತ್ಯಂತ ಬಡವರು. ಶಾಲಾ ಶಿಕ್ಷಣ ಇಲ್ಲಿ ಇಲ್ಲದುದರಿಂದ ಜುಮ್ಮಾ ಕೃಷಿಯ ಮೇಲೆ ಬದುಕುಳಿದಿದ್ದಾರೆ. ಇದೀಗ ಮೈತೈಗಳು ಅದರ ಮೇಲೆ ಕಣ್ಣು ಹಾಕಿದ್ದಾರೆʼʼ ಎಂಬುದು ಅವರ ದೂರು. ಇತ್ತೀಚೆಗೆ ಸರ್ಕಾರ ಮೀಸಲು ಅರಣ್ಯ ಪ್ರದೇಶಗಳಿಂದ ಅಕ್ರಮ ವಲಸಿಗರನ್ನು ಹೊರಹಾಕಲು ಆರಂಭಿಸಿದೆ. ಇದರಿಂದ ಕುಕಿಗಳು ವಿಚಲಿತರಾಗಿದ್ದಾರೆ.

ಅಕ್ರಮ ವಲಸೆಯ ಆತಂಕ

ಇತ್ತ ಮೈತೈಗಳ ಹಾಗೂ ಸರ್ಕಾರ ನಡೆಸುತ್ತಿರುವ ಬಿಜೆಪಿಯ ಆತಂಕವೆಂದರೆ ಅಕ್ರಮ ವಲಸೆಯದ್ದು. ಈ ವರ್ಷದ ಮಾರ್ಚ್‌ನಲ್ಲಿ, ಹಲವಾರು ಮಣಿಪುರಿ ಸಂಘಟನೆಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವು. 1951 ಅನ್ನು ಮೂಲ ವರ್ಷವಾಗಿಟ್ಟುಕೊಂಡು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅನುಷ್ಠಾನಿಸಲು ಒತ್ತಾಯಿಸಿದವು.

ಮಣಿಪುರದಲ್ಲಿ ಹಠಾತ್‌ ಜನಸಂಖ್ಯೆಯ ಏರಿಕೆಯಾಗಿದೆ. ರಾಷ್ಟ್ರೀಯ ಸರಾಸರಿ 17.64 ಪ್ರತಿಶತಕ್ಕೆ ಬದಲಾಗಿ ಶೇಕಡಾ 24.5ರ ಬೆಳವಣಿಗೆಯ ದರ ಕಂಡುಬಂದಿದೆ. ಇದಕ್ಕೆ ಕಾರಣ ಮಣಿಪುರದ ಗುಡ್ಡಗಾಡು ಪ್ರದೇಶಗಳನ್ನು ಮ್ಯಾನ್ಮಾರ್‌ ಹಾಗೂ ಬಾಂಗ್ಲಾದವರು ಬಂದು ಸೇರಿಕೊಳ್ಳುತ್ತಿರುವುದು. ಎನ್‌ಆರ್‌ಸಿಯಿಂದ ಮಣಿಪುರದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಬಹುದು ಎಂದು ಮೈತೈ ಸಂಸ್ಥೆಗಳು ಆಗ್ರಹಿಸಿವೆ.

“ಕುಕಿಗಳು ಮ್ಯಾನ್ಮಾರ್ ಗಡಿಯಿಂದ ಅಕ್ರಮವಾಗಿ ವಲಸೆ ಬರುತ್ತಿದ್ದಾರೆ ಮತ್ತು ಮಣಿಪುರದಲ್ಲಿ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಇತ್ತೀಚೆಗೆ ಮಣಿಪುರ ಸರ್ಕಾರ ಮೀಸಲು ಅರಣ್ಯ ಪ್ರದೇಶಗಳಲ್ಲಿನ ಅಕ್ರಮ ವಸಾಹತುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಪ್ರಾರಂಭಿಸಿತು. ಕುಕೀಗಳು ಪ್ರತಿಭಟಿಸಿದರು. ಮೈತೈಗಳನ್ನೂ ವಿರೋಧಿಸುತ್ತಿದ್ದಾರೆʼʼ ಎಂದು ಆಲ್ ಮೈತೈ ಕೌನ್ಸಿಲ್‌ ಅಧ್ಯಕ್ಷರು ಹೇಳುತ್ತಾರೆ.

immigration

ತೆರವು ಕಾರ್ಯಾಚರಣೆ ಮತ್ತು ಮೈತೈಗಳ ಎಸ್‌ಟಿ ಸ್ಥಾನಮಾನದ ಬೇಡಿಕೆ ತಮ್ಮನ್ನು ನಮ್ಮದೇ ಭೂಮಿಯಿಂದ ಓಡಿಸುವ ಕಾರಸ್ಥಾನ ಎಂದು ಕುಕಿಗಳು ಬಲವಾಗಿ ನಂಬಿದ್ದಾರೆ.

ರ್ಯಾಲಿಯ ಬಳಿಕ ಏನಾಯಿತು?

ಮೇ ಮೊದಲ ವಾರ ನಡೆದ ರ್ಯಾಲಿಯಲ್ಲಿ ಸಾವಿರಾರು ನಾಗಾ ಹಾಗೂ ಕುಕೀ ಬುಡಕಟ್ಟುಗಳ ಚಳವಳಿಗಾರರು ಭಾಗವಹಿಸಿದ್ದರು. ಈ ಮೆರವಣಿಗೆಯ ವೇಳೆ, ಶಸ್ತ್ರಸಜ್ಜಿತ ಗುಂಪೊಂದು ಮೈತೈ ಸಮುದಾಯದ ಜನರ ಮೇಲೆ ದಾಳಿ ನಡೆಸಿತು. ಪ್ರತಿಸ್ಪರ್ಧಿ ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತು. ಇದು ಕಣಿವೆ ಜಿಲ್ಲೆಯ ಮೂಲೆ ಮೂಲೆಗೂ ಹಬ್ಬಿತು. ನಂತರ ಇತರ ಜಿಲ್ಲೆಗಳಲ್ಲೂ ಇದಕ್ಕೆ ಪ್ರತೀಕಾರದ ದಾಳಿಗಳು ನಡೆದವು. ಇದು ರಾಜ್ಯದಾದ್ಯಂತ ಹಿಂಸಾಚಾರವನ್ನು ಉಲ್ಬಣಗೊಳಿಸಿತು.

ಟೋರ್ಬಂಗ್‌ನಲ್ಲಿ ಹೆಚ್ಚು ಗಲಭೆ ನಡೆದಿದೆ. ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಗಲಭೆಯಲ್ಲಿ ಅನೇಕ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಸುಟ್ಟು ಹಾಕಲಾಯಿತು. ನೂರಾರು ಜನರು ಗಾಯಗೊಂಡರು. ಬಂಗ್‌ಮುಯಲ್, ಸಿಂಗ್ನಾತ್, ಮುಅಲ್ಲಮ್ ಮತ್ತು ಮಾತಾ ಮುಲ್ತಮ್‌ನಂತಹ ಸ್ಥಳಗಳಲ್ಲಿ ಅರಣ್ಯ ಇಲಾಖೆ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು.

ದಾಳಿಗಳು ಮತ್ತು ಪ್ರತಿದಾಳಿಗಳು ರಾತ್ರಿಯಿಡೀ ಮುಂದುವರಿದವು. ಎರಡೂ ಕಡೆಯ ಬುಡಕಟ್ಟು ಜನಾಂಗದವರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟರು. ರಾಜ್ಯದ ಕೆಲವು ಭಾಗಗಳಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತಿದೆ. ಪಶ್ಚಿಮ ಇಂಫಾಲ್, ಕಾಕ್ಚಿಂಗ್, ತೌಬಲ್, ಜಿರಿಬಾಮ್, ಬಿಷ್ಣುಪುರ್, ಚುರಾಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ತೆಂಗ್‌ನೌಪಾಲ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಇಂಫಾಲ್ ಕಣಿವೆಯಲ್ಲಿ ಕುಕಿ ಬುಡಕಟ್ಟು ಜನಾಂಗದ ಹಲವರ ಮನೆಗಳನ್ನು ದರೋಡೆ ಮಾಡಲಾಗಿದೆ. ಅವರನ್ನು ಮನೆ ಬಿಟ್ಟು ಓಡಿಸಲಾಗಿದೆ. ಇಂಫಾಲ್ ವೆಸ್ಟ್‌ನಲ್ಲಿರುವ ಕುಕಿ ಪ್ರಾಬಲ್ಯದ ಲಾಂಗೋಲ್ ಪ್ರದೇಶದ 500ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಪ್ರಸ್ತುತ ಲ್ಯಾಂಫೆಲ್‌ಪಟ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದಲ್ಲಿ ತಂಗಿದ್ದಾರೆ. ಇಂಫಾಲ್ ಕಣಿವೆಯಲ್ಲಿ ಕೆಲವು ಪೂಜಾ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿದೆ.

ಬುಡಕಟ್ಟು ಪ್ರಾಬಲ್ಯದ ಚುರಾಚಂದ್‌ಪುರ ಜಿಲ್ಲೆಯ ಸುಮಾರು 1,000 ಮೈತೈಗಳು ಕ್ವಾಕ್ಟಾ ಮತ್ತು ಮೊಯಿರಾಂಗ್ ಸೇರಿದಂತೆ ಬಿಷ್ಣುಪುರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಓಡಿಹೋಗಿದ್ದಾರೆ. ಕಾಂಗ್‌ಪೋಕ್ಪಿ ಜಿಲ್ಲೆಯ ಮೋಟ್‌ಬಂಗ್ ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಂಗ್ನೌಪಾಲ್ ಜಿಲ್ಲೆಯ ಮ್ಯಾನ್ಮಾರ್ ಗಡಿ ಬಳಿಯ ಮೊರೆಃನಿಂದಲೂ ಹಿಂಸಾಚಾರ ವರದಿಯಾಗಿದೆ.

Chief Minister N Biren Singh Event Venue Set On Fire In Manipur

“ಪರಿಸ್ಥಿತಿ ಉದ್ವಿಗ್ನವಾಗಿದೆ. ಕೋಮು ಘರ್ಷಣೆ ತಡೆಯಲು ನಾವು ಸೈನ್ಯ ಮತ್ತು ಅರೆಸೈನಿಕ ಪಡೆಗಳೊಂದಿಗೆ ಯುದ್ಧದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಮುದಾಯದ ಮುಖಂಡರನ್ನು ಸಂವಾದದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ” ಎಂದು ಈ ಪ್ರದೇಶದ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದರು.

ಇದನ್ನೂ ಓದಿ: ಮಣಿಪುರ ಸಿಎಂ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು; ಉದ್ವಿಗ್ನತೆ

ಸೈನಿಕ ಪಡೆಗಳು ಮತ್ತು ಅರೆಸೇನಾ ಪಡೆಗಳು, ಅಸ್ಸಾಂ ರೈಫಲ್ಸ್ ದಳಗಳು ವಿವಿಧ ಸಮುದಾಯಗಳ 7,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿ, ಸೈನಿಕರ ಶಿಬಿರಗಳು ಮತ್ತು ಸರ್ಕಾರಿ ಆವರಣದಲ್ಲಿ ಅವರಿಗೆ ಆಶ್ರಯ ನೀಡಿದವು. ಗುರುವಾರ ಭಾರತೀಯ ಸೇನೆಯ ಯೋಧರು ಜಿಲ್ಲೆಯಲ್ಲಿ ಪಥಸಂಚಲನ, ಧ್ವಜ ಮೆರವಣಿಗೆ ನಡೆಸಿದರು.

ಮುಖ್ಯಮಂತ್ರಿ ಬಿರೇನ್ ಸಿಂಗ್ ಶಾಂತಿ ಕಾಪಾಡಲು ಜನರನ್ನು ಒತ್ತಾಯಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ನೆರೆಯ ಮಿಜೋರಾಂನ ಮುಖ್ಯಮಂತ್ರಿ ಝೋರಾಂತಂಗ ಅವರು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಯಾಕೆಂದರೆ ನಾಗಾಗಳು, ಕುಕೀಗಳು ಹಾಗೂ ಮೈತೈಗಳೂ ಅಲ್ಲೂ ಇದ್ದಾರೆ. ಈ ಹಿಂಸಾಚಾರ ಅಲ್ಲಿಗೆ ಹಬ್ಬದಿರಲಿ ಎಂಬ ಆಶಯ ಅವರದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.

ʼಬೀರೇನ್‌ ಸಿಂಗ್‌ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ʼಬಿಜೆಪಿ ತನ್ನ ದ್ವೇಷದ ರಾಜಕಾರಣದಿಂದ ಸಮುದಾಯಗಳ ನಡುವೆ ಬಿರುಕುಗಳನ್ನು ಸೃಷ್ಟಿಸಿರುವುದರಿಂದ ಮಣಿಪುರ ಹೊತ್ತಿ ಉರಿಯುತ್ತಿದೆʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ತೀವ್ರ ಹಿಂಸಾಚಾರ; ರಕ್ಷಿಸಿ ಎಂದು ಟ್ವೀಟ್ ಮಾಡಿ, ಪ್ರಧಾನಿ ಮೋದಿಯನ್ನು ಟ್ಯಾಗ್​ ಮಾಡಿದ ಮೇರಿ ಕೋಮ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

EXPLAINER

ವಿಸ್ತಾರ Explainer: ಬ್ಯಾಂಕ್‌ ಪಾಲಾದ 2,000 ರೂ. ನೋಟುಗಳೆಷ್ಟು, ಡೆಪಾಸಿಟ್‌ ಬಡ್ಡಿ ದರ ಇಳಿಕೆ?

ವಿಸ್ತಾರ Explainer: ಬ್ಯಾಂಕ್‌ಗಳಲ್ಲಿ ಮೇ 23ರ ಬಳಿಕ 2,000 ರೂ. ವಿನಿಮಯ ಆಗುತ್ತಿದೆ. ಜಮೆಯಾದ ನೋಟುಗಳ ವಿವರ, ಪರಿಣಾಮದ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Edited by

2000 rupees note
Koo

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve bank of India) 2000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ, 2023ರ ಮೇ 23ರಿಂದ 80,000 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ 2,00 ರೂ. ನೋಟುಗಳು ಬ್ಯಾಂಕ್‌ಗಳಲ್ಲಿ ವಿನಿಮಯವಾಗಿದೆ. (Rs 2,000 notes withdrawal) ಮುಂದಿನ ನಾಲ್ಕು ತಿಂಗಳಿನಲ್ಲಿ ಎಲ್ಲ 3.6 ಕೋಟಿ ರೂ. ಮೌಲ್ಯದ 2,000 ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಬಂದಂತಾಗುವ ನಿರೀಕ್ಷೆ ಇದೆ. 2016ರಲ್ಲೂ ಬ್ಯಾಂಕ್‌ಗಳಲ್ಲಿ ನಗದು ಹೆಚ್ಚಳವಾದಾಗ ಡೆಪಾಸಿಟ್‌ ಬಡ್ಡಿ ದರಗಳು ಇಳಿಕೆಯಾಗಿತ್ತು.

ಆರ್‌ಬಿಐ ಪ್ರಕಾರ ಚಲಾವಣೆಯಲ್ಲಿರುವ ಕರೆನ್ಸಿಗಳ ಮೌಲ್ಯದಲ್ಲಿ (currency in circulation) ಮೇ 26ರ ವೇಳೆಗೆ 36,492 ಕೋಟಿ ರೂ. ಇಳಿಕೆಯಾಗಿದ್ದು, 34.41 ಲಕ್ಷ ಕೋಟಿ ರೂ.ಗೆ ತಗ್ಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ತಗ್ಗಲಿದೆ. ಚಲಾವಣೆಯಲ್ಲಿರುವ ನೋಟುಗಳೆಂದರೆ ಸಾರ್ವಜನಿಕರ ಕೈಯಲ್ಲಿ ಬಳಕೆಯಲ್ಲಿರುವ ನೋಟುಗಳು.

ಬ್ಯಾಂಕ್‌ಗಳಲ್ಲಿ ಸ್ಥಿತಿಗತಿ ಏನು? ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಚೇರ್ಮನ್‌ ದಿನೇಶ್‌ ಖರ ಪ್ರಕಾರ, ಬ್ಯಾಂಕ್‌ ಖಾತೆಗಳಿಗೆ 2,000 ರೂ.ಗಳ 14,000 ಕೋಟಿ ರೂ. ಮೌಲ್ಯದ ಕರೆನ್ಸಿಗಳು ಜಮೆಯಾಗಿದೆ. 3,000 ಕೋಟಿ ರೂ. ವಿನಿಮಯವಾಗಿದೆ. ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 3,100 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಬಂದಿವೆ. ಒಟ್ಟಾರೆಯಾಗಿ ಇಲ್ಲಿಯವರೆಗೆ ಒಟ್ಟು 80,000 ಕೋಟಿ ರೂ. ಮೌಲ್ಯದ 2,000 ರೂ. ಕರೆನ್ಸಿ ನೋಟುಗಳು ಜಮೆಯಾಗಿವೆ. ನೋಟುಗಳ ವಿನಿಮಯಕ್ಕು ಇನ್ನೂ 2023 ಸೆಪ್ಟೆಂಬರ್‌ 30 ತನಕ ಅವಕಾಶ ಇದೆ. ಹೀಗಾಗಿ ಅಷ್ಟರೊಳಗೆ ಇಡೀ 3.6 ಲಕ್ಷ ಕೋಟಿ ರೂ. ಮೌಲ್ಯದ 2000 ರೂ. ನೋಟುಗಳು ಬ್ಯಾಂಕಿಂಗ್‌ಗೆ ಮರಳುವ ನಿರೀಕ್ಷೆ ಇದೆ ಎನ್ನುತ್ತಾರೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರೂಪ್‌ ಚೀಫ್‌ ಎಕನಾಮಿಕ್‌ ಅಡ್ವೈಸರ್‌ ಸೌಮ್ಯ ಕಾಂತಿ ಘೋಷ್.‌

2000 ರೂ. ನೋಟು ವಿತ್‌ ಡ್ರಾವಲ್ಸ್‌ ಪರಿಣಾಮ ಬ್ಯಾಂಕಿಂಗ್‌ ವ್ಯವಸ್ಥೆಗೆ ಜೂನ್-ಸೆಪ್ಟೆಂಬರ್‌ ಅವಧಿಯಲ್ಲಿ 1.8 ಲಕ್ಷ ಕೋಟಿ ರೂ. ನಗದು ಲಭ್ಯತೆ ನಿರೀಕ್ಷಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಲಿಕ್ವಿಡಿಟಿಗೆ ಪೂರಕವಾದ ಸನ್ನಿವೇಶ ಸೃಷ್ಟಿಯಾದಾಗ ಅಲ್ಪಾವಧಿಗೆ ಠೇವಣಿ ಬಡ್ಡಿ ದರ ಇಳಿಯುವ ನಿರೀಕ್ಷೆ ಇದೆ ಎಂದು ಕೇರ್‌ ರೇಟಿಂಗ್‌ ವರದಿ ತಿಳಿಸಿದೆ. (care ratings report)

ಬಾಂಡ್‌ಗಳ ಉತ್ಪತ್ತಿ ಮೇಲೆ ಪರಿಣಾಮ ಏನು? ಹಣದುಬ್ಬರ ಕೂಡ ಮಂದಗತಿಯಲ್ಲಿದ್ದರೆ ಈ ವರ್ಷ ಬಾಂಡ್‌ಗಳ ಉತ್ತತ್ತಿ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಣ್ಣ ಉಳಿತಾಯಗಾರರು, ಪಿಂಚಣಿದಾರರು ಠೇವಣಿ ದರ ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳದಿದ್ದರೆ ಒಳಿತು ಎನ್ನುತ್ತಾರೆ ಹಣಕಾಸು ತಜ್ಞರು.

ಸರ್ಕಾರ 2016ರ ನವೆಂಬರ್‌ 8ರಂದು 500 ರೂ. ಮತ್ತು 1000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಇಲ್ಲಿಯವರೆಗಿನ ಅವಧಿಯಲ್ಲಿ ಸಾರ್ವಜನಿಕರಲ್ಲಿ ನಗದು ಲಭ್ಯತೆ ಹೊಸ ಎತ್ತರಕ್ಕೇರಿದೆ. ಈಗಲೂ ನಗದು ಬಳಕೆ ಪ್ರಾಬಲ್ಯದಲ್ಲಿದೆ. ಕಳೆದ 2016 ರಿಂದ ಇಲ್ಲಿಯವರೆಗಿನ 7 ವರ್ಷಗಲ್ಲಿ ನಗದು ಚಲಾವಣೆ ಹೇಗೆ ಏರಿತ್ತು ಎಂಬುದನ್ನು ಕೆಳಗಿನ ಟೇಬಲ್‌ನಲ್ಲಿ ನೋಡಿ.

2000 rupees notes

ಚಲಾವಣೆಯಲ್ಲಿರುವ ನೋಟುಗಳು 2016-2023

2016 ನವೆಂಬರ್‌ 25ರಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ2023ರ ಮೇ 19ಕ್ಕೆ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ
9.11 ಲಕ್ಷ ಕೋಟಿ ರೂ.33.71 ಲಕ್ಷ ಕೋಟಿ ರೂ.

ಹೀಗೆ ಆರ್‌ಬಿಐ ಅಂಕಿ ಅಂಶಗಳ ಪ್ರಕಾರ 2016-2023ರಲ್ಲಿ ಚಲಾವಣೆಯಲ್ಲಿ ನಗದು 87.6% ಹೆಚ್ಚಳವಾಗಿದೆ. ಸಾಲಗಳಿಗೆ ಬೇಡಿಕೆ ಸೃಷ್ಟಿಯಾದಾಗ ಅದನ್ನು ವಿತರಿಸಲು ಬೇಕಾದ ಫಂಡ್‌ ಅಥವಾ ನಿಧಿಯನ್ನು ಸಂಗ್ರಹಿಸುವ ಸವಾಲು ಬ್ಯಾಂಕ್‌ಗಳಿಗೆ ಸಹಜವಾಗಿಯೇ ಎದುರಾಗುತ್ತದೆ. ಹೀಗಾಗಿ ಎಫ್‌ಡಿ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಏರಿಸುತ್ತವೆ. ಅಧಿಕ ಬಡ್ಡಿ ದರದ ಆಸೆಯಿಂದ ಜನತೆ ಬ್ಯಾಂಕ್‌ ಗಳಲ್ಲಿ ದುಡ್ಡನ್ನು ಠೇವಣಿ ಇಡುತ್ತಾರೆ. ಆದರೆ ಆರ್‌ಬಿಐ 2000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಜನರು ಆ ನೋಟನ್ನು ಬ್ಯಾಂಕ್‌ಗಳಿಗೆ ಜಮೆ ಮಾಡುತ್ತಿದ್ದಾರೆ. ಇದರ ಪರಿಣಾಮ ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹವೂ ಏರಿಕೆಯಾಗುತ್ತದೆ. ಬ್ಯಾಂಕ್‌ಗಳಲ್ಲಿ ತಾತ್ಕಾಲಿಕವಾಗಿ ನಗದು ಲಭ್ಯತೆ ಹೆಚ್ಚುತ್ತದೆ. ಆಗ ಎಫ್‌ಡಿ ಬಡ್ಡಿ ದರ ಏರಿಸುವ ಅಗತ್ಯ ಬರುವುದಿಲ್ಲ. ಹೀಗಾಗಿ ಎಫ್‌ಡಿ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ಬ್ಯಾಂಕಿಂಗ್‌ ತಜ್ಞರು.

ಎರಡನೆಯದಾಗಿ ರಿಟೇಲ್‌ ಹಣದುಬ್ಬರ ಕಳೆದ ಎರಡು ತಿಂಗಳಿನಿಂದ 6%ಕ್ಕಿಂತ ಕೆಳಮಟ್ಟದಲ್ಲಿದೆ. ಇದು ಮಾರ್ಚ್‌ನಲ್ಲಿ 5.66% ಹಾಗೂ ಏಪ್ರಿಲ್‌ನಲ್ಲಿ 6% ಇತ್ತು. ಹೀಗಾಗಿ ಇದು ಕೂಡ ಎಫ್‌ಡಿ ದರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಎಫ್‌ಡಿ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಯದ್ದಕ್ಕೆ 0.20-0.30% ಇಳಿಕೆ ನಿರೀಕ್ಷಿಸಲಾಗಿದೆ. ಭಾರತದಲ್ಲಿ ಮಧ್ಯಮ ವರ್ಗದ ಜನತೆ ಸಾಮಾನ್ಯವಾಗಿ ಉಳಿತಾಯ ಪ್ರವೃತ್ತಿ ಹೊಂದಿದವರು. ಅದರಲ್ಲೂ ಇಳಿಗಾಲದ ಹಣಕಾಸು ಭದ್ರತೆಗೆ ಬ್ಯಾಂಕ್‌ ಎಫ್‌ಡಿ ಬಡ್ಡಿ ದರವನ್ನು ಅನೇಕ ಮಂದಿ ಅವಲಂಬಿಸುತ್ತಾರೆ. ಹೀಗಾಗಿ ಈ ಸಂದರ್ಭ ಅಂದರೆ ಬಡ್ಡಿ ದರ ಉನ್ನತ ಮಟ್ಟದಲ್ಲಿ ಇದ್ದಾಗ ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: 2000 Notes Withdrawan : 2,000 ರೂ. ನೋಟು ಚಲಾವಣೆಯಿಂದ ಹಿಂತೆಗೆತ: ಆರ್‌ಬಿಐ ಘೋಷಣೆ

Continue Reading

EXPLAINER

US Debt Ceiling Crisis : ಸಾಲದ ಸುಳಿಯಲ್ಲಿ ಅಮೆರಿಕ, ಡಿಫಾಲ್ಟ್ ತಪ್ಪಿಸಲು ಬೈಡೆನ್‌ ಶತಪ್ರಯತ್ನ

US Debt Ceiling Crisis ಅಮೆರಿಕ ಸಾಲದ ಸುಳಿಗೆ ಸಿಲುಕಿದ್ದು ಡಿಫಾಲ್ಟ್‌ ಆಗುವುದನ್ನು ತಪ್ಪಿಸಲು ಸರ್ಕಾರದ ಸಾಲದ ಮಿತಿಯನ್ನು ಏರಿಸಲು ಅಧ್ಯಕ್ಷ ಬೈಡೆನ್‌ ಕಸರತ್ತು ನಡೆಸಿದ್ದಾರೆ. ವಿವರ ಇಲ್ಲಿದೆ.

VISTARANEWS.COM


on

Edited by

USA whitehouse building
Koo

ವಾಷಿಂಗ್ಟನ್:‌ ಅಮೆರಿಕದ ಸಾಲದ ಬಿಕ್ಕಟ್ಟು ಅಕ್ಷರಶಃ ಅದರ ನಿಯಂತ್ರಣ ತಪ್ಪಿದೆ. ಜಗತ್ತಿನ ದೊಡ್ಡಣ್ಣನಂತಿದ್ದ ಅಮೆರಿಕ 31 ಟ್ರಿಲಿಯನ್‌ ಡಾಲರ್‌ (ಅಂದಾಜು 2,542 ಲಕ್ಷ ಕೋಟಿ ರೂ.) ರಾಕೆಟ್‌ನಂತೆ ಸಾಲದ ಹೊರೆ ಏರುತ್ತಿದ್ದು, ಬೈಡೆನ್‌ ಸರ್ಕಾರಕ್ಕೆ ಭಾರಿ ತಲೆನೋವಾಗಿದೆ. 1990ಕ್ಕೆ ಹೋಲಿಸಿದರೆ ಅಮೆರಿಕದ ಸಾಲದ ಪ್ರಮಾಣ ಹತ್ತು ಪಟ್ಟು ಏರಿದೆ. 2000ಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚಳವಾಗಿದೆ. ವರ್ಷಕ್ಕೆ 600 ಶತಕೋಟಿ ಡಾಲರ್‌ ಕೇವಲ ಬಡ್ಡಿಯಾಗಿ ಕಟ್ಟಬೇಕಾಗುತ್ತದೆ. ಸದ್ಯಕ್ಕೆ ಡಿಫಾಲ್ಟ್‌ ಹಾಗೂ ಭವಿಷ್ಯದಲ್ಲಿ ದಿವಾಳಿ ಆಗುವುದನ್ನು ತಪ್ಪಿಸಲು ಅಧ್ಯಕ್ಷ ಜೋ ಬೈಡೆನ್‌ ಶತಪ್ರಯತ್ನ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಆಗಿದ್ದೇನು?

ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಸಿತ್ತು. ಇದರ ಪರಿಣಾಮ ಸಾಲದ ಬೆಟ್ಟವೂ ಬೆಳೆದಿದೆ. ಹೊಸ ಸಾಲ ತೆಗೆಯಲು ಕಾನೂನಿನ ಅಡಚಣೆಗಳನ್ನು ನಿವಾರಿಸಬೇಕಾಗಿದೆ. ಈ ಕಸರತ್ತನ್ನು ಬೈಡೆನ್‌ ಸರ್ಕಾರ ನಡೆಸುತ್ತಿದೆ. ಆದರೆ ಇದರ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಅಮೆರಿಕದ ಡಾಲರ್‌ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರಿಸರ್ವ್‌ ಕರೆನ್ಸಿಯಾಗಿ ಪ್ರಾಬಲ್ಯ ಮೆರೆಯುತ್ತಿದೆ. ಆದರೆ ಈ ಪಟ್ಟವನ್ನು ಸಾಲದ ಬಿಕ್ಕಟ್ಟಿನ ಪರಿಣಾಮ ಬಿಟ್ಟುಕೊಡಲಿದೆಯೇ ಎಂಬ ಪ್ರಶ್ನೆ ಉಂಟಾಗಿದೆ. ಮುಖ್ಯವಾಗಿ ಅಮೆರಿಕದ ಆರ್ಥಿಕ ಬಿಕ್ಕಟ್ಟು ಭಾರತದ ಷೇರು ಮಾರುಕಟ್ಟೆ, ಹಣಕಾಸು ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಸಿಲುಕಲಿದೆಯೇ ಎಂಬ ಆತಂಕವೂ ಸೃಷ್ಟಿಯಾಗಿದೆ.

dollar

ಸಾಲದ ಮಿತಿ ಹೆಚ್ಚಿಸಲು ಅಮೆರಿಕ ನಿರ್ಧಾರ:

ಅಮೆರಿಕ ಸರ್ಕಾರ ತೆಗೆದುಕೊಳ್ಳಬಹುದಾದ ಗರಿಷ್ಠ ಸಾಲದ ಮಿತಿಯನ್ನು ಡೆಟ್‌ ಸೈಲಿಂಗ್‌ ಲಿಮಿಟ್‌ (Debt ceiling limit) ಎನ್ನುತ್ತಾರೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ನಲ್ಲಿ ಸಾಲ ಪಡೆಯಲು ಒಂದು ಮಿತಿ ಇರುತ್ತದೆಯಲ್ಲವೇ? ಅದೇ ರೀತಿ ಅಮೆರಿಕ ಸರ್ಕಾರಕ್ಕೂ ಇದೆ. ಒಂದು ವೇಳೆ ಕ್ರೆಡಿಟ್‌ ಕಾರ್ಡ್‌ ಮೂಲಕ ಹೆಚ್ಚಿನ ಸಾಲ ಪಡೆಯಲು ಏನು ಮಾಡಬಹುದು? ಕ್ರೆಡಿಟ್‌ ಲಿಮಿಟ್‌ ಅನ್ನು ಹೆಚ್ಚಿಸುವಂತೆ ಬ್ಯಾಂಕಿಗೆ ಮನವಿ ಮಾಡಬಹುದು, ಅಲ್ಲವೇ ಅದೇ ರೀತಿ ಅಮೆರಿಕ ಸರ್ಕಾರ ಇದೀಗ ತನ್ನ ಸಾಲದ ಮಿತಿಯನ್ನು ಹೆಚ್ಚಿಸಿ ಡಿಫಾಲ್ಟ್‌ ಅಥವಾ ಭವಿಷ್ಯದಲ್ಲಿ ದಿವಾಳಿಯಾಗುವುದನ್ನು ತಪ್ಪಿಸಲು ಉದ್ದೇಶಿಸಿದೆ. ಈಗ 31.40 ಟ್ರಿಲಿಯನ್‌ ಡಾಲರ್‌ನ ಮಿತಿ ಇದೆ. ಈಗಾಗಲೇ ಅಮೆರಿಕ 31.48 ಟ್ರಿಲಿಯನ್‌ ಡಾಲರ್‌ ಸಾಲವನ್ನು ಅಮೆರಿಕ ಹೊಂದಿದೆ. 2023ರ ಜನವರಿ 19ರಂದು ಅಮೆರಿಕ ಸರ್ಕಾರ ಸಾಲದ ಗರಿಷ್ಠ ಮಿತಿಯನ್ನು ಮುಟ್ಟಿತ್ತು. ಹೀಗಾಗಿ ಹೊಸ ಸಾಲ ಹುಟ್ಟುತ್ತಿಲ್ಲ. ಹೊಸ ಸಾಲ ಬೇಕಿದ್ದರೆ ಕ್ರೆಡಿಟ್‌ ಲಿಮಿಟ್‌ ಅನ್ನು 2023ರ ಜೂನ್‌ 5ರೊಳಗೆ ವಿಸ್ತರಿಸಲೇಬೇಕು.

ಅಮೆರಿಕಕ್ಕೆ ಹೊಸ ಸಾಲ ಏಕೆ ಬೇಕು?

US president Joe Biden

ಅಮೆರಿಕ ಮತ್ತಷ್ಟು ಸಾಲವನ್ನು ಪಡೆಯದಿದ್ದರೆ ಜೂನ್‌ 1ಕ್ಕೆ ಭಾರಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ‌ಜೂನ್‌ 5ರ ಬಳಿಕ ಸಾಲ ತೀರಿಸಲು ಆಗದೆ ಡಿಫಾಲ್ಟ್‌ ಆಗಬಹುದು. (ಸುಸ್ತಿ ಸಾಲಗಾರ) ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಕೊಡಲು, ಮಿಲಿಟರಿ ವೆಚ್ಚ ಭರಿಸಲು, ಸಬ್ಸಿಡಿ ವೆಚ್ಚ ನೀಡಲು, ಈಗಾಗಲೇ ಪಡೆದಿರುವ ಸಾಲದ ಬಡ್ಡಿ ದರ ಪಾವತಿಸಲು ಸಾಧ್ಯವಾಗದು. ಆಗ ಅಮೆರಿಕದ ಕ್ರೆಡಿಟ್‌ ರೇಟಿಂಗ್‌ ಇಳಿಯಲಿದೆ. ಇದರ ಪರಿಣಾ ವಿಶ್ವವ್ಯಾಪಿಯಾಗುವ ಆತಂಕ ಇದೆ. ಈ ಹಿಂದೆಯೂ ಅಮೆರಿಕ ಇಂಥ ಬಿಕ್ಕಟ್ಟಿಗೆ ಸಿಲುಕಿತ್ತು. ಆಗ ಸಾಲದ ಮಿತಿಯನ್ನು ವಿಸ್ತರಿಸಲಾಗಿತ್ತು. ಈಗ ಮತ್ತೆ ಅಂಥದ್ದೇ ಸ್ಥಿತಿ ಎದುರಾಗಿದೆ.

ಸಾಲದ ಬೆಟ್ಟ ಏರುತ್ತಲೇ ಇದ್ದರೆ ಅದೂ ಸಮಸ್ಯೆಯೇ. ಹೆಚ್ಚು ಹಣದುಬ್ಬರ, ಹೆಚ್ಚು ತೆರಿಗೆಗೆ ಅಮೆರಿಕ ಸಾಕ್ಷಿಯಾಗಬಹುದು. ಇದರ ಪರಿಣಾಮ ಜಿಡಿಪಿ ಕುಸಿದು ಆರ್ಥಿಕ ಹಿಂಜರಿತ ಸಂಭವಿಸಿದರೆ ಲಕ್ಷಾಂತರ ಉದ್ಯೋಗಗಳು ನಷ್ಟವಾಗಲಿದೆ. ಅಮೆರಿಕದ ಆದಾಯದ 7%ನಷ್ಟು ಈಗಾಗಲೇ ಸಾಲದ ಬಡ್ಡಿ ತೀರಿಸಲು ಬಳಕೆಯಾಗುತ್ತದೆ. ಅಂದರೆ ಅಮೆರಿಕದ ರಕ್ಷಣಾ ಬಜೆಟ್‌ಗೆ ಸಮವಾಗುವಷ್ಟು ಮೊತ್ತ. ಹೀಗಾಗಿ ಪ್ರತಿಪಕ್ಷಗಳ ಬೆಂಬಲ ಪಡೆದು ಸರ್ಕಾರದ ಸಾಲದ ಲಿಮಿಟ್‌ ಅನ್ನು ಹೆಚ್ಚಿಸಲು ಅಧ್ಯಕ್ಷ ಜೋ ಬೈಡೆನ್‌ ಕಸರತ್ತು ನಡೆಸಿದ್ದಾರೆ. ಆದರೆ ಪ್ರತಿಪಕ್ಷಗಳು ವೆಚ್ಚ ನಿಯಂತ್ರಣಕ್ಕೆ ಒತ್ತಾಯಿಸುತ್ತಿವೆ. ಆದರೆ ಯಾವುದೇ ಷರತ್ತಿಲ್ಲದೆ ಸಾಲದ ಮಿತಿ ಹೆಚ್ಚಿಸಲು ಬೈಡೆನ್‌ ಯತ್ನಿಸುತ್ತಿದ್ದಾರೆ.

ಅಮೆರಿಕದ ಸಾಲದ ಹೊರೆ

1930 : 16 ಶತಕೋಟಿ ಡಾಲರ್‌

1990: 3.2 ಟ್ರಿಲಿಯನ್‌ ಡಾಲರ್‌

2010: 5.6 ಟ್ರಿಲಿಯನ್‌ ಡಾಲರ್‌

2020 :‌ 27.7 ಟ್ರಿಲೊಯನ್‌ ಡಾಲರ್

2023: 31.8 ಟ್ರಿಲಿಯನ್‌ ಡಾಲರ್

ಭಾರತದ ಷೇರು ಮಾರುಕಟ್ಟೆ ಮೇಲೆ ಪರಿಣಾಮ?

ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಬಗೆಹರಿಯದಿದ್ದರೆ ಭಾರತದ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಅಮೆರಿಕದಲ್ಲಿ ಬಾಂಡ್‌ಗಳ ಬಡ್ಡಿ ದರ ಹೆಚ್ಚಿದರೆ ಹೂಡಿಕೆದಾರರು ಡಾಲರ್‌ನಲ್ಲಿ ಹೂಡಿಕೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಆಗ ಷೇರು ಮಾರುಕಟ್ಟೆಯಿಂದ ಹೂಡಿಕೆಯ ಹೊರ ಹರಿವು ಹೆಚ್ಚಬಹುದು.

ಸಾಲದ ಮಿತಿ ಹೆಚ್ಚಿಸಲು ಕೊನೆಗೂ ಒಪ್ಪಂದ:

ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡೆನ್‌ ಹಾಗೂ ರಿಪಬ್ಲಿಕನ್‌ ನಾಯಕ ಕೆವಿನ್‌ ಮೆಕಾರ್ತಿ ಕಳೆದ ಶನಿವಾರ ಸರ್ಕಾರದ ಸಾಲದ ಮಿತಿ ಹೆಚ್ಚಿಸಲು ಒಪ್ಪಂದ ಅಂತಿಮವಾಗಿದೆ ಎಂದು ಘೋಷಿಸಿದ್ದಾರೆ. ಮುಂದಿನ 2 ವರ್ಷಗಳಿಗೆ ಇದು ಅನ್ವಯವಾಗಲಿದೆ. ಮೇ 31ಕ್ಕೆ ಈ ಬಗ್ಗೆ ಅಮೆರಿಕದ ಸಂಸತ್ತಿನಲ್ಲಿ ಮತದಾನ ನಡೆಯಲಿದೆ. ಅಂದಹಾಗೆ ಅಮೆರಿಕ ಈ ರೀತಿ ಸಾಲದ ಮಿತಿಯನ್ನು ಹೆಚ್ಚಿಸುತ್ತಾ ಹೋಗುವುದು ಇದು ಹೊಸತಲ್ಲ. ಈ ಹಿಂದೆ 2013ರಲ್ಲಿಯೂ ವಿಸ್ತರಿಸಿತ್ತು. ಇತ್ತೀಚೆಗೆ ಅಂದರೆ 2021ರ ಡಿಸೆಂಬರ್‌ನಲ್ಲೂ ವಿಸ್ತರಿಸಲಾಗಿತ್ತು.

ಇದನ್ನೂ ಓದಿ :Good News | ಇಳಿಯಲಿದೆ ಚಿನ್ನದ ದರ! ಡಾಲರ್‌, ಅಮೆರಿಕದ ಎಕಾನಮಿ, ತೈಲ ದರ ನಿರ್ಣಾಯಕ

Continue Reading

EXPLAINER

ವಿಸ್ತಾರ Explainer: ಹೊಸ ಸಂಸತ್​ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?

ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು ಎಂದು ಅಮಿತ್ ಶಾ ತಿಳಿಸಿದ್ದಾರೆ.

VISTARANEWS.COM


on

Edited by

Sengol presented to PM Modi
Koo

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಇಂದು ನೂತನ ಸಂಸತ್ ಭವನವನ್ನು (New Parliament Building) ಪ್ರಧಾನಿ ಮೋದಿ (PM Modi)ಯವರು ಉದ್ಘಾಟನೆ ಮಾಡಿದ್ದಾರೆ. ಹಾಗೇ, ಹೊಸದಾಗಿ ನಿರ್ಮಾಣವಾದ ಸಂಸತ್​ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್​)ವನ್ನು ಪ್ರತಿಷ್ಠಾಪಿಸಿದ್ದಾರೆ. ಸ್ಪೀಕರ್​ ಕುರ್ಚಿಯ ಪಕ್ಕವೇ ರಾಜದಂಡವೂ ನಿಂತಿದೆ.

ʼ‘ಸೆಂಗೋಲ್ ಅಂದರೆ ರಾಜದಂಡ ಎಂಬುದು ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಬ್ರಿಟಿಷರು ಭಾರತಕ್ಕೆ ಆಡಳಿತ/ಅಧಿಕಾರವನ್ನು ಹಸ್ತಾಂತರ ಮಾಡಿ ಹೋದ ನಂತರ ತಮಿಳುನಾಡಿನ ಜನರು, ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರಿಗೆ ಈ ರಾಜದಂಡ ನೀಡಿದ್ದರು. ಭಾರತದಲ್ಲಿ ಆಡಳಿತ ನಡೆಸುವ ಅಧಿಕಾರ ಭಾರತಕ್ಕೇ ಸಿಕ್ಕಿದ್ದರಿಂದ 1947ರ ಆಗಸ್ಟ್​ 14ರಂದು ಬೆಳಗ್ಗೆ 10.45ಕ್ಕೆ ಈ ಸೆಂಗೋಲ್​​ನ್ನು ನೆಹರೂ ಅವರಿಗೆ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಚಿನ್ನದ್ದು ʼ’ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಇದು ಎಲ್ಲಿತ್ತು?

ʼ‘ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು. ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಾಗುತ್ತಿದ್ದಂತೆ, ಅದನ್ನು ಹೊಸ ಸಂಸತ್​ ಭವನದಲ್ಲಿ ಇಡಲು ತೀರ್ಮಾನಿಸಿದ್ದಾರೆ. ಸೆಂಗೋಲ್​ ಎಂದರೆ ತಮಿಳಿನ ಭಾಷೆಯಲ್ಲಿ ಸಮೃದ್ಧ ಸಂಪತ್ತು ಎಂದರ್ಥ’ʼ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಇದನ್ನೂ ಓದಿ: Photo Gallery | ಆಕರ್ಷಕ ಹೊಸ ಸಂಸತ್‌ ಭವನ! ಗಮನ ಸೆಳೆಯುತ್ತಿವೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಚಿತ್ರಗಳು

ಏನೀ ಸೆಂಗೋಲ್‌ನ ಇತಿಹಾಸ?

ತಮಿಳುನಾಡು ಮೂಲದ ಚೋಳ ರಾಜವಂಶ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅಸಾಧಾರಣ ಕೊಡುಗೆ ನೀಡಿತ್ತು. ಚೋಳರ ಕಾಲದಲ್ಲಿ ಸೆಂಗೋಲ್ ಎಂಬುದು ರಾಜರ ಪಟ್ಟಾಭಿಷೇಕದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿತ್ತು. ಇದೊಂದು ಧಾರ್ಮಿಕ ಮಹತ್ವ ಹೊಂದಿರುವ ರಾಜದಂಡ. ಚಂದದ ಕೆತ್ತನೆಗಳು, ಸಂಕೀರ್ಣವಾದ ಅಲಂಕಾರಿಕ ಅಂಶಗಳು ಇದರ ವೈಶಿಷ್ಟ್ಯ. ರಾಜಪರಂಪರೆಯ ಪಾಲಿಗೆ ಇದು ಪವಿತ್ರ ಲಾಂಛನ. ಒಬ್ಬ ಆಡಳಿತಗಾರನಿಂದ ಮುಂದಿನವರಿಗೆ ಅಧಿಕಾರದ ವರ್ಗಾವಣೆಯನ್ನು ಇದು ಪ್ರತಿನಿಧಿಸುತ್ತಿತ್ತು.

ಬ್ರಿಟಿಷರು ಭಾರತೀಯರ ಕೈಗೆ ಅಧಿಕಾರ ಹಸ್ತಾಂತರಿಸಲಿದ್ದ ಸಂದರ್ಭದಲ್ಲಿ, ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಪಂಡಿತ್ ಜವಾಹರಲಾಲ್ ಮುಂದೆ ಒಂದು ಪ್ರಶ್ನೆಯನ್ನು ಇಟ್ಟರು. ಈ ಮಹತ್ವದ ಘಟನೆಯನ್ನು ಸೂಚಿಸಲು ಸೂಕ್ತವಾದ ಸಮಾರಂಭ ಹೇಗೆ ಮಾಡಬಹುದು ಎಂದು ವಿಚಾರಿಸಿದರು. ನೆಹರೂ ಅವರು ಈ ಪ್ರಶ್ನೆಯನ್ನು ಆ ಕಾಲದ ದೊಡ್ಡ ಮುತ್ಸದ್ಧಿ ಸಿ.ರಾಜಗೋಪಾಲಾಚಾರಿ (ರಾಜಾಜಿ) ಯವರ ಮುಂದಿಟ್ಟರು.

ರಾಜಾಜಿಯವರು ಚೋಳ ರಾಜವಂಶದ ʼರಾಜದಂಡʼದ ಕ್ರಮದಿಂದ ಸ್ಫೂರ್ತಿ ಪಡೆಯುವಂತೆ ನೆಹರೂಗೆ ಸಲಹೆ ನೀಡಿದರು. ರಾಜಾಜಿಯವರ ಪ್ರಕಾರ ಚೋಳ ಮಾದರಿಯ ಅಧಿಕಾರ ಹಸ್ತಾಂತರ ʼಸೆಂಗೋಲ್ʼನ ಸಾಂಕೇತಿಕ ಹಸ್ತಾಂತರವನ್ನು ಒಳಗೊಂಡಿತ್ತು. ಒಬ್ಬ ರಾಜ ತನ್ನ ಉತ್ತರಾಧಿಕಾರಿಗೆ ಅಧಿಕಾರ ಮತ್ತು ಶಕ್ತಿಯ ಸಂಕೇತವಾದ ಸೆಂಗೋಲ್‌ ಹಸ್ತಾಂತರಿಸುತ್ತಿದ್ದ. ಇದು ʼಧರ್ಮʼವನ್ನು ಪ್ರತಿನಿಧಿಸುತ್ತಿತ್ತು. ಧರ್ಮ ಹಾಗೂ ನ್ಯಾಯಯುತವಾಗಿ ಅಧಿಕಾರವನ್ನು ನಡೆಸುವ ವಚನವನ್ನು ಈ ಮೂಲಕ ತೆಗೆದುಕೊಳ್ಳಲಾಗುತ್ತಿತ್ತು.

ಸೆಂಗೋಲ್‌ ಅನ್ನು ಪಡೆಯಲು ರಾಜಾಜಿಯವರು ತಮಿಳುನಾಡಿನ ತಂಜಾವೂರು ಜಿಲ್ಲೆಯ ʼತಿರುವವಾಡುತುರೈ ಅಧೀನಂʼ ಎಂಬ ಧಾರ್ವಿುಕ ಮಠವನ್ನು ಸಂಪರ್ಕಿಸಿದರು. ಇದು ಶಿವನ ಬೋಧನೆ ಮತ್ತು ಸಂಪ್ರದಾಯ ಅನುಸರಿಸುವ ಬ್ರಾಹ್ಮಣೇತರ ಸನ್ಯಾಸಿಗಳ ಸಂಸ್ಥೆ. 500ಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸೆಂಗೋಲ್‌ ತಯಾರಿಕೆಯಲ್ಲಿ ಇವರ ನೆರವನ್ನು ರಾಜಾಜಿ ಬಯಸಿದರು.

ರಾಜಾಜಿ ಜವಾಹರಲಾಲ್ ನೆಹರೂ

ತಿರುವವಾಡುತುರೈ ಅಧೀನಂ ಮುಖ್ಯಸ್ಥರು ಸೆಂಗೋಲ್ ಅನ್ನು ರಚಿಸುವ ಹೊಣೆ ಹೊತ್ತರು. ಆಗಿನ ಕಾಲದ ಹೆಸರಾಂತ ಆಭರಣ ತಯಾರಕ ಹಾಗೂ ವ್ಯಾಪಾರಿಗಳಾದ ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಎಂಬವರಿಗೆ ಇದನ್ನು ತಯಾರಿಸುವ ಕೆಲಸವನ್ನು ವಹಿಸಲಾಯಿತು. ವುಮ್ಮಿಡಿ ಕುಟುಂಬವು ಸೆಂಗೋಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಅಂದು ಸೆಂಗೋಲ್‌ ತಯಾರಿಯಲ್ಲಿ ಭಾಗವಹಿಸಿದ್ದ ಇಬ್ಬರು ಕುಶಲಕರ್ಮಿಗಳು ಇಂದಿಗೂ ಜೀವಂತವಿದ್ದಾರೆ. ಅವರೇ ವುಮ್ಮಿಡಿ ಎತ್ತಿರಾಜುಲು (96) ಮತ್ತು ವುಮ್ಮಿಡಿ ಸುಧಾಕರ್ (88).

ನೋಡಲು ಸುಂದರವಾಗಿರುವ ಈ ಸೆಂಗೋಲ್‌ ಸುಮಾರು ಐದು ಅಡಿ ಉದ್ದವಿದೆ. ನ್ಯಾಯ ಹಾಗೂ ಪರಿಶ್ರಮದ ಸಂಕೇತವಾದ ನಂದಿಯ ಪ್ರತಿಕೃತಿ ಸೆಂಗೋಲ್‌ನ ತುದಿಯಲ್ಲಿದೆ.

ಇದರ ತಯಾರಿಯ ಬಳಿಕ ಇದನ್ನು ತೆಗೆದುಕೊಂಡು, ಐತಿಹಾಸಿಕ ದಿನವಾದ 1947ರ ಆಗಸ್ಟ್ 14ರಂದು ಅಧಿಕಾರ ಹಸ್ತಾಂತರದಲ್ಲಿ ಭಾಗವಹಿಸಲು ತಮಿಳುನಾಡಿನಿಂದ ಮೂವರು ದಿಲ್ಲಿಗೆ ತೆರಳಿದರು. ತಿರುವವಾಡುತುರೈ ಅಧೀನಂನ ಪ್ರಧಾನ ಅರ್ಚಕರು, ನಾದಸ್ವರಂ ವಾದಕ ರಾಜರತ್ನಂ ಪಿಳ್ಳೈ ಮತ್ತು ಓದುವರ್ (ಗಾಯಕ) ತಂಡದಲ್ಲಿದ್ದರು. ಪ್ರಧಾನ ಅರ್ಚಕರು ಸೆಂಗೋಲ್ ಅನ್ನು ಲಾರ್ಡ್ ಮೌಂಟ್ ಬ್ಯಾಟನ್‌ಗೆ ಅರ್ಪಿಸಿದರು. ನಂತರ ವೈಸರಾಯ್‌ ಕಡೆಯಿಂದ ಅದನ್ನು ಪಡೆದು, ಅದನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿ, ಪಂಡಿತ್ ಜವಾಹರಲಾಲ್ ನೆಹರು ಅವರ ನಿವಾಸಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಅಲ್ಲಿ ಅದನ್ನು ನೆಹರೂ ಅವರಿಗೆ ಹಸ್ತಾಂತರಿಸಲಾಯಿತು.

ಹೀಗೆ ದೇಶದ ಇತಿಹಾಸದ ಮಹತ್ವದ ಮೈಲಿಗಲ್ಲೊಂದನ್ನು ಪ್ರತಿನಿಧಿಸಿದ, ಸ್ವತಂತ್ರ ರಾಷ್ಟ್ರವಾಗಿ ತನ್ನ ಪ್ರಯಾಣವನ್ನು ದೇಶ ಆರಂಭಿಸಿದ ಇತಿಹಾಸಕ್ಕ ಸಾಕ್ಷಿಯಾದ ಸೆಂಗೋಲ್‌ ಇನ್ನು ಮುಂದೆ ಸಂಸತ್ತಿನಲ್ಲಿಯೇ ಇರಲಿದೆ.

ಇದನ್ನೂ ಓದಿ: New Parliament Building: ನೂತನ ಸಂಸತ್‌ ಭವನದ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿದ ಟಿಎಂಸಿ, ಆಪ್‌; ಕೊಟ್ಟ ಕಾರಣ ಹೀಗಿದೆ

Continue Reading

EXPLAINER

ವಿಸ್ತಾರ Explainer: New Parliament Building: ಹೇಗಿದೆ ಹೊಸ ಸಂಸತ್‌ ಭವನ? ಇಲ್ಲಿದೆ ನೋಡಿ ವಿಡಿಯೊ

ಮೇ 28ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಭವ್ಯವಾದ ಹೊಸ ಸಂಸತ್‌ ಕಟ್ಟಡವನ್ನು (New Parliament Building) ಉದ್ಘಾಟಿಸಲಿದ್ದಾರೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ದೇಗುಲವೆನಿಸಲಿದೆ ಈ ಭವ್ಯ ಭವನ. ಈ ಮಹತ್ವದ ಭವನದ ವಿಶೇಷತೆಗಳು ಇಲ್ಲಿವೆ.

VISTARANEWS.COM


on

Edited by

new parliment
Koo

ನಮ್ಮ ದೇಶದ ವೃತ್ತಾಕಾರದ ಸಂಸತ್‌ ಭವನ ಸ್ವಾತಂತ್ರ್ಯೋತ್ತರ ಕಾಲದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹಲವು ಅಧಿಕಾರ ಹಸ್ತಾಂತರಗಳು, ಹಲವು ಚಾರಿತ್ರಿಕ ಕಲಾಪಗಳು, ಹಲವು ಜಾಗತಿಕ ಖ್ಯಾತಿಯ ಮುತ್ಸದ್ಧಿಗಳು ಹಾಗೂ ಚರ್ಚೆಗಳು…ಇತ್ಯಾದಿ. ಇಷ್ಟರಲ್ಲಿಯೇ ಈ ಸಂಸತ್‌ ಭವನ ಇತಿಹಾಸ ಸೇರಲಿದೆ. ಹೊಸ, ಭವ್ಯ ಸಂಸತ್‌ ಭವನ (New Parliament Building) ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬರೆಯಲಿದೆ.

ಮೂಲ ಸಂಸತ್‌ ಭವನ ಕಟ್ಟಡ ರಚನೆಯಾದುದು 1927ರಲ್ಲಿ. ಹತ್ತಿರ ಹತ್ತಿರ ಒಂದು ಶತಮಾನ ಇದಕ್ಕೆ ಪೂರ್ಣಗೊಂಡಿದೆ. ಶತಮಾನ ಹಳೆಯದಾದ ಈ ರಚನೆ ಇಂದಿನ ಹಾಗೂ ಮುಂದಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗದು. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ ಮತ್ತು ರಾಜ್ಯಸಭೆ ಸಂಸತ್ತಿಗೆ ಹೊಸ ಕಟ್ಟಡ ನಿರ್ಮಿಸಲು ನಿರ್ಣಯಗಳನ್ನು ಅಂಗೀಕರಿಸಿದವು. ಡಿಸೆಂಬರ್ 10, 2020ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಭವನಕ್ಕೆ ಶಂಕುಸ್ಥಾಪನೆ ಮಾಡಿದರು.

new parliment

ಎಷ್ಟು ದೊಡ್ಡದು?

ಈ ಕಟ್ಟಡವನ್ನು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಸೆಂಟ್ರಲ್ ವಿಸ್ಟಾ ಕಟ್ಟಡಗಳ ಮಾದರಿಯಲ್ಲಿ ನಿರ್ಮಿಸಲಾದ ಹೊಸ ಸಂಸತ್ತು ತ್ರಿಕೋನಾಕೃತಿಯಲ್ಲಿದೆ. ಇದು ಲೋಕಸಭೆ, ರಾಜ್ಯಸಭೆ, ಸೆಂಟ್ರಲ್ ಲಾಂಜ್ ಮತ್ತು ಸಾಂವಿಧಾನಿಕ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ. ಹೊಸ ಲೋಕಸಭೆಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ರಾಜ್ಯಸಭೆಯು ರಾಷ್ಟ್ರೀಯ ಪುಷ್ಪವಾದ ಕಮಲದ ಹೋಲಿಕೆಯನ್ನು ಹೊಂದಿದೆ. ರಾಷ್ಟ್ರಪತಿ ಭವನದಂತಹ ಭಾರತದ ಪ್ರಮುಖ ಪಾರಂಪರಿಕ ಕಟ್ಟಡಗಳಿಂದಲೂ ವಿವಿಧ ವಾಸ್ತುಶಿಲ್ಪದ ಪ್ರಭಾವಗಳನ್ನು ಪಡೆದಿದೆ.

ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಬಹುದು. ಹೊಸ ಸಂಸತ್ ಕಟ್ಟಡ ಲೋಕಸಭೆಯಲ್ಲಿ 888 ಸದಸ್ಯರು ಮತ್ತು 384 ಸದಸ್ಯರಿಗೆ ಸ್ಥಳಾವಕಾಶವನ್ನು ಹೊಂದಿದೆ. ಕೇಂದ್ರ ಪ್ರಾಂಗಣದಲ್ಲಿ ಎರಡೂ ಸದನಗಳ ಸದಸ್ಯರು ಮುಕ್ತವಾಗಿ ಸಭೆ ಸೇರಲು ಸ್ಥಳವಿದೆ. ಜಂಟಿ ಅಧಿವೇಶನ ನಡೆದಾಗ ಇದನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಪುನರಾಭಿವೃದ್ಧಿಯಾದ ಶ್ರಮ ಶಕ್ತಿ ಭವನದಲ್ಲಿ ಸಂಸದರಿಗಾಗಿ ಸುಮಾರು 800 ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.

new parliment

ನೂತನ ಕಟ್ಟಡವು ಆರು ಸಮಿತಿ ಕೊಠಡಿಗಳನ್ನು ಹೊಂದಿರುತ್ತದೆ. ಪ್ರಸ್ತುತ ಕಟ್ಟಡದಲ್ಲಿ ಅಂತಹ ಮೂರು ಕೊಠಡಿಗಳಷ್ಟೇ ಇವೆ. ಮಂತ್ರಿಮಂಡಲದ ಬಳಕೆಗೆ 92 ಕೊಠಡಿಗಳು ಇರುತ್ತವೆ. ಹೊಸ ಕಟ್ಟಡದಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಗಳ ಪ್ರತಿ ಬೆಂಚ್‌ನಲ್ಲಿ ಇಬ್ಬರು ಸದಸ್ಯರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಆಸನದಲ್ಲಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಟಚ್ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ.

ಹಳೆಯ ಸಂಸತ್‌ ಕಟ್ಟಡದ ಬಳಕೆ ಮುಂದುವರಿಯಲಿದೆ. ಎರಡು ಕಟ್ಟಡಗಳು ಒಂದಕ್ಕೊಂದು ಪೂರಕವಾಗಿರುವಂತೆ ಇವೆ. ಇವುಗಳ ಮೂಲ ವಾಸ್ತುಶಿಲ್ಪದ ತಂತ್ರವೇ ಹಾಗಿದೆ. ಹಳೆಯ ಕಟ್ಟಡದ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ. ಸಂಸತ್ತಿನ ಸಂಕೀರ್ಣದಲ್ಲಿರುವ ಎಲ್ಲಾ ಪ್ರತಿಮೆಗಳನ್ನು ಸಹ ಪುನಃಸ್ಥಾಪಿಸಲಾಗುತ್ತದೆ. ಉನ್ನತ ಮಟ್ಟದ ಭದ್ರತಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.

ಹೊಸ ಕಟ್ಟಡದಲ್ಲಿ ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಂವಿಧಾನ ಭವನ ಇರಲಿದೆ. ಲಕ್ಷಾಂತರ ಮುದ್ರಿತ ಹಾಗೂ ಡಿಜಿಟಲ್‌ ಬುಕ್‌ಗಳನ್ನು ಹೊಂದಿರುವ ಗ್ರಂಥಾಲಯವಿರುತ್ತದೆ. ಊಟದ ಕೋಣೆ ಮತ್ತು ಸದಸ್ಯರಿಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಸೇರಿವೆ. ಹೊಸ ಕಟ್ಟಡವು ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ವ್ಯವಸ್ಥೆಯನ್ನು ಹೊಂದಿದೆ. ಕಟ್ಟಡದಾದ್ಯಂತ 100% ಯುಪಿಎಸ್ ಪವರ್ ಬ್ಯಾಕಪ್ ಒದಗಿಸಲಾಗಿದೆ.

ಹೊಸ ಕಟ್ಟಡದ ವಿನ್ಯಾಸವನ್ನು ಅಹಮದಾಬಾದ್ ಮೂಲದ HCP ಡಿಸೈನ್ ಮತ್ತು ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮಾಡಿದೆ. ಕೇಂದ್ರದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಳ ಭಾಗವಾದ ಹೊಸ ಸಂಸತ್‌ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಪಡೆದಿದ್ದು, ಇದನ್ನು ನಿರ್ಮಿಸಿದೆ.

ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್‌

Tamil Nadu's Sengol

ಹೊಸ ಸಂಸತ್‌ ಭವನದ ಇನ್ನೊಂದು ಆಕರ್ಷಣೆ ಎಂದರೆ, ಪುರಾತನ ಭಾರತದಲ್ಲಿ ಅಧಿಕಾರದ ಹಸ್ತಾಂತರಕ್ಕೆ ಬಳಸುತ್ತಿದ್ದ ಸೆಂಗೋಲ್‌ ಅಥವಾ ರಾಜದಂಡ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿತ್ತು. ಸೆಂಗೋಲ್​ ಸದ್ಯ ಅಲಹಾಬಾದ್​ ಮ್ಯೂಸಿಯಂನಲ್ಲಿದೆ. ಅದನ್ನು ತಮಿಳಿನ ಹಿರಿಯರು ಪ್ರಧಾನಿಗೆ ನೀಡಲಿದ್ದು, ಅದನ್ನು ಲೋಕಸಭೆಯ ಸ್ಪೀಕರ್​ ಕುರ್ಚಿಯ ಸಮೀಪ ಪ್ರಧಾನಿ ಇಡಲಿದ್ದಾರೆ. ಚಿನ್ನದಿಂದ ಮಾಡಿದ ಈ ದಂಡವನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಾಜಿಯವರು ತಮಿಳುನಾಡಿನ ಚಿನ್ನಾಭರಣ ತಯಾರಕರಿಂದ ಮಾಡಿಸಿ ತರಿಸಿ ನೆಹರೂ ಅವರಿಗೆ ನೀಡಿದ್ದರು. ನಂತರ ಇದು ಮ್ಯೂಸಿಯಂ ಸೇರಿತ್ತು.

ಬೃಹತ್‌ ರಾಷ್ಟ್ರ ಲಾಂಛನ

ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನವಾದ ನಾಲ್ಕು ಸಿಂಹಗಳನ್ನು ಅನಾವರಣಗೊಳಿಸಿದ್ದಾರೆ. 6.5 ಮೀಟರ್ ಎತ್ತರವಾಗಿರುವ ಈ ಲಾಂಛನ 9,500 ಕೆಜಿ ತೂಕ ಹೊಂದಿದ್ದು ಕಂಚಿನಿಂದ ಮಾಡಲ್ಪಟ್ಟಿದೆ.

new parliment

ಈ ಕಟ್ಟಡದ ನಿರ್ಮಾಣಕ್ಕೆಂದು ತೆಗೆದಿರಿಸಲಾದ ಹಣದ 2600 ಕೋಟಿ ರೂ. ಇದುವರೆಗೆ ಇದರ ನಿರ್ಮಾಣದಲ್ಲಿ ಸುಮಾರು 23,04,095 ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿದೆ. 26,045 ಟನ್‌ ಸ್ಟೀಲ್‌ ಬಳಸಲಾಗಿದೆ. 63,807 ಟನ್ ಸಿಮೆಂಟ್‌ ಹಾಗೂ ‌9,689 ಘನ ಮೀಟರ್‌ ಹಾರುಬೂದಿ ಬಳಸಲಾಗಿದೆ.

ಇದನ್ನೂ ಓದಿ: New Parliament Building: ಹೊಸ ಸಂಸತ್‌ ಭವನ ಉದ್ಘಾಟನೆಗೆ 20 ಪ್ರತಿಪಕ್ಷಗಳ ಬಹಿಷ್ಕಾರ, 17 ಪಕ್ಷಗಳ ಬೆಂಬಲ

Continue Reading
Advertisement
Marnus Labuschagne
ಕ್ರಿಕೆಟ್5 mins ago

WTC Final 2023 : ಶಮಿ ಎಸೆತಕ್ಕೆ ಮರ್ನಸ್​ ಲಾಬುಶೇನ್​ ಬೌಲ್ಡ್​ ಆದ ರೀತಿ ಹೀಗಿದೆ

wrestlers protest
ಕ್ರೀಡೆ49 mins ago

Wrestlers Protest: ಜೂನ್​ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

abhishek ambareesh wedding Reception
ಕರ್ನಾಟಕ51 mins ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

KS Bharat
ಕ್ರಿಕೆಟ್52 mins ago

WTC Final 2023 : ವಿಕೆಟ್​ ಕೀಪರ್​ ಕೆಎಸ್​ ಭರತ್​​ ಹಿಡಿದ ರೋಮಾಂಚಕಾರಿ ಕ್ಯಾಚ್​ ಹೀಗಿತ್ತು

for tenants also to wrestlers protest and more news
ಕರ್ನಾಟಕ55 mins ago

ವಿಸ್ತಾರ TOP 10 NEWS: ಬಾಡಿಗೆಯವರಿಗೂ ಫ್ರೀ ಕರೆಂಟ್‌ನಿಂದ, ಅಂತಿಮ ಘಟ್ಟದಲ್ಲಿ ಕುಸ್ತಿ ಕದನದವರೆಗಿನ ಪ್ರಮುಖ ಸುದ್ದಿಗಳಿವು

Anita Madhu Bangarappa was felicitated by Block Mahila Congress at soraba
ಕರ್ನಾಟಕ1 hour ago

Shivamogga News: ಸೊರಬ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅನಿತಾ ಮಧು ಬಂಗಾರಪ್ಪ

MLA TB Jayachandra visited Shira Public Hospital
ಕರ್ನಾಟಕ1 hour ago

Tumkur News: ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಟಿ.ಬಿ. ಜಯಚಂದ್ರ ಭೇಟಿ, ಪರಿಶೀಲನೆ

Farooq Abdullah meets HD Devegowda
ಕರ್ನಾಟಕ1 hour ago

Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್‌ ಅಬ್ದುಲ್ಲಾ ʼಲೋಕಾʼಭಿರಾಮ!

Good Train Accident
ದೇಶ2 hours ago

Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

BJP lose in karnataka
ಕರ್ನಾಟಕ2 hours ago

BJP Karnataka: ಸೋತು 25 ದಿನದ ನಂತರ ಅವಲೋಕನ ನಡೆಸಲಿದೆ ಬಿಜೆಪಿ!: ಗೆದ್ದ-ಸೋತವರ ಸಭೆ ಗುರುವಾರ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

abhishek ambareesh wedding Reception
ಕರ್ನಾಟಕ51 mins ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

N Chaluvarayaswamy about Congress guarantee
ಕರ್ನಾಟಕ8 hours ago

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

horoscope today love and horoscope
ಪ್ರಮುಖ ಸುದ್ದಿ16 hours ago

Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!

Salman Khan Bigg Boss ott 2
South Cinema1 day ago

Big Boss OTT 2: ಜೂನ್ 17ಕ್ಕೆ ಬಿಗ್‌ಬಾಸ್ ಒಟಿಟಿ 2 ಪ್ರಸಾರ, ಇಲ್ಲೂ ನಿರೂಪಕ ಸಲ್ಲೂ!

dining table vastu tips
ಭವಿಷ್ಯ1 day ago

Vastu Tips : ಮನೆಯ ಡೈನಿಂಗ್‌ ಹಾಲ್‌ನಲ್ಲಿ ಈ ಆಕಾರದ ಟೇಬಲ್‌ ಇರಲೇಬಾರದು!

pineapple cultivation
ಕೃಷಿ1 day ago

Krishi Khajane : ಆರೋಗ್ಯಕರ ಅನಾನಸ್‌ ಬೆಳೆಯುವುದು ಕಷ್ಟವೇನಲ್ಲ!

health and horoscope horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ, ಇರಲಿ ಎಚ್ಚರ!

Chakravarthy Sulibele and MB Patil
ಕರ್ನಾಟಕ2 days ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ2 days ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ3 days ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

ಟ್ರೆಂಡಿಂಗ್‌

error: Content is protected !!