Site icon Vistara News

Honey Trap: ಯುನಿಫಾರ್ಮ್‌ನಲ್ಲಿ ಪೋಸ್ಟ್‌, ವಿಡಿಯೋ ಹಾಕಬೇಡಿ, ಆನ್‌ಲೈನ್‌ ಗೆಳೆತನ ಬೇಡ: ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ

CAPF

ಹೊಸದಿಲ್ಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಸಿಬ್ಬಂದಿಗಳು ಆನ್‌ಲೈನ್‌ನಲ್ಲಿ ಹೊಸ ಗೆಳೆತನ ಬೆಳೆಸದಂತೆ, ಸೋಶಿಯಲ್‌ ಮೀಡಿಯಾದಲ್ಲಿ (social media) ಫೋಟೋಗಳನ್ನು ಅಪ್‌ಲೋಡ್ ಮಾಡದಂತೆ ನಿರ್ದೇಶನ ನೀಡಲಾಗಿದೆ. ʻಹನಿ ಟ್ರ್ಯಾಪ್’ಗೆ (honey trap) ಬಳಕೆಯಾಗುವ ಹಾಗೂ ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಅಪಾಯದ ಹಿನ್ನೆಲೆಯಲ್ಲಿ ಈ ಸೂಚನೆಗಳನ್ನು ನೀಡಲಾಗಿದೆ.

ಹಲವಾರು ಸಿಬ್ಬಂದಿಗಳು ಸೂಕ್ಷ್ಮ ಸ್ಥಳಗಳಿಂದ ತಾವು ಸಮವಸ್ತ್ರದಲ್ಲಿರುವ ಫೋಟೋ ಅಥವಾ ತಮ್ಮ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುವುದು ಕಂಡುಬಂದಿದೆ. ಬಹು ಬಳಕೆದಾರರಿಗೆ ಸಂದೇಶ ಮತ್ತು ಸ್ನೇಹಕ್ಕಾಗಿ ವಿನಂತಿ ಕಳುಹಿಸುತ್ತಿರುವುದು, ಪಡೆಯುತ್ತಿರುವುದು ಕಂಡುಬಂದಿದೆ; ಈ ಬಗ್ಗೆ ವಿವಿಧ ಅರೆಸೇನಾ ಪಡೆಗಳು, ಪೊಲೀಸ್ ಪಡೆಗಳ ಮುಖ್ಯಸ್ಥರು ಕೇಂದ್ರ ಗುಪ್ತಚರ ಸಂಸ್ಥೆಯಿಂದ ಸೂಚನೆ ಪತ್ರವನ್ನು ಪಡೆದಿದ್ದಾರೆ. ಮುಖ್ಯಸ್ಥರು ತಮ್ಮ ಪಡೆಗಳ ಯೋಧರನ್ನು ಈ ಬಗ್ಗೆ ಎಚ್ಚರಿಸಿದ್ದು, ಉಲ್ಲಂಘಿಸಿದರೆ ಕ್ರಮದ ಎಚ್ಚರಿಕೆ ನೀಡಿದ್ದಾರೆ.

“ಸಿಆರ್‌ಪಿಎಫ್ (CRPF) ಸಿಬ್ಬಂದಿ ತಾವು ಸಮವಸ್ತ್ರದಲ್ಲಿರುವ ತಮ್ಮ ಫೋಟೋ/ವೀಡಿಯೋಗಳನ್ನು ಪೋಸ್ಟ್ ಮಾಡುವುದು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವುದನ್ನು ನಿಲ್ಲಿಸಬೇಕು. ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳ ಕಟ್ಟುನಿಟ್ಟಾದ ಅನುಸರಣೆ ಖಚಿತಪಡಿಸಿಕೊಳ್ಳಿ. ಸೂಕ್ಷ್ಮ ಪರಿಶೀಲನೆಯಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಬೇಡಿ. ಈ ಸೂಚನೆಗಳ ಉಲ್ಲಂಘನೆಯು ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತಿನ ಕ್ರಮಕ್ಕೆ ಕಾರಣವಾಗುತ್ತದೆ” ಎಂದು ನೋಟೀಸ್‌ ತಿಳಿಸಿದೆ.

ಅದೇ ರೀತಿ, ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಕೂಡ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಯಾವುದೇ ಶಂಕಿತ ಅಥವಾ ಬಂಧಿತ ವ್ಯಕ್ತಿಯ ಅಪರಾಧ ಅಥವಾ ವಿಚಾರಣೆಗೆ ಸಂಬಂಧಿಸಿದ ಯಾವುದೇ ಗೌಪ್ಯ ಮಾಹಿತಿಯನ್ನು ಕಾಮೆಂಟ್ ಮಾಡಬೇಡಿ, ಪೋಸ್ಟ್ ಮಾಡಬೇಡಿ, ರವಾನಿಸಬೇಡಿ ಅಥವಾ ಪ್ರಸಾರ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಪೊಲೀಸರು ಕ್ರೈಮ್‌ ಸಂತ್ರಸ್ತರು, ಶಂಕಿತರು ಅಥವಾ ಇತರ ಯಾವುದೇ ವ್ಯಕ್ತಿ ಅಥವಾ ಗುಂಪಿನ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬಾರದು. ಭದ್ರತಾ ಸೂಕ್ಷ್ಮ ಪ್ರದೇಶಗಳು ಅಥವಾ ಸಂರಕ್ಷಿತ ವ್ಯಕ್ತಿಗಳ ವೀಡಿಯೊಗಳನ್ನು ರೆಕಾರ್ಡ್ ಮಾಡಬಾರದು” ಎಂದಿದ್ದಾರೆ. ಪೊಲೀಸ್ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸಬಾರದು. ಅಲ್ಲಿ ಸೂಕ್ಷ್ಮ ಮಾಹಿತಿಯನ್ನು ಅಪ್‌ಲೋಡ್ ಮಾಡಬಾರದು ಎಂದಿದ್ದಾರೆ.

ಈ ತಿಂಗಳು, ಸಿಐಎಸ್‌ಎಫ್‌ನಲ್ಲಿ ಒಂದು ‘ಹನಿ ಟ್ರ್ಯಾಪ್’ ಪ್ರಕರಣ ಗಮನಕ್ಕೆ ಬಂದಿದೆ. ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು ಕೆಲವು ವಿವರಗಳನ್ನು ಹಂಚಿಕೊಂಡಿದ್ದುದು ಗೊತ್ತಾಗಿದೆ. ಇನ್ನೊಂದು ಪ್ರಕರಣದಲ್ಲಿ, ಪಾಕಿಸ್ತಾನದ ಕೆಲ ಗುಪ್ತಚರ ಅಧಿಕಾರಿಗಳು ತಮ್ಮನ್ನು ಹಿರಿಯ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ವಿವಿಧ ಪಡೆಗಳ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: Honey Trap | ರಾಜಕಾರಣಿಗಳ ಹನಿಟ್ರ್ಯಾಪ್‌ಗೆ ಪಾಕ್ ಸೇನೆಯಿಂದ ನಟಿಯರ ಬಳಕೆ! ಮಾಜಿ ಸೇನಾಧಿಕಾರಿ ಹೇಳಿಕೆಗೆ ಆಕ್ರೋಶ

Exit mobile version