Site icon Vistara News

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Hooch Tragedy

Hooch Tragedy: 16 Dead, Over 70 Hospitalised After Consuming Spurious Liquor In Tamil Nadu

ಚೆನ್ನೈ: ದೇಶದಲ್ಲಿ ಕಳ್ಳಬಟ್ಟಿ ಸಾರಾಯಿಯನ್ನು ನಿಷೇಧಿಸಿ, ಅದರ ನಿಗ್ರಹಕ್ಕೆ ಹತ್ತಾರು ಕ್ರಮಗಳನ್ನು ತೆಗೆದುಕೊಂಡರೂ ದೇಶದ ಹಲವೆಡೆ ಕಳ್ಳಬಟ್ಟಿ ದಂಧೆಯು (Illicit Liquor) ಯಥೇಚ್ಛವಾಗಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ತಮಿಳುನಾಡಿನಲ್ಲಿ (Tamil Nadu) ಕಳ್ಳಬಟ್ಟಿ ಸೇವಿಸಿ 16 ಮಂದಿ ಮೃತಪಟ್ಟರೆ (Hooch Tragedy), 70ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲೂ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಕಳ್ಳಕುರಿಚಿ ಜಿಲ್ಲೆಯಲ್ಲಿ ಬುಧವಾರ ಕಳ್ಳಬಟ್ಟಿ ದುರಂತ ಸಂಭವಿಸಿದೆ. ಕರುಣಾಪುರಂ ಕಾಲೋನಿಯವರು ಸೇರಿ ನೂರಾರು ಜನ ಮಂಗಳವಾರ (ಜೂನ್‌ 18) ರಾತ್ರಿ ಕಳ್ಳಬಟ್ಟಿ ಸೇವಿಸಿದ್ದಾರೆ. ಬುಧವಾರ ಬೆಳಗ್ಗೆ ವಾಂತಿ, ಭೇದಿ ಸೇರಿ ಹಲವು ರೀತಿಯ ಬಾಧೆ ಅನುಭವಿಸಿದ್ದಾರೆ. ಕೂಡಲೇ ಅವರನ್ನು ಕಳ್ಳಕುರಿಚಿ ಜಿಲ್ಲಾಸ್ಪತ್ರೆ ಸೇರಿ ಹಲವು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಆದರೂ, 16 ಮಂದಿ ಮೃತಪಟ್ಟಿದ್ದಾರೆ. ಅಸ್ವಸ್ಥರಾಗಿರುವವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಿಐಡಿ ತನಿಖೆಗೆ ಆದೇಶ

ಕಳ್ಳಬಟ್ಟಿ ದುರಂತವು ದೇಶಾದ್ಯಂತ ಸುದ್ದಿಯಾಗಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ ವಹಿಸಿದ್ದಾರೆ. ಅಷ್ಟೇ ಅಲ್ಲ, ಕಳ್ಳಕುರಿಚಿ ಜಿಲ್ಲಾಧಿಕಾರಿ ಶ್ರವಣ್‌ಕುಮಾರ್‌ ಜಟಾವಥ್‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಎಂ.ಎಸ್.ಪ್ರಶಾಂತ್‌ ಅವರನ್ನು ಕಳ್ಳಕುರಿಚಿ ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಹಾಗೆಯೇ, ರಾಜ್ಯದಲ್ಲಿ ಯಾವುದೇ ಭಾಗದಲ್ಲೂ ಕಳ್ಳಬಟ್ಟಿ ಕಾಣಿಸಕೂಡದು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳ್ಳಬಟ್ಟಿ ಪ್ರಕರಣವು ಸುದ್ದಿಯಾಗುತ್ತಲೇ ಕಳ್ಳಬಟ್ಟಿ ದಂಧೆಯಲ್ಲಿ ತೊಡಗಿದ್ದ, ಗ್ರಾಮೀಣ ಭಾಗದ ಜನರಿಗೆ ಕಳ್ಳಬಟ್ಟಿಯನ್ನು ಪ್ಯಾಕೆಟ್‌ಗಳಲ್ಲಿ ತುಂಬಿ ಸರಬರಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 200 ಲೀಟರ್‌ ಕಳ್ಳಬಟ್ಟಿಯನ್ನೂ ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ, ಕಳ್ಳಕುರಿಚಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಮಯಸಿಂಗ್‌ ಮೀನಾ ಸೇರಿ ಒಟ್ಟು 10 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ರಾಜ್ಯಾದ್ಯಂತ ಕಳ್ಳಬಟ್ಟಿಯನ್ನು ನಿರ್ಮೂಲನೆ ಮಾಡಬೇಕು ಎಂದು ಮಹಿಳೆಯರು ಸೇರಿ ಹಲವು ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ: Toxic Liquor Deaths : ಕಳ್ಳಬಟ್ಟಿ ಕುಡಿದು 20 ಮಂದಿಯ ಸಾವು, ಆರು ಮಂದಿ ಗಂಭೀರ

Exit mobile version