ಪಟನಾ: ಬಿಹಾರದ ಸಾರನ್ ಜಿಲ್ಲೆಯಲ್ಲಿ ನಡೆದ ವಿಷ ಮದ್ಯ ಸೇವನೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 70 ತಲುಪಿದೆ. ಇನ್ನೂ ಬಹಳಷ್ಟು ಮಂದಿ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಮೃತರ ಸಂಖ್ಯೆ ಇನ್ನಷ್ಟು ಏರುವ ಆತಂಕ ಇದೆ.
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2016ರಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದ ಬಳಿಕ ಸಂಭವಿಸುತ್ತಿರುವ ಅತಿ ದೊಡ್ಡ ಕಳ್ಳಭಟ್ಟಿ ದುರಂತ ಇದಾಗಿದೆ. ಮದ್ಯ ಮಾರಾಟ ನಿಷೇಧದ ಬಳಿಕ ರಾಜ್ಯದಲ್ಲಿ ಕಳ್ಳಭಟ್ಟಿ ಹಾವಳಿ ಹೆಚ್ಚಾಗಿದೆ.
ಇನ್ನೂ ಎಂಟು ಸಾವುಗಳು
ಸಾರನ್ ಜಿಲ್ಲೆಯಲ್ಲದೆ, ಬಿಹಾರದ ಇತರ ಕೆಲವು ಜಿಲ್ಲೆಗಳಲ್ಲೂ ವಿಷ ಮದ್ಯ ಸೇವಿಸಿ 8 ಮಂದಿ ಮೃತಪಟ್ಟಿದ್ದಾರೆ. ಸಾರನ್ ಪಕ್ಕದಲ್ಲಿರುವ ಸಿವಾನ್, ಬೇಗುಸರಾಯ್ ಜಿಲ್ಲೆಗಳಲ್ಲಿ ಈ ಸಾವುಗಳು ಸಂಭವಿಸಿವೆ.
ಇದರ ನಡುವೆ, ಬಿಹಾರದ ಮುಝಪ್ಪರ್‌ಪುರದಲ್ಲಿ ವಿದೇಶಿ ಮದ್ಯದ ಬಾಟಲಿಗಳನ್ನು ಹೊಂದಿದ್ದ ಒಂದು ಟ್ರಕ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ | Bihar Hooch Tragedy | ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತಕ್ಕೆ 4 ಬಲಿ, ಕುಡಿದವರು ಸಾಯ್ತಾರೆ ಎಂದ ನಿತೀಶ್
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಸಾವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ತನಿಖೆ ನಡೆಸಲು ಮುಂದಾಗಿದೆ. ವಿಷ ಮದ್ಯ ಸೇವಿಸಿ ಅಸ್ವಸ್ಥರಾದವರಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ತಿಳಿಯಲು ಅದು ಉದ್ದೇಶಿಸಿದೆ.
ಈ ನಡುವೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಾವಿನ ಸಂಖ್ಯೆಯನ್ನು ಅನಗತ್ಯವಾಗಿ ಉತ್ಪ್ರೇಕ್ಷಿಸಲಾಗುತ್ತಿದೆ. ಕಳ್ಳಭಟ್ಟಿ ಸೇವಿಸಿ ಮೃತಪಟ್ಟವರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Bihar Hooch Tragedy | ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಇಲ್ಲ, ನಿತೀಶ್ ಕುಮಾರ್ ಘೋಷಣೆ