ನವದೆಹಲಿ: ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಿವಾಸಕ್ಕೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿ ಅವರು ದೆಹಲಿ ಪೊಲೀಸರಿಗೆ ನಾಲ್ಕು ಪುಟಗಳ ಪ್ರಾಥಮಿಕ ಪ್ರತಿಕ್ರಿಯೆ (Preliminary Reply) ನೀಡಿದ್ದಾರೆ. ಹಾಗೆಯೇ, “ನಾನು ಗೌತಮ್ ಅದಾನಿ ಪ್ರಕರಣ ಸೇರಿ ಹಲವು ವಿಷಯಗಳ ಕುರಿತು ಧ್ವನಿ ಎತ್ತಿದ್ದಕ್ಕೇ ಪೊಲೀಸರು ಈ ಕ್ರಮ ತೆಗೆದುಕೊಂಡಿಲ್ಲ ಎಂಬುದಾಗಿ ಭಾವಿಸಿದ್ದೇನೆ” ಎಂದು ಪ್ರತಿಕ್ರಿಯಿಸುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
“ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವ ಕುರಿತು ನಾನು ಜನವರಿ 30ರಂದು ಮಾತನಾಡಿದ್ದೇನೆ. ಆದರೆ, ದೆಹಲಿ ಪೊಲೀಸರು ಮಾತನಾಡಿದ 45 ದಿನಗಳ ಬಳಿಕ ನನ್ನ ಮನೆಗೆ ಭೇಟಿ ನೀಡಿದ್ದಾರೆ. ಆದರೆ, ಈಗ ಏಕಾಏಕಿ ಮಾಹಿತಿ ನೀಡಬೇಕು ಎಂದು ಅವಸರ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ಸೇರಿ ಯಾವುದೇ ಪಕ್ಷದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ್ದರ ಕುರಿತು ಹೀಗೆ ವಿಚಾರಣೆ ನಡೆಸಲಾಗಿದೆಯೇ” ಎಂಬುದಾಗಿ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಪೊಲೀಸರು ಹೇಳಿದ್ದೇನು?
“ನಮ್ಮ ಮನೆಗೆ ಪೊಲೀಸರು ಭೇಟಿ ನೀಡಿರುವುದು ಹಿಂದೆಂದೂ ಕೇಳಿರದ ಕ್ರಮವಾಗಿದೆ. ನಾನು ಸಂಸತ್ತಿನ ಒಳಗೆ ಹಾಗೂ ಹೊರಗೆ ಅದಾನಿ ಸೇರಿ ಹಲವು ಪ್ರಕರಣಗಳ ಕುರಿತು ಮಾತನಾಡಿರುವುದಕ್ಕೇ ಪೊಲೀಸರು ಹೀಗೆ ಮಾಡಿರಲಿಕ್ಕಿಲ್ಲ ಎಂಬುದಾಗಿ ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಆದಾಗ್ಯೂ, ರಾಹುಲ್ ಗಾಂಧಿ ಪ್ರತಿಕ್ರಿಯೆ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಪ್ರತಿಕ್ರಿಯೆ ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ನನಗೆ ಇನ್ನೂ ಸಮಯ ಬೇಕು
“ನೀವು (ಪೊಲೀಸರು) ಮಾರ್ಚ್ 16ರಂದೇ ನನ್ನ ಮನೆಗೆ ಬಂದಿದ್ದಿರಿ. ನನಗೆ 7-8 ದಿನ ಸಮಯ ಬೇಕು ಎಂದು ಕೋರಿದ್ದೆ. ಆದರೆ, ನೀವು ಮತ್ತೆ ಎರಡೇ ದಿನದಲಿ ವಾಪಸ್ ಬಂದಿದ್ದೀರಿ. ನಾನು ಕೈಗೊಂಡಿದ್ದು 4 ಸಾವಿರ ಕಿ.ಮೀ ದೂರದ ಪಾದಯಾತ್ರೆ. 140 ದಿನ ನಾನು ದೇಶಾದ್ಯಂತ ಸಂಚರಿಸಿದ್ದೇನೆ. ನಾನು ಲಕ್ಷಾಂತರ ಜನರನ್ನು ಭೇಟಿಯಾಗಿದ್ದೇನೆ. ಹಾಗಾಗಿ, ಈ ಕುರಿತು ಮಾಹಿತಿ ನೀಡಲು ನನಗೆ ಹೆಚ್ಚಿನ ಸಮಯ ಬೇಕು” ಎಂದು ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: Rahul Gandhi: ರಾಹುಲ್ ನಿವಾಸದಲ್ಲಿ ಹೈಡ್ರಾಮಾ, ಪೊಲೀಸರಿಗೆ ಮಾಹಿತಿ ನೀಡಲು ಸಮಯ ಕೇಳಿದ ರಾಗಾ
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭವನ್ನು ಶ್ರೀನಗರದಲ್ಲಿ ಆಯೋಜಿಸಿದ್ದರು. ಇದೇ ವೇಳೆ ಮಾತನಾಡುತ್ತ, “ದೇಶದಲ್ಲಿ ಈಗಲೂ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ನಾನು ಭಾರತ್ ಜೋಡೋ ಯಾತ್ರೆ ಕೈಗೊಳ್ಳುವ ವೇಳೆ ಒಂದಷ್ಟು ಮಹಿಳೆಯರ ಜತೆ ನಾನು ಮಾತನಾಡಿದೆ. ಇವರಲ್ಲೇ ಕೆಲವು ಜನ ನಾವು ಕೂಡ ಅತ್ಯಾಚಾರ ಸಂತ್ರಸ್ತೆಯರು ಎಂಬುದಾಗಿ ಹೇಳಿದ್ದರು. ಇದರಿಂದ ನನ್ನ ಮನಸ್ಸಿಗೆ ಖೇದವಾಯಿತು” ಎಂಬುದಾಗಿ ಹೇಳಿದ್ದರು.