Site icon Vistara News

Hotel Fined | ಪನೀರ್‌ ಬದಲು ಚಿಕನ್; ರೆಸ್ಟೋರೆಂಟ್‌ಗೆ ದಂಡ

ಗ್ವಾಲಿಯರ್: ತನ್ನ ಗ್ರಾಹಕರಿಗೆ ನೀಡುವ ಆಹಾರದಲ್ಲಿ ಎಡವಟ್ಟು (Hotel Fined) ಮಾಡಿಕೊಂಡಿದ್ದ ರೆಸ್ಟೋರೆಂಟ್‌ಗೆ 20,000 ರೂ.ಗಳ ದಂಡ ವಿಧಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇತ್ತೀಚೆಗೆ ನಡೆದಿದೆ.

ವೃತ್ತಿಯಲ್ಲಿ ವಕೀಲರಾಗಿರುವ ಸಿದ್ಧಾರ್ಥ ಶ್ರೀವಾಸ್ತವ ಮತ್ತವರ ಕುಟುಂಬ, ನಗರದಲ್ಲಿ ಖ್ಯಾತವಾಗಿರುವ ಜಿವಾಜಿ ಕ್ಲಬ್‌ನಿಂದ ಮಟರ್‌ ಪನೀರ್‌ ಆರ್ಡರ್‌ ಮಾಡಿತ್ತು. ಜನಪ್ರಿಯ ಆಹಾರ ವಿತರಣಾ ಆಪ್‌ ಜೊಮ್ಯಾಟೊದಿಂದ ಬಂದ ಈ ಆಹಾರದ ಪೊಟ್ಟಣ ತೆರೆದು ನೋಡಿದಾಗ ಇದ್ದಿದ್ದು ಚಿಕನ್‌ ಖಾದ್ಯ. ಇದರಿಂದ ತೀವ್ರ ಇರಸುಮುರಸುಗೊಂಡ ಶುದ್ಧ ಶಾಖಾಹಾರಿ ಕುಟುಂಬ, ಗ್ರಾಹಕರ ನ್ಯಾಯಾಲಯದಲ್ಲಿ ಕ್ಲಬ್‌ನ ವಿರುದ್ಧ ದಾವೆ ಹೂಡಿತ್ತು.

ಕ್ಲಬ್‌ನ ಈ ಕೃತ್ಯದಿಂದಾಗಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಮಾನಸಿಕ ಆಘಾತ ಮತ್ತು ದೈಹಿಕ ತೊಂದರೆ ಉಂಟಾಗಿದೆ. ಮುಂದಿನ ಹಲವು ದಿನಗಳವರೆಗೆ ಸರಿಯಾಗಿ ಆಹಾರ ಸೇವಿಸಲಾಗಲಿಲ್ಲ ಎಂಬ ಅರ್ಜಿದಾರರ ವಾದವನ್ನು ಗ್ರಾಹಕ ನ್ಯಾಯಾಲಯ ಮಾನ್ಯಮಾಡಿದೆ. ಗ್ರಾಹಕರ ಸೇವೆಯಲ್ಲಿನ ಲೋಪ ಮತ್ತು ಕ್ಲಬ್‌ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದಿರುವ ನ್ಯಾಯಾಲಯ, ಇದಕ್ಕಾಗಿ ೨೦ ಸಾವಿರ ರೂ.ಗಳ ದಂಡವನ್ನು ಕ್ಲಬ್‌ಗೆ ವಿಧಿಸಿದೆ. ಮಾತ್ರವಲ್ಲ, ಈ ವ್ಯಾಜ್ಯದ ಖರ್ಚು-ವೆಚ್ಚಗಳನ್ನೂ ಅರ್ಜಿದಾರರಿಗೆ ನೀಡುವಂತೆ ಆದೇಶಿಸಿದೆ.

ಇಂಥ ಘಟನೆ ನಡೆದಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಮಾರ್ಚ್‌ನಲ್ಲಿ, ಗಜಿಯಾಬಾದ್‌ನ ಮಹಿಳೆಯೊಬ್ಬರು ಇಂಥದ್ದೇ ವಿಷಯಕ್ಕಾಗಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ತಾವು ಕೇಳಿದ ಸಸ್ಯಾಹಾರದ ಪಿಜ್ಜಾ ಬದಲಿಗೆ, ಮಾಂಸಾಹಾರದ ಪಿಜ್ಜಾ ನೀಡಲಾಗಿದೆ. ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಜೀವನದುದ್ದಕ್ಕೂ ನೋವು ಉಣ್ಣುವಂತಾಗಿದೆ ಎಂದು ಹೇಳಿದ್ದ ಅರ್ಜಿದಾರರು, ಒಂದು ಕೋಟಿ ರೂ.ಗಳ ಪರಿಹಾರ ಕೋರಿದ್ದರು.

ಇದನ್ನೂ ಓದಿ | Night life | ಬೆಂಗಳೂರಲ್ಲಿ ಮಧ್ಯರಾತ್ರಿವರೆಗೂ ಹೊಟೇಲ್ ಓಪನ್: ಎಷ್ಟೊತ್ತಿಗೆ ಕ್ಲೋಸ್‌?

Exit mobile version