ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಉನ್ನತ ಅಧಿಕಾರಿಯೊಬ್ಬರು 5 ಲಕ್ಷ ರೂಪಾಯಿ ಲಂಚ ಪಡೆಯುವಾಗ (Graft Case) ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಇದರಿಂದ ಅವಮಾನಿತರಾದ ಅವರು ಬಂಧನಕ್ಕೀಡಾದ ಕೆಲವೇ ಗಂಟೆಯಲ್ಲಿ ಸಿಬಿಐ ಕಚೇರಿಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್‌ಕೋಟ್‌ನಲ್ಲಿರುವ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯದ (DGFT) ಜಂಟಿ ನಿರ್ದೇಶಕರಾದ ಜವರಿ ಮಲ್ ಬಿಷ್ಣೋಯಿ ಅವರು ಸಿಬಿಐ ಕಚೇರಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಕ್ತಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುವಾಗ ಅವರು ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ತನಿಖೆ ಹಿನ್ನೆಲೆಯಲ್ಲಿ ಅವರನ್ನು ಸಿಬಿಐ ಕಸ್ಟಡಿಗೆ ತೆಗೆದುಕೊಂಡಿತ್ತು. ಕಸ್ಟಡಿಯಲ್ಲಿದ್ದ ಬಿಷ್ಣೋಯಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫುಡ್ ಕ್ಯಾನ್‌ಗಳನ್ನು ರಫ್ತು ಮಾಡುವ ದಿಸೆಯಲ್ಲಿ ವ್ಯಕ್ತಿಯೊಬ್ಬರು ಬಿಷ್ಣೋಯಿ ಅವರನ್ನು ಸಂಪರ್ಕಿಸಿದ್ದರು. ಆದರೆ, ಫುಡ್ ಕ್ಯಾನ್‌ಗಳನ್ನು ರಫ್ತು ಮಾಡಲು ಬಿಷ್ಣೋಯಿ ಅವರು ಒಂಬತ್ತು ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಹಂತದಲ್ಲಿ ಐದು ಲಕ್ಷ ರೂಪಾಯಿ ಕೊಡಬೇಕು. ರಫ್ತು ಮಾಡಿದ ಬಳಿಕ ನಾಲ್ಕು ಲಕ್ಷ ರೂಪಾಯಿ ಕೊಡಬೇಕು ಎಂಬುದಾಗಿ ಅವರು ಆಗ್ರಹಿಸಿದ್ದರು ಎಂದು ವ್ಯಕ್ತಿ ತಿಳಿಸಿದ್ದಾರೆ.
ಉನ್ನತ ಅಧಿಕಾರಿಯೇ ಲಂಚಕ್ಕೆ ಬೇಡಿಕೆ ಇಟ್ಟ ಕುರಿತು ವ್ಯಕ್ತಿಯು ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಸಮರ್ಪಕ ಮಾಹಿತಿ ನೀಡಿದ್ದರು. ಅದರಂತೆ, ಸಿಬಿಐ ಅಧಿಕಾರಿಗಳು ಶುಕ್ರವಾರ (ಮಾರ್ಚ್ 24) ಬಿಷ್ಣೋಯಿ ಕಚೇರಿ ಹಾಗೂ ರಾಜ್‌ಕೋಟ್‌ನಲ್ಲಿರುವ ಅವರ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ADGP Alok kumar : ಫೈಟರ್ ರವಿ Vs ಎಡಿಜಿಪಿ ಅಲೋಕ್ ಕುಮಾರ್ ಲಂಚ ಬೇಡಿಕೆ ಪ್ರಕರಣ, ರವಿಗೆ ನೋಟಿಸ್
ಹಾಗೆಯೇ, ಲಂಚ ಪಡೆಯುವಾಗಲೇ ಬಿಷ್ಣೋಯಿ ಅವರನ್ನು ಬಂಧಿಸಿದ್ದರು. ಆದರೆ, ಬಿಷ್ಣೋಯಿ ಅವರು ವಿಚಾರಣೆ ಎದುರಿಸದೆಯೇ, ಅವಮಾನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳದ ಬೊಟ್‌ಗುಯಿ ಎಂಬಲ್ಲಿಯೂ ಲಂಚ ಪ್ರಕರಣದಲ್ಲಿ ಬಂಧಿತರಾಗಿದ್ದ ಅಧಿಕಾರಿಯೊಬ್ಬರು ಕೆಲ ತಿಂಗಳ ಹಿಂದೆ ಸಿಬಿಐ ಕಸ್ಟಡಿಯಲ್ಲಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಅವರನ್ನು ಕೋರ್ಟ್‌ಗೆ ಹಾಜರುಪಡಿಸುವ ಮೊದಲೇ ಆತ್ಮಹತ್ಯೆಗೆ ಶರಣಾಗಿದ್ದರು.