ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು (SC ST Scholarship) ಏರಿಕೆ ಮಾಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಕುರಿತು ಶೀಘ್ರದಲ್ಲಿಯೇ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
“ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ. ಅದರಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವು ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಅನ್ನು ವಾರ್ಷಿಕವಾಗಿ ಪರಿಷ್ಕರಣೆ ಮಾಡಬೇಕು. ಇದರಿಂದ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳು ಶೈಕ್ಷಣಿಕ ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗಲಿದೆ” ಎಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣದ ಕುರಿತ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.
ವಾರ್ಷಿಕವಾಗಿ ಹೇಗೆ ವಿದ್ಯಾರ್ಥಿ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂಬುದರ ಕುರಿತು ಸರ್ಕಾರವು ಮಾರ್ಗಸೂಚಿ ತಯಾರಿಸಬೇಕು. ಇದರ ಬಗ್ಗೆ ಚರ್ಚಿಸಲು, ನಿರ್ಧಾರ ತೆಗೆದುಕೊಳ್ಳಲು ಸಮಿತಿಯೊಂದನ್ನು ರಚಿಸಬೇಕು. ಆ ಮೂಲಕ ಆಯಾ ಹಣಕಾಸು ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿ ವೇತನ ಹೆಚ್ಚಿಸಬಹುದು ಎಂಬುದರ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.
ಸದ್ಯ ಎಷ್ಟಿದೆ ವಿದ್ಯಾರ್ಥಿ ವೇತನ?
ಮೆಟ್ರಿಕ್ ಪೂರ್ವ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ಈಗ 10 ತಿಂಗಳಿಗೆ 225-525 ರೂಪಾಯಿ ಸ್ಟೈಪೆಂಡ್ ದೊರೆಯುತ್ತಿದೆ. ಹಾಗೆಯೇ, ವಾರ್ಷಿಕವಾಗಿ ಪುಸ್ತಕಗಳ ವೆಚ್ಚಕ್ಕೆ 750-1000 ರೂ. ನೀಡಲಾಗುತ್ತದೆ. ಹಾಗೆಯೇ, ಮೆಟ್ರಿಕ್ ನಂತರದ ಅಂದರೆ, ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಎಸ್‌ಸಿ ವಿದ್ಯಾರ್ಥಿಗಳಿಗೆ 7 ಸಾವಿರ ರೂ.ನಿಂದ 13,500 ರೂ. ಸ್ಟೈಪೆಂಡ್ ನೀಡಲಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ವರದಿ ತಿಳಿಸಿದೆ.
ಪದವಿಯೇತರ ಕೋರ್ಸ್ ಅಧ್ಯಯನ ಮಾಡುತ್ತಿರುವ ಎಸ್‌ಸಿ 2,400 ರೂ.ನಿಂದ 4 ಸಾವಿರ ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಇನ್ನು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಎಸ್‌ಟಿ ವಿದ್ಯಾರ್ಥಿಗಳಿಗೆ ಮಾಸಿಕ 500 ರೂ.ನಿಂದ 1,200 ರೂ. ನೀಡಲಾಗುತ್ತದೆ. ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪರಿಷ್ಕರಣೆ ಮಾಡಲಾಗಿದೆ.
ಇದನ್ನೂ ಓದಿ: SC ST Reservation | ಎಸ್‌ಸಿ ಎಸ್‌ಟಿ ಹೊಸ ಮೀಸಲಾತಿಯ ರೋಸ್ಟರ್ ಪ್ರಕಟ; ನೇಮಕಾತಿಗೆ ದಾರಿ ಸುಗಮ