ನವದೆಹಲಿ: ರಸ್ತೆಗಳು (Roads), ಒಳಚರಂಡಿ(sewerage), ನೀರು (Water) ಮತ್ತು ವಿದ್ಯುತ್ ಸಂಪರ್ಕಗಳಂಥ (electricity connections) ಮೂಲಭೂತ ಸೌಕರ್ಯಗಳನ್ನು (Basic Infrastructure) ಒದಗಿಸದೇ ಹೊರತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ (PMAY Houses) ನಿರ್ಮಿಸಲಾದ ವಸತಿ ಮನೆಗಳನ್ನು ಪೂರ್ಣಗೊಂಡ ಮನೆಗಳೆಂದು ಕೇಂದ್ರ ಸರ್ಕಾರವು ಪರಿಗಣಿಸಬಾರದು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸ್ಥಾಯಿ ಸಮಿತಿ ಹೇಳಿದೆ. ಈ ಸಮಿತಿಯು ಲೋಕಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ಈ ಕುರಿತು ಸವಿಸ್ತಾರವಾಗಿ ತಿಳಿಸಲಾಗಿದೆ.
2015ರಲ್ಲಿ ಪ್ರಾರಂಭವಾದ ಪಿಎಂಎವೈ(ಯು) ಬಡತನವನ್ನು ನಿವಾರಿಸುವ ಗುರಿಯನ್ನು ಹೊಂದಿರುವ ಕೇಂದ್ರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ ಮತ್ತು 2022 ರ ವೇಳೆಗೆ ಎಲ್ಲರಿಗೂ ವಸತಿ ಒದಗಿಸುವ ಉದ್ದೇಶವನ್ನು ಹೊಂದಿತ್ತು. ಬಾಕಿ ಉಳಿದಿರುವ ಯೋಜನೆಗಳ ನಡುವೆ, ಯೋಜನೆಯ ಗಡುವನ್ನು ನಂತರ ಡಿಸೆಂಬರ್ 2024 ಕ್ಕೆ ವಿಸ್ತರಿಸಲಾಗಿದೆ.
ಮನೆಯ ಅಗತ್ಯವಿರುವ “ಯಾರೂ” ಅವಕಾಶವಂಚಿತರಾಗಬಾರದು ಎಂದು ಖಚಿತಪಡಿಸಿಕೊಳ್ಳಲು, ಮುಂಗೇರ್‌ನ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ನೇತೃತ್ವದ ಸದನ ಸಮಿತಿಯು ಪಿಎಂಎವೈ (ಯು)ದ ಸಾಮಾಜಿಕ ಪರಿಣಾಮದ ಕುರಿತು ಅಧ್ಯಯನ ನಡೆಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ.
ಪಿಎಂಎವೈ ಮೂಲ ಉದ್ದೇಶವು ಎಲ್ಲರಿಗೂ ವಸತಿ ಒದಗಿಸುವುದು, ನಗರ ಪ್ರದೇಶಗಳಲ್ಲಿನ ವಸತಿ ಅಗತ್ಯಗಳಲ್ಲಿನ ಅಂತರವನ್ನು ಅಳೆಯಲು ಪ್ರಭಾವದ ಮೌಲ್ಯಮಾಪನ ಅಧ್ಯಯನವನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಗಣನೆಗೆ ತೆಗೆದುಕೊಂಡ ನಂತರವೂ ಫಲಾನುಭವಿಗಳು ಇನ್ನೂ ಒಟ್ಟು ವೆಚ್ಚದ ಸುಮಾರು 60% ಅನ್ನು ಪಾವತಿಸಬೇಕಾಗುತ್ತದೆ ಎಂದು ಸಮಿತಿ ಹೇಳಿದೆ. ಈ ಫಲಾನುಭವಿಗಳಲ್ಲಿ ಹೆಚ್ಚಿನವರು ಸ್ಥಿರ ಆದಾಯವನ್ನು ಹೊಂದಿಲ್ಲದ ಕಾರಣ, ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದರೆ, 2024ರ ಡಿಸೆಂಬರ್ ವರೆಗೆ ಇದಕ್ಕಾಗಿ 1.5 ಲಕ್ಷ ರೂ. ಮೀರಿ ನಿಧಿಯನ್ನು ಹೆಚ್ಚಿಸುವುದಿಲ್ಲ ಹೇಳಿದೆ. ಕೇಂದ್ರದ ನೆರವು ನಿರ್ಮಾಣದ ವೆಚ್ಚವನ್ನು ಅವಲಂಬಿಸಿ ಬದಲಾಗಬೇಕು, ಇದು ಸ್ಥಳಾಕೃತಿ ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತದೆ ಎಂದು ಸಮಿತಿ ಹೇಳಿದೆ.
ಈ ಸುದ್ದಿಯನ್ನೂ ಓದಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಮನೆ ನಿರ್ಮಾಣದಲ್ಲಿ ಗೋಲ್ಮಾಲ್; ಇಡಿ ಅಧಿಕಾರಿಗಳಿಂದ ದಾಳಿ, ತೀವ್ರ ಶೋಧ