ನವದೆಹಲಿ: ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ (Delhi Excise Policy Case) ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಜೈಲಿನಿಂದಲೇ ಮೊದಲ ಆದೇಶ ಹೊರಡಿಸಿದ್ದಾರೆ. ಇ.ಡಿ ಲಾಕಪ್‌ನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರು ನಗರದಲ್ಲಿ ಯಾವ ಕಡೆ ನೀರಿನ ಸಮಸ್ಯೆಯಾಗಿದೆಯೋ, ಅಲ್ಲಿಗೆ ಟ್ಯಾಂಕರ್ ನೀರನ್ನು ಸಮರ್ಪಕವಾಗಿ ಪೂರೈಸಬೇಕು ಎಂಬುದಾಗಿ ದೆಹಲಿ ನೀರಿನ ಇಲಾಖೆಗೆ ಸೂಚಿಸಿದ್ದಾರೆ.
ದೆಹಲಿ ಜಲ ಸಚಿವೆ ಆತಿಶಿ ಅವರಿಗೆ ಈ ಕುರಿತಂತೆ ಕೇಜ್ರಿವಾಲ್ ಅವರು ನೋಟ್ ಒಂದನ್ನು ಕಳುಹಿಸಿದ್ದಾರೆ. “ನಗರದ ಹಲವೆಡೆ ನೀರಿನ ಸಮಸ್ಯೆ ತಲೆದೋರಿದೆ ಎಂಬ ವಿಷಯ ನನಗೆ ಗೊತ್ತಾಯಿತು. ಇದು ನನ್ನನ್ನು ಆತಂಕಕ್ಕೆ ದೂಡಿದೆ. ನಾನು ಜೈಲಿನಲ್ಲಿದ್ದೇನೆ ಎಂದು ಜನ ತೊಂದರೆ ಅನುಭವಿಸುವುದು ಇಷ್ಟವಿಲ್ಲ. ಹಾಗಾಗಿ, ನೀರಿನ ಸಮಸ್ಯೆ ಇರುವ ಕಡೆಗೆಲ್ಲ ಟ್ಯಾಂಕರ್ ನೀರು ಪೂರೈಸಬೇಕು. ಯಾರಿಗೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು” ಎಂಬುದಾಗಿ ಅರವಿಂದ್ ಕೇಜ್ರಿವಾಲ್ ಅವರು ಆದೇಶಿಸಿದ್ದಾರೆ ಎಂದು ಸಚಿವೆ ಆತಿಶಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Delhi CM Arvind Kejriwal sends order from ED custody to Water Minister Atishi. https://t.co/FcceGPK5Yx pic.twitter.com/iZs4PzHhhR
— ANI (@ANI) March 24, 2024
ಬಂಧನಕ್ಕೀಡಾಗಿರುವ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಬೇಕು ಎಂಬುದಾಗಿ ಬಿಜೆಪಿ ಪಟ್ಟು ಹಿಡಿದಿದೆ. ಮತ್ತೊಂದೆಡೆ, ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ. ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದಲೇ ಆಡಳಿತ ನಡೆಸಲಿದ್ದಾರೆ ಎಂಬುದಾಗಿ ಆಪ್ ಸ್ಪಷ್ಟಪಡಿಸಿದೆ.
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Arvind Kejriwal: “ಸಂಪೂರ್ಣ ನಿರಾಶೆಯಾಗಿದೆ….” ಕೇಜ್ರಿವಾಲ್ ಬಗ್ಗೆ ನ್ಯಾ. ಸಂತೋಷ್ ಹೆಗ್ಡೆ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ ವಿರುದ್ಧ ಅಬಕಾರಿ ನೀತಿ ಹಗರಣ ಮಾತ್ರವಲ್ಲ, ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದರು. ಆದರೆ, ದೆಹಲಿ ಹೈಕೋರ್ಟ್ ಇವರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿತ್ತು. ಈಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ