Site icon Vistara News

Gujarat Election 2022 | ಗುಜರಾತ್‌ನಲ್ಲಿ ಉತ್ತರ-ದಕ್ಷಿಣದ ಬಿಜೆಪಿ ಕಾರ್ಯಕರ್ತೆಯರು ಒಂದಾಗಿ ಪ್ರಚಾರ

Gujarat Election

ಗಾಂಧಿನಗರ: ವೈವಿಧ್ಯಮಯ ಭಾರತವನ್ನು ಇದ್ದಂತೆಯೇ ಗೌರವಿಸುವ ಕಾಲ ಮುಗಿಯಿತೋ ಎಂದು ಯೋಚಿಸುತ್ತಿರುವ ಹೊತ್ತಿನಲ್ಲಿ, ಗುಜರಾತ್‌ ಚುನಾವಣೆಯ ಕಣ ಹೊಸ ಪ್ರಯೋಗವೊಂದಕ್ಕೆ ಸಾಕ್ಷಿಯಾಗಿದೆ. ದೇಶದ ನಾನಾ ಕಡೆಗಳಿಂದ ಸುಮಾರು ೧೫೦ ಮಹಿಳಾ ಕಾರ್ಯಕರ್ತರು ಗುಜರಾತ್‌ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಗಳು ಒಂದಕ್ಕೊಂದು ಹತ್ತಿರವಾಗುತ್ತಿವೆ.

ದೇಶದ ಎಲ್ಲ ಭಾಷೆಗಳನ್ನು ಗೌರವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ, ಬಿಜೆಪಿಯ ಮಹಿಳಾ ಮೋರ್ಚಾ ಈ ಪ್ರಯೋಗಕ್ಕೆ ಕೈ ಹಾಕಿದೆ. ದಕ್ಷಿಣ ಭಾರತೀಯ ರಾಜ್ಯಗಳ ಕಾರ್ಯಕರ್ತರು, ಪಕ್ಷದ ಉತ್ತರಭಾರತೀಯ ಕಾರ್ಯಕರ್ತರ ಜತೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಒಬ್ಬ ದಕ್ಷಿಣ ಭಾರತೀಯ ಕಾರ್ಯಕರ್ತರನ್ನು ನೇಮಿಸಲಾಗಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಉತ್ತರ ಮತ್ತು ದಕ್ಷಿಣ ಭಾರತದ ಕಾರ್ಯಕರ್ತರು ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ವಿವಿಧೆಡೆಗಳಿಂದ ಬಂದ ಕಾರ್ಯಕರ್ತರು ತಂತಮ್ಮ ಭಾಷೆಗಳೇ ಮೇಲು ಎಂದು ಭಾವಿಸಿದ್ದರೆ, ಇದೀಗ ಎಲ್ಲ ಭಾಷೆಗಳ ಸೊಗಡು ಪರಿಚಯಿಸಿಕೊಳ್ಳಲು ಸಾಧ್ಯವಾಗಿದೆ. ಈ ಮೂಲಕ ಪಕ್ಷದ ಸಾಂಸ್ಥಿಕ ಕೆಲಸಗಳ ಹೊಣೆಗಾರಿಕೆಯ ಅರಿವೂ ಉಂಟಾಗುತ್ತಿದೆ ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್‌ ಹೇಳಿದ್ದಾರೆ.

“ದಕ್ಷಿಣ ಭಾರತ ಎಂದರೆ ಮದರಾಸಿ ಎಂದಷ್ಟೇ ತಿಳಿದಿದ್ದ ಉತ್ತರದ ಜನರಿಗೆ ಹಾಗಲ್ಲ ಎಂಬುದು ತಿಳಿಯುತ್ತಿದೆ. ದಕ್ಷಿಣ ಭಾರತದಿಂದ ಬಂದ ಮಹಿಳಾ ಕಾರ್ಯಕರ್ತರು ಇಲ್ಲಿನ ಮಹಿಳೆಯರೊಂದಿಗೆ ಮಾತನಾಡುವಾಗ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಬೇರೆಬೇರೆ ಭಾಷೆಗಳನ್ನು ಮಾತಾಡುತ್ತಾರೆ ಎಂಬುದು ಅರಿವಾಗಿದೆ” ಎನ್ನುತ್ತಾರೆ ತಮಿಳುನಾಡಿನ ಶಾಸಕಿಯೂ ಆಗಿರುವ ವನತಿ ಶ್ರೀನಿವಾಸನ್.‌

“ರಾಜಸ್ಥಾನದ ನಾಲ್ಕೈದು ಉಪಭಾಷೆಗಳು ನಮಗೆ ಪರಿಚಯವಾಗಿವೆ. ದೇಶದ ನಾನಾ ಭಾಗಗಳ ಭಾಷೆ, ಸಂಸ್ಕೃತಿ, ಆಹಾರದ ಬಗ್ಗೆ ತಿಳಿದುಕೊಂಡಿದ್ದೇವೆ. ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಿದ್ದೇವೆ. ಎಂಟು ಜಿಲ್ಲೆಗಳಲ್ಲಿ ನಮ್ಮ ಕಚೇರಿಯ ಕಾರ್ಯಕರ್ತರಿದ್ದಾರೆ. ಆಯಾ ಪ್ರದೇಶಗಳಲ್ಲಿ ಯಾವ ಭಾಷಿಕರು ಹೆಚ್ಚಿದ್ದಾರೋ ಅಲ್ಲಿಗೆ ಅದೇ ಭಾಷಾಮೂಲದ ಕಾರ್ಯಕರ್ತರನ್ನು ಕಳುಹಿಸುತ್ತಿದ್ದೇವೆ. ಸೂರತ್‌ನಲ್ಲಿ ಒರಿಯಾ ಭಾಷಿಕರು ಹೆಚ್ಚಿರುವಲ್ಲಿ ನಮ್ಮ ಒಡಿಶಾದ ಕಾರ್ಯಕರ್ತರೇ ಪ್ರಚಾರ ಮಾಡುತ್ತಿದ್ದಾರೆ” ಎಂದು ಅವರು ವಿವರಿಸುತ್ತಾರೆ.

“ಮಹಿಳಾ ಮತದಾರರ ಒಲವು ಹೇಗಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಮೊದಲೆಲ್ಲಾ ಸ್ಥಳೀಯ ಸಮಸ್ಯೆಗಳು, ಧರ್ಮ ಮುಂತಾದ ವಿಷಯಗಳೇ ಚುನಾವಣಾ ಪ್ರಣಾಳಿಕೆಯಲ್ಲಿ ಇರುತ್ತಿದ್ದವು. ಆದರೀಗ ಚುನಾವಣೆ ವಿಧಾನಸಭೆಗೇ ಆಗಿರಲಿ ಅಥವಾ ಸಂಸತ್ತಿಗೇ ಇರಲಿ, ಮಹಿಳೆಯರಿಗಾಗಿ ಒಂದು ಭಾಗವನ್ನೇ ಪ್ರಣಾಳಿಕೆಯಲ್ಲಿ ಮೀಸಲಿಡಲಾಗುತ್ತಿದೆ. ಹಾಗಾಗಿ ಮಹಿಳಾ ಮತದಾರರನ್ನು ಗೆಲ್ಲುವುದು ಮುಖ್ಯ ಎಂಬುದನ್ನು ಪಕ್ಷಗಳು ಅರ್ಥಮಾಡಿಕೊಂಡಿವೆ” ಎಂದವರು ಹೇಳುತ್ತಾರೆ.

ಇದನ್ನೂ ಓದಿ | Corporate Donation | 5 ವರ್ಷದಲ್ಲಿ ಗುಜರಾತ್‌ನಿಂದ ಬಿಜೆಪಿಗೆ 163 ಕೋಟಿ ರೂ. ಕಾರ್ಪೊರೇಟ್ ದೇಣಿಗೆ!

Exit mobile version