ನವದೆಹಲಿ: ಒಡಿಶಾದ ಬಾಲಾಸೋರ್ ಜಿಲ್ಲೆ ಬಹನಗ ಬಜಾರ್ ರೈಲು ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆ ಸಾವಿರ ಸಮೀಪಿಸಿದೆ. ಅಪಘಾತ ನಡೆದ ಸ್ಥಳವು ಮಸಣದಂತಾಗಿದ್ದು, ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಬೆನ್ನಲ್ಲೇ, ರೈಲು ಅಪಘಾತದ ಕುರಿತು ಪಿತೂರಿ, ಮಾನವ ಪ್ರಮಾದ ಸೇರಿ ಹಲವು ದಿಸೆಯಲ್ಲಿ ಶಂಕೆ ವ್ಯಕ್ತವಾಗುತ್ತಿದೆ. ಹಾಗಾಗಿ, ರೈಲ್ವೆ ಮಂಡಳಿಯು ಅಪಘಾತದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಸ್ಪಷ್ಟನೆ ನೀಡಿದೆ.
“ಬಹನಗ ರೈಲು ನಿಲ್ದಾಣದ ಬಳಿ ನಾಲ್ಕು ರೈಲುಗಳು ನಿಂತಿದ್ದವು. ಇವುಗಳಲ್ಲಿ ಎರಡು ಗೂಡ್ಸ್ ರೈಲುಗಳು ಲೂಪ್ ಲೈನ್ (ಬೇರೊಂದು ಎಕ್ಸ್‌ಪ್ರೆಸ್ ರೈಲಿಗೆ ದಾರಿ ಮಾಡಿಕೊಡಲು ರೈಲುಗಳು ನಿಲ್ಲುವ ಹೆಚ್ಚುವರಿ ಹಳಿ) ಮೇಲೆ ನಿಂತಿದ್ದವು. ಕೋರಮಂಡಲ ಹಾಗೂ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರೈಲುಗಳು ಮೇನ್ ಲೈನ್ ಮೇಲೆ ಹೋಗಲು ಲೋಕೋ ಪೈಲಟ್‌ಗೆ ಅನುಮತಿ ನೀಡಲಾಗಿತ್ತು. ಸಿಗ್ನಲ್ ಕೂಡ ಗ್ರೀನ್ ಇತ್ತು. ಆದರೂ, ಅಪಘಾತ ಸಂಭವಿಸಿದೆ” ಎಂದು ರೈಲ್ವೆ ಮಂಡಳಿ ಸದಸ್ಯೆ ಜಯಾ ವರ್ಮಾ ಸಿನ್ಹಾ ಮಾಹಿತಿ ನೀಡಿದ್ದಾರೆ.
ಓವರ್ ಸ್ಪೀಡ್ ಇರಲಿಲ್ಲ
ಗ್ರೀನ್ ಸಿಗ್ನಲ್ ಜತೆಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಲು ಅನುಮತಿ ನೀಡಲಾಗಿತ್ತು. ಅದರಂತೆ, ಗಂಟೆಗೆ 128 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಆದರೆ, ರೈಲು ಗೂಡ್ಸ್ ರೈಲಿಗೆ ಡಿಕ್ಕಿಯಾದ ಕಾರಣ ಭೀಕರವಾಗಿ ಅಪಘಾತ ಸಂಭವಿಸಿತು. ಮೂರು ರೈಲುಗಳ ಮಧ್ಯೆ ಅಪಘಾತವಾಗಲು ಗೊಂದಲ ಕಾರಣವಾಗಿದೆ. ಆದರೆ, ಸಿಗ್ನಲಿಂಗ್ ವಿಷಯದ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆ ಮುಗಿದ ಬಳಿಕವೇ ಎಲ್ಲ ಮಾಹಿತಿ ಲಭ್ಯವಾಗಲಿದೆ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಪಘಾತ ಸ್ಥಳದ ಈಗಿನ ವಿಡಿಯೊ
#WATCH | Odisha: Latest aerial visuals from #BalasoreTrainAccident site where restoration work is underway pic.twitter.com/9WPXhZ8SWi
— ANI (@ANI) June 4, 2023
“ಕೋರಮಂಡಲ ರೈಲು ಲೂಪ್ ಲೈನ್ ಮೇಲೆ ನಿಂತಿದ್ದ ಗೂಡ್ಸ್ ರೈಲಿಗೆ 128 ಕಿ.ಮೀ ವೇಗದಲ್ಲಿ ಚಲಿಸಿ ಗುದ್ದಿದ ಕಾರಣ ಅಪಘಾತದ ತೀವ್ರತೆ ಹೆಚ್ಚಿದೆ. ಹಾಗೆ ನೋಡಿದರೆ, ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಎಲ್‌ಎಚ್‌ಬಿ ಬೋಗಿಗಳಾಗಿವೆ. ಇವು ಹೆಚ್ಚು ಸುರಕ್ಷಿತವಾಗಿವೆ. ಆದರೆ, ಅಷ್ಟೊಂದು ವೇಗದಲ್ಲಿ ಚಲಿಸಿ ರೈಲು ಡಿಕ್ಕಿಯಾದರೆ ಯಾವ ತಂತ್ರಜ್ಞಾನವೂ ಉಪಯೋಗಕ್ಕೆ ಬರುವುದಿಲ್ಲ. ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ಅಪಘಾತವೂ ಇದೇ ಪ್ರಮಾಣದಲ್ಲಿ ಆಗಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ರಜಾದಲ್ಲಿದ್ದ ಎನ್ಡಿಆರ್ಎಫ್ ಯೋಧ!
“ಕೋರಮಂಡಲ ರೈಲು ಗೂಡ್ಸ್ ರೈಲಿಗೆ ಡಿಕ್ಕಿಯಾದ ಬಳಿಕ ಕೋರಮಂಡಲ ರೈಲಿನ ಬೋಗಿಗಳು ಮತ್ತೊಂದು ಮೇನ್ ಲೈನ್ ಮೇಲೆ ಬಿದ್ದಿವೆ. ಇದರಿಂದಾಗಿ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿದೆ. ಆಗ, ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಿಗೆ ಹಾನಿಯಾಗಿದೆ” ಎಂದು ವಿವರಿಸಿದರು. ಅಪಘಾತ ಸ್ಥಳಕ್ಕೆ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.