Site icon Vistara News

Bilkis Bano: ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳನ್ನು ಏಕೆ ಬಿಡುಗಡೆ ಮಾಡಿದಿರಿ? ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಚಾಟಿ

Bilkis Bano Case

What Is Bilkis Bano Case? How She Won In Supreme Court?

ನವದೆಹಲಿ: 2002ರ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano) ಮೇಲೆ ಅತ್ಯಾಚಾರ ಎಸಗಿದ 11 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರಕ್ಕೆ (Gujarat Government) ಸುಪ್ರೀಂ ಕೋರ್ಟ್‌ (Supreme Court) ಚಾಟಿ ಬೀಸಿದೆ. ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, “ಅಪರಾಧಿಗಳನ್ನು ಏಕೆ ಬಿಡುಗಡೆ ಮಾಡಿದಿರಿ” ಎಂದು ಗುಜರಾತ್‌ ಸರ್ಕಾರವನ್ನು ಪ್ರಶ್ನಿಸಿದೆ.

“ಅಪರಾಧಿಗಳಿಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿದೆ. ಇಂತಹ ಪ್ರಕರಣದಲ್ಲಿ ಅಪರಾಧಿಗಳು 14 ವರ್ಷ ಜೈಲು ಶಿಕ್ಷೆ ಅನುಭವಿಸಿದರು ಎಂದು ಏಕೆ ಬಿಡುಗಡೆ ಮಾಡಿದಿರಿ? ಬೇರೆ ಪ್ರಕರಣಗಳಲ್ಲಿ, ಬೇರೆ ಅಪರಾಧಿಗಳು ಮಾಡಿದ ಮನವಿಯನ್ನು ಬಿಟ್ಟು, ಇವರನ್ನೇ ಏಕೆ ಬಿಡುಗಡೆ ಮಾಡಲಾಗಿದೆ? ಇವರಿಗೆ ಮಾತ್ರ ಸರ್ಕಾರವು ನೀತಿಯ ಅಡಿಯಲ್ಲಿ ವಿನಾಯಿತಿ ನೀಡಿದೆ” ಎಂದು ನ್ಯಾಯಮೂರ್ತಿಗಳಾದ ನಾಗರತ್ನಾ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠವು ಪ್ರಶ್ನಿಸಿತು.

ಆಯ್ದ ಅಪರಾಧಿಗಳಿಗೆ ಏಕೆ ಅವಕಾಶ?

“ಕೆಲವರಿಗೆ ಮಾತ್ರ ಏಕೆ ಸರ್ಕಾರದ ನೀತಿಗಳು ಅನ್ವಯವಾಗುತ್ತವೆ? ಸನ್ನಡತೆ ಎಂದ ಮೇಲೆ ಎಲ್ಲ ಕೈದಿಗಳಿಗೂ ಅನ್ವಯವಾಗಬೇಕಲ್ಲವೇ? ಅವಕಾಶಗಳು ಎಲ್ಲ ಕೈದಿಗಳಿಗೂ ಸಮನಾಗಿ ಸಿಗಬೇಕು. ಆದರೆ, ಸರ್ಕಾರವು ಆಯ್ದ ಕೈದಿಗಳಿಗೆ ಮಾತ್ರ ಇಂತಹ ಅವಕಾಶ ನೀಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು. ಗುಜರಾತ್‌ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ವಾದ ಮಂಡಿಸಿದರು.

ಬಿಲ್ಕಿಸ್‌ ಬಾನೊ ಮೇಲೆ ಅತ್ಯಾಚಾರ, ಅವರ ಮಗಳು ಸೇರಿ ಏಳು ಕುಟುಂಬಸ್ಥರ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್‌ ಸರ್ಕಾರವು 1992ರ ನೀತಿ ಅನ್ವಯ ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದೆ. ಗುಜರಾತ್‌ ಸರ್ಕಾರದ ತೀರ್ಮಾನದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಗುಜರಾತ್‌ ಸರ್ಕಾರದ ಕ್ರಮ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಇವರ ಪರ ವಕೀಲೆ ಶೋಭಾ ಗುಪ್ತಾ ಅವರು ನವೆಂಬರ್‌ 30ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರ ಎದುರು ಅರ್ಜಿ ಪ್ರಸ್ತಾಪಿಸಿದ್ದಾರೆ. ಈಗ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

Exit mobile version