Site icon Vistara News

Pariksha Pe Charcha 2024: ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಮೋದಿ ನೀಡಿದ ಟಾಪ್ 10 ಸಲಹೆಗಳಿವು

Narendra Modi

How Face Exams: PM Nanredra Modi 15 Suggestions To Students In Pariksha Pe Charcha 2024

ನವದೆಹಲಿ: ನರೇಂದ್ರ ಮೋದಿ ಅವರು 2024ನೇ ಸಾಲಿನ ಪರೀಕ್ಷಾ ಪೇ ಚರ್ಚಾ (Pariksha Pe Charcha 2024) ಕಾರ್ಯಕ್ರಮ ನಡೆಸಿಕೊಟ್ಟಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲೂ, ಪರೀಕ್ಷೆಯ ಕುರಿತು ವಿದ್ಯಾರ್ಥಿಗಳು (Students) ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿಯು (Narendra Modi) ಹಲವು ಸಲಹೆಗಳನ್ನು ನೀಡಿದ್ದಾರೆ. ಉದಾಹರಣೆ, ನಿದರ್ಶನಗಳ ಮೂಲಕ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ. ಅವುಗಳಲ್ಲಿ ಪ್ರಮುಖ 10 ಸಲಹೆಗಳು ಇಲ್ಲಿವೆ.

  1. ರೈಲು ಬರುತ್ತಲೇ ಯಾರೂ ಸ್ಟೇಷನ್‌ ತಲುಪುವುದಿಲ್ಲ. ರೈಲು ಬರುವ 10 ನಿಮಿಷ ತೆರಳುತ್ತೇವೆ. ಹಾಗೆಯೇ, ಪರೀಕ್ಷೆಯ ಕೊಠಡಿಗೂ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಗೆಳೆಯರೊಂದಿಗೆ ಮಾತನಾಡಿ, ಒಂದು ಜೋಕ್‌ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ.
  2. ಪ್ರಶ್ನೆಪತ್ರಿಕೆ ಕೈಗೆ ನೀಡುತ್ತಲೇ ಗಾಬರಿಯಾಗದಿರಿ. ಪ್ರಶ್ನೆ ಪತ್ರಿಕೆ ಸಿಗುತ್ತಲೇ ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ. ಊಟ ಮಾಡುವಾಗ ಯಾರೂ ಗಡಿಯಾರ ನೋಡುವುದಿಲ್ಲ. ಹಾಗೆಯೇ, ಪರೀಕ್ಷೆ ಬರೆಯುವಾಗ ಅನಗತ್ಯವಾಗಿ ಗಡಿಯಾರ ನೋಡಿಕೊಳ್ಳದಿರಿ. ಅವಸರಕ್ಕೆ ಬಿದ್ದು ಬರೆಯಲು ಮುಂದಾಗದಿರಿ.
  3. ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಓದಿಕೊಂಡು ಹೋಗುತ್ತಾರೆಯೇ ಹೊರತು, ಮೊದಲು ಬರೆದು ಬರೆದು ಅಭ್ಯಾಸ ಮಾಡಿಕೊಂಡಿರುವುದಿಲ್ಲ. ಹಾಗಾಗಿ, ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಹಾಗಾಗಿ, ಪರೀಕ್ಷೆಗೂ ಮೊದಲು ಪ್ರಶ್ನೆಗಳಿಗೆ ಉತ್ತರ ಬರೆದು ಬರೆದು ಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯುವುದೂ ಸಾಧ್ಯವಾಗುತ್ತದೆ.
  4. ಯಾರೇ ಆಗಲಿ, ನೀರಿಗೆ ಇಳಿಯದ ಹೊರತು ಈಜು ಕಲಿಯಲು ಸಾಧ್ಯವಿಲ್ಲ. ಹಾಗೆಯೇ, ಹಳೆಯ ಪ್ರಶ್ನೆಪತ್ರಿಕೆಗಳಿಗೆ, ಪ್ರಶ್ನೆಗಳಿಗೆ ಬರೆದು, ನೋಟ್ಸ್‌ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಬರೆದು ಅಭ್ಯಾಸ ಮಾಡಿಕೊಂಡರೆ, ಮನನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಬಹುದು.
  5. ವಿದ್ಯಾರ್ಥಿಗಳು ಓದಿಕೊಂಡು, ಬರೆದುಕೊಂಡು ಪರೀಕ್ಷೆಗೆ ಹೋಗುವುದರ ಜತೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗಲೇ ಶಿಕ್ಷಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಓದುವಾಗ ಗೊಂದಲ ಬಂದರೆ ಶಿಕ್ಷಕರಿಗೆ ಪ್ರಶ್ನೆ ಕೇಳಬೇಕು, ಮನೆಯಲ್ಲಿದ್ದರೆ ಮೊಬೈಲ್‌ ಕರೆ ಮಾಡಬೇಕು. ಆಗ ತಕ್ಷಣವೇ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
  6. ಎಲ್ಲ ವಿದ್ಯಾರ್ಥಿಗಳ ಬಳಿಯೂ, ಮನೆಗಳಲ್ಲೂ ಮೊಬೈಲ್‌ ಇದೆ. ಆ ಮೊಬೈಲ್‌ಅನ್ನು ನಿತ್ಯ ಚಾರ್ಜ್‌ ಮಾಡದಿದ್ದರೆ ಅದು ಸ್ವಿಚ್‌ಆಫ್‌ ಆಗುತ್ತದೆ. ಹಾಗೆಯೇ, ಮನುಷ್ಯನ ದೇಹವನ್ನೂ ರಿಚಾರ್ಜ್‌ ಮಾಡಬೇಕಾಗುತ್ತದೆ. ಅದರಲ್ಲೂ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹವನ್ನೂ ಉಲ್ಲಸಿತಗೊಳಿಸಬೇಕು.
  7. ವಿದ್ಯಾರ್ಥಿಗಳು ಒಂದೇ ಕಡೆ ಓದುವ ಬದಲು ಎಳೆ ಬಿಸಿಲಿನಲ್ಲಿ ಕುಳಿತು ಓದಬೇಕು. ಶಾಂತಿಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಸರಿಯಾಗಿ ನಿದ್ದೆ ಮಾಡಬೇಕು. ಮೊಬೈಲ್‌ನಲ್ಲಿ ಒಂದರ ಹಿಂದೆ ಒಂದು ರೀಲ್ಸ್‌ಗಳನ್ನು ನೋಡಿದರೆ, ಮೊದಲು ನೋಡಿದ ರೀಲ್‌ ನೆನಪಿರುವುದಿಲ್ಲ. ಹಾಗಾಗಿ, ಎಡೆಬಿಡದೆ ಓದುವ ಬದಲು ದೇಹಕ್ಕೆ ಬೇಕಾಗುವಷ್ಟು ನಿದ್ದೆ ಮಾಡಬೇಕು. ಇದು ಮೆದುಳು, ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಂತ, ಮೋದಿ ಹೇಳಿದರು ಎಂದು ಬರೀ ನಿದ್ದೆಯನ್ನೇ ಮಾಡಬೇಡಿ ಎಂದು ಚಟಾಕಿ ಹಾರಿಸಿದರು.
  8. ಮಕ್ಕಳು ಓದುವುದು, ಬರೆಯುವುದು, ಮನನ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯ. ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಿ. ಬಡತನ ಇರಲಿ, ಸಿರಿತನ ಇರಲಿ, ಇರುವ ಆಹಾರ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ.
  9. ವ್ಯಾಯಾಮವು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ. ನಿತ್ಯವೂ ಬೆಳಗ್ಗೆ ಎದ್ದು ಹಲ್ಲುಜ್ಜುವ ರೀತಿ, ಬೆಳಗ್ಗೆ ಎದ್ದ ತಕ್ಷಣ 10 ನಿಮಿಷವಾದರೂ ವ್ಯಾಯಾಮ ಮಾಡಿ. ಇದರಿಂದ ದೇಹವು ಉಲ್ಲಾಸಗೊಳ್ಳುತ್ತದೆ. ದೈಹಿಕ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ.
  10. ನಾವು ಚಳಿಯೊಂದಿಗೆ ಜೀವನ ಸಾಗಿಸುವ ಮನಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ, ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಾವು ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಮನಸ್ಸನ್ನೂ ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ ಮಾಡಿಕೊಳ್ಳಬೇಕು.

ಇದನ್ನೂ ಓದಿ: Pariksha Pe Charcha 2024: ಪರೀಕ್ಷೆ ಒತ್ತಡ ನಿವಾರಣೆ ಹೇಗೆ? ಮೋದಿ ಮೇಷ್ಟ್ರು ಹೇಳಿದ್ದಿಷ್ಟು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version