Site icon Vistara News

Narendra Modi: ಇನ್ನೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ; ನಿತೀಶ್‌ ಕುಮಾರ್‌ಗೆ ಮೋದಿ ಮಾತಿನೇಟು!

PM Narendra Modi

PM Narendra Modi says Deepfake a big concern, asked ChatGPT to give deepfake warning in content

ಭೋಪಾಲ್‌: “ಹೆಣ್ಣುಮಕ್ಕಳು ಹೆಚ್ಚು ಶಿಕ್ಷಣ ಕಲಿತಷ್ಟು ದೇಶದ ಜನಸಂಖ್ಯೆ ನಿಯಂತ್ರಣ ಆಗುತ್ತದೆ. ಮಕ್ಕಳಾಗಲು ಅವರು ಗಂಡನಿಗೆ ಅವಕಾಶ ನೀಡುವುದಿಲ್ಲ” ಎಂದು ಬಿಹಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ನೀಡಿದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ನಿತೀಶ್‌ ಕುಮಾರ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಇನ್ನೂ ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ” ಎಂದು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯೊಂದರಲ್ಲಿ ಮಾತನಾಡಿದ ಮೋದಿ, ನಿತೀಶ್‌ ಕುಮಾರ್‌ ಅವರ ಹೆಸರು ಪ್ರಸ್ತಾಪಿಸದೆಯೇ ವಾಗ್ದಾಳಿ ನಡೆಸಿದರು. “ಇಂಡಿಯಾ ಒಕ್ಕೂಟದ ದೊಡ್ಡ ನಾಯಕರೊಬ್ಬರು ದೇಶದ ಮಾತೆಯರು, ಸಹೋದರಿಯರ ಕುರಿತು ಕೀಳಾಗಿ ಮಾತನಾಡಿದ್ದಾರೆ. ವಿಧಾನಸಭೆಯಲ್ಲಿ ನಿಂತು ಸಹ್ಯವಲ್ಲದ ಭಾಷೆ ಉಪಯೋಗಿಸಿದ್ದಾರೆ. ಇಷ್ಟಾದರೂ ಇಂಡಿಯಾ ಒಕ್ಕೂಟದ ಯಾವೊಬ್ಬ ನಾಯಕರೂ ಇದನ್ನು ಖಂಡಿಸಿಲ್ಲ. ಇವರು ಇನ್ನೂ ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ” ಎಂದು ಮೋದಿ ಕುಟುಕಿದರು.

“ಇಂಡಿಯಾ ಒಕ್ಕೂಟವು ಘಮಂಡಿಯಾ (ಅಹಂಕಾರದಿಂದ ಕೂಡಿದ) ಘಟಬಂಧನ್‌ ಆಗಿದೆ. ದೇಶದ ಮಾತೆಯರು, ಸಹೋದರಿಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದರೂ ಯಾವ ನಾಯಕನು ಕೂಡ ಒಂದು ಮಾತು ಆಡಿಲ್ಲ. ಅವರಿಗೆ ನಾಚಿಕೆ ಎನ್ನುವುದೇ ಇಲ್ಲ. ಅವರು ದೇಶದ ಘನತೆಗೆ ಚ್ಯುತಿ ತರುತ್ತಿದ್ದಾರೆ” ಎಂದು ಇಂಡಿಯಾ ಒಕ್ಕೂಟದ ನಾಯಕರ ವಿರುದ್ಧ ಮೋದಿ ವಾಗ್ದಾಳಿ ಮಾಡಿದರು.

ಕ್ಷಮೆಯಾಚಿಸಿದ ನಿತೀಶ್‌ ಕುಮಾರ್‌

ನಿತೀಶ್‌ ಕುಮಾರ್‌ ಅವರ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಲೇ ಬಿಹಾರ ಮುಖ್ಯಮಂತ್ರಿಯು ಕ್ಷಮೆಯಾಚಿಸಿದ್ದಾರೆ. “ನಾನು ನೀಡಿದ ಹೇಳಿಕೆಯನ್ನು ಹಿಂಪಡೆಯುತ್ತೇನೆ ಹಾಗೂ ಕ್ಷಮೆಯಾಚಿಸುತ್ತೇನೆ” ಎಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಬಿಹಾರ ಮುಖ್ಯಮಂತ್ರಿ ಹೇಳಿದ್ದಾರೆ. ನಿತೀಶ್‌ ಕುಮಾರ್‌ ಅವರ ಹೇಳಿಕೆಗೆ ಬಿಜೆಪಿ ನಾಯಕರು ಮಾತ್ರವಲ್ಲ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ದೆಹಲಿ ಮಹಿಳಾ ಆಯೋಗ ಕೂಡ ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ, ನಿತೀಶ್‌ ಕುಮಾರ್‌ ಅವರು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದವು.

ಇದನ್ನೂ ಓದಿ: Nitish Kumar: ಹೆಣ್ಣುಮಕ್ಕಳ ಕುರಿತು ಹೇಳಿಕೆ; ಕ್ಷಮೆಯಾಚಿಸಿದ ಸಿಎಂ ನಿತೀಶ್‌ ಕುಮಾರ್

ಬಿಹಾರ ಮುಖ್ಯಮಂತ್ರಿ ಹೇಳಿದ್ದಿಷ್ಟು…

ಬಿಹಾರ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿದ್ದ ಸಿಎಂ ನಿತೀಶ್ ಕುಮಾರ್ ಅವರು ಮಹಿಳೆ ಸುಶಿಕ್ಷಿತಳಾಗಿದ್ದರೆ ಹೇಗೆ ಜನನ ನಿಯಂತ್ರಣ ಸಾಧ್ಯವಾಗುತ್ತದೆ ಎಂಬುದನ್ನು ವಿವರಿಸುತ್ತಾ, ಮಹಿಳೆ ಒಂದೊಮ್ಮೆ ಜ್ಞಾನವಂತಳು, ಸುಶಿಕ್ಷಿತಳಾಗಿದ್ದರೆ ಗಂಡನ ಜತೆ ಮಿಲನಗೊಂಡಾಗಲೂ ತುಂಬ ಎಚ್ಚರವಾಗಿರುತ್ತಾಳೆ ಮತ್ತು ತಾನು ಗರ್ಭಿಣಿಯಾಗುವುದನ್ನು ತಪ್ಪಿಸುತ್ತಾಳೆ ಎಂದು ಹೇಳುತ್ತಾರೆ. ಆದರೆ, ಈ ವೇಳೆ ಬಳಸುವ ಕೈ ಸನ್ನೆಗಳು ಮತ್ತು ಭಾಷೆಯು ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದೆ. ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version