Site icon Vistara News

Dehati Aurat | ಮನಮೋಹನ್‌ ಸಿಂಗ್‌ರನ್ನು ಪಾಕ್‌ ಹೀಗಳೆದಾಗ ತಿರುಗೇಟು ನೀಡಿದ್ದು ಮೋದಿ, ಕಾಂಗ್ರೆಸ್‌ ಮೌನ ಪ್ರಶ್ನಿಸಿದ ಬಿಜೆಪಿ

Dehati Aurat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುಕ ಎಂದು ಕರೆದ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್‌ ಭುಟ್ಟೋ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತದೆ. ಇನ್ನು ಭಾರತದ ಪ್ರಧಾನಿ ಬಗ್ಗೆ ಪಾಕ್‌ ಸಚಿವನ ಉದ್ಧಟತನದ ಹೇಳಿಕೆ ಕುರಿತು ಕಾಂಗ್ರೆಸ್‌ ವಹಿಸಿರುವ ಮೌನವನ್ನು ಬಿಜೆಪಿ ಖಂಡಿಸಿದೆ. ಹಾಗೆಯೇ, “ಆಗಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ರನ್ನು ಪಾಕ್‌ ಪ್ರಧಾನಿ ಆಗಿದ್ದಾಗ ನವಾಜ್‌ ಷರೀಫ್‌, ದೆಹಾತಿ ಔರತ್‌ (ಹಳ್ಳಿ ಹೆಂಗಸು) (Dehati Aurat) ಎಂದು ಹೀಗಳೆದಾಗ ಅವರ ವಿರುದ್ಧ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು” ಎಂದಿದೆ.

“ಪಾಕಿಸ್ತಾನವು ಮನಮೋಹನ್‌ ಸಿಂಗ್‌ ಅವರನ್ನು ಮೂದಲಿಸಿದಾಗ ಮೋದಿ ಅವರು ಷರೀಫ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಈಗ ಮೋದಿ ಅವರನ್ನು ಪಾಕ್‌ ಸಚಿವ ಟೀಕಿಸಿದ್ದಾರೆ. ಹೀಗಿದ್ದರೂ ಕಾಂಗ್ರೆಸ್‌ ಮೌನ ವಹಿಸಿದೆ. ಏಕೆಂದರೆ, ಪಾಕಿಸ್ತಾನ ಹಾಗೂ ಕಾಂಗ್ರೆಸ್‌ನ ಮನಸ್ಥಿತಿ ಒಂದೇ ಆಗಿದೆ” ಎಂದು ಕರ್ನಾಟಕ ಬಿಜೆಪಿ ಟೀಕಿಸಿದೆ. ಹಾಗೆಯೇ, ಮೋದಿ ಅವರು ಷರೀಫ್‌ ವಿರುದ್ಧ ಮಾತನಾಡಿದ ವಿಡಿಯೊ ವೈರಲ್‌ ಆಗಿದೆ.

ಬಿಲಾವಲ್ ಭುಟ್ಟೋ ಹೇಳಿದ್ದೇನು?
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ ಅವರು, ”ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ, ಗುಜರಾತ್‌ ಜನರ ಕಟುಕ ಬದುಕಿದ್ದಾರೆ ಮತ್ತು ಅವರು ಭಾರತದ ಪ್ರಧಾನಿಯಾಗಿದ್ದಾರೆ,” ಎಂದು ಹೇಳಿದ್ದರು. ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡುವಾಗ ಭುಟ್ಟೋ ಪ್ರಧಾನಿ ಮೋದಿ ಅವರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ | ಮೋದಿಯನ್ನು ಕಟುಕ ಎಂದ ಭುಟ್ಟೋ ವಿರುದ್ಧ ಆಕ್ರೋಶ; ದೆಹಲಿಯ ಪಾಕ್​ ರಾಯಭಾರ ಕಚೇರಿಯತ್ತ ನುಗ್ಗಿದ ಬಿಜೆಪಿ ಕಾರ್ಯಕರ್ತರು

Exit mobile version