ನೋಯ್ಡಾ: ಸೆಕ್ಟರ್ ೯೩ ಎ ಪ್ರದೇಶದಲ್ಲಿರುವ ಸೂಪರ್‌ಟೆಕ್‌ನ ಅವಳಿ ಗಗನಚುಂಬಿ ಕಟ್ಟಡಗಳನ್ನು (Twin Tower Demolition) ಧರೆಗುರುಳಿಸಲು ಎಲ್ಲ ಸಿದ್ಧತೆ ನಡೆದಿದೆ. ಅಪೆಕ್ಸ್ ಕಟ್ಟಡವು ೩೨ ಮಹಡಿ ಹೊಂದಿದೆ. ಸಿಯೇನ್ ಕಟ್ಟಡವು ೨೯ ಮಹಡಿಗಳನ್ನು ಹೊಂದಿದೆ. ಎರಡೂ ಕಟ್ಟಡಗಳನ್ನು ಭಾರತದ ೧೦ ಹಾಗೂ ವಿದೇಶದ ೭ ಬ್ಲಾಸ್ಟರ್‌ಗಳ ಯೋಜನೆ ಅನ್ವಯ ನೆಲಸಮ ಮಾಡಲಾಗುತ್ತದೆ. ಆದರೆ, ಸುಮಾರು ೭೦ ಕೋಟಿ ರೂ. ವೆಚ್ಚದಲ್ಲಿ ೨೦೦೫ರಲ್ಲಿ ನಿರ್ಮಾಣವಾದ ಕಟ್ಟಡಗಳ ನೆಲಸಮಗೊಳಿಸಲು ಎಷ್ಟು ಹಣ ಖರ್ಚಾಗುತ್ತದೆ ಎಂಬ ಕುತೂಹಲ ಮೂಡಿದೆ.
ಸುಮಾರು ೩,೭೦೦ ಕೆ.ಜಿ ಸ್ಫೋಟಕಗಳು, ಕಾರ್ಮಿಕರು, ಕಟ್ಟಡ ತ್ಯಾಜ್ಯದ ವಿಲೇವಾರಿ ಸೇರಿ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಲು ೨೦ ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಕಟ್ಟಡ ಕೆಡವಲು ಸೂಪರ್‌ಟೆಕ್ ೫ ಕೋಟಿ ರೂ. ನೀಡಿದರೆ, ಉಳಿದ ೧೫ ಕೋಟಿ ರೂ.ಗಳನ್ನು ಕಟ್ಟಡದ ತ್ಯಾಜ್ಯಗಳ ಮಾರಾಟದಿಂದ ಸಂಗ್ರಹಿಸಲಾಗುತ್ತದೆ. ಎರಡೂ ಕಟ್ಟಡಗಳನ್ನು ೭.೫ ಲಕ್ಷ ಚದರ ಅಡಿಯಲ್ಲಿ ನಿರ್ಮಿಸಲಾಗಿದ್ದು, ಒಂದು ಚದರ ಅಡಿಗೆ ೯೩೩ ರೂ. ವ್ಯಯಿಸಲಾಗಿದೆ. ಇದಕ್ಕೆ ೭೦ ಕೋಟಿ ರೂ. ವ್ಯಯಿಸಲಾಗಿದೆ.
ತ್ಯಾಜ್ಯವೇ ಕುತುಬ್ ಮಿನಾರ್‌ಗಿಂತ ಎತ್ತರ
ಕೆಲವೇ ಕ್ಷಣಗಳಲ್ಲಿ ನೆಲಸಮಗೊಳ್ಳುವ ಕಟ್ಟಡಗಳ ತ್ಯಾಜ್ಯವೇ ಕುತುಬ್ ಮಿನಾರ್‌ಗಿಂತ ಎತ್ತರದಲ್ಲಿ ಬೀಳಲಿದೆ ಎಂದು ವಿಶಿಷ್ಟವಾಗಿ ಹೋಲಿಕೆ ಮಾಡಲಾಗಿದೆ. ಕಟ್ಟಡಗಳ ತೆರವಿನಿಂದ ಸುಮಾರು ೫೫ ಸಾವಿರ ಟನ್ ತ್ಯಾಜ್ಯ ಹೊರಹೊಮ್ಮಲಿದ್ದು, ಇದು ಕುತುಬ್ ಮಿನಾರ್‌ಗಿಂತ ಎತ್ತರದಲ್ಲಿ ಬೀಳಲಿದೆ. ತ್ಯಾಜ್ಯವನ್ನು ತೆಗೆದುಕೊಂಡು ಹೋಗಿ ಸುರಿಯಲು ಐದಾರು ಎಕರೆ ಜಮೀನು ಬೇಕು. ೧,೨೦೦ರಿಂದ ೧,೩೦೦ ಟ್ರಕ್‌ಗಳಲ್ಲಿ ಇದನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ನೋಯ್ಡಾ ಸ್ಥಳೀಯ ಆಡಳಿತ ತಿಳಿಸಿದೆ.
ಜನರ ಆರೋಗ್ಯ ರಕ್ಷಣೆಗೆ ಆದ್ಯತೆ
ಕಟ್ಟಡಗಳನ್ನು ನೆಲಸಮಗೊಳಿದಾಗ ಏಕಾಏಕಿ ಧೂಳು ಉಂಟಾಗುತ್ತದೆ. ಸ್ಫೋಟಕಗಳಿಂದಾಗಿ ಜನರ ಉಸಿರಾಟಕ್ಕೆ ತೊಂದರೆಯಾಗುವ ಸಾಧ್ಯತೆಯೂ ಇದೆ. ನೆಲಸಮದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ನೋಯ್ಡಾ ಆಡಳಿತವು ಮೂರು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಅನುಕೂಲ ಮಾಡಿದೆ. ಸೆಕ್ಟರ್ ೯೩ನಲ್ಲಿರುವ ಫೆಲಿಕ್ಸ್, ಯಥಾರ್ಥ ಸೇರಿ ಮೂರು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ | Twin Tower Demolition | ಅವಳಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ; ಸ್ಥಳ ಪರಿಶೀಲನೆ ಮಾಡಿದ ಸಿಎಂ ಯೋಗಿ