Site icon Vistara News

Article 370: ಕಾಶ್ಮೀರ ಕುರಿತ ಸುಪ್ರೀಂ ತೀರ್ಪಿಗೆ ಪಾಕಿಸ್ತಾನದ ಅಧಿಕಪ್ರಸಂಗ ಹೇಳಿಕೆ!

Jammu Kashmir

ನವದೆಹಲಿ: 370 ನೇ ವಿಧಿಯನ್ನು (Article 370) ರದ್ದುಪಡಿಸಿರುವ ಭಾರತ ಸರ್ಕಾರದ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪಿಗೆ ಯಾವುದೇ ಕಾನೂನು ಮೌಲ್ಯವಿಲ್ಲ ಎಂದು ಪಾಕಿಸ್ತಾನ ಸೋಮವಾರ ಹೇಳಿದೆ. ಆಗಸ್ಟ್ 5, 2019 ರಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ “ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು” ಅಂತಾರಾಷ್ಟ್ರೀಯ ಕಾನೂನು ಮಾನ್ಯ ಮಾಡುವುದಿಲ್ಲ ಎಂದು ಪ್ರತಿಪಾದಿಸಿದೆ. ಈ ಮೂಲಕ ತನಗೆ ಸಂಬಂಧವೇ ಇಲ್ಲದ ಭಾರತದ ಆಡಳಿತಾತ್ಮಕ ವಿಷಯದ ಬಗ್ಗೆ ನೆರೆಯ ಪಾಕಿಸ್ತಾನ ಮತ್ತೊಮ್ಮೆ ಮೂಗು ತೂರಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವ 2019 ರ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರದ ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಸರ್ವಾನುಮತದಿಂದ ಎತ್ತಿಹಿಡಿದಿದೆ.

ಆಗಸ್ಟ್ 5, 2019ರಲ್ಲಿ ಭಾರತ ತೆಗೆದುಕೊಂಡಿರುವ ಕಾನೂನುಬಾಹಿರ ಕ್ರಮಗಳನ್ನು ಅಂತಾರಾಷ್ಟ್ರೀಯ ಕಾನೂನು ಮಾನ್ಯ ಮಾಡುವುದಿಲ್ಲ. ಭಾರತೀಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ಅನುಮೋದನೆಗೆ ಯಾವುದೇ ಕಾನೂನು ಮೌಲ್ಯವಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಕಾಶ್ಮೀರಿಗಳು ಸ್ವಯಂ ನಿರ್ಣಯದ ಅವಿಭಾಜ್ಯ ಹಕ್ಕನ್ನು ಹೊಂದಿದ್ದಾರೆ” ಎಂದು ಹಂಗಾಮಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಹೇಳಿಕೆ ನೀಡಿದ್ದಾರೆ.

ಇಸ್ಲಾಮಾಬಾದ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲಾನಿ, ಕಾಶ್ಮೀರಿ ಜನರು ಮತ್ತು ಪಾಕಿಸ್ತಾನದ ಇಚ್ಛೆಗೆ ವಿರುದ್ಧವಾಗಿ ಈ ವಿವಾದಿತ ಪ್ರದೇಶದ ಸ್ಥಾನಮಾನದ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಭಾರತಕ್ಕೆ ಇಲ್ಲ ಎಂದು ಹೇಳಿದರು. “ಜಮ್ಮು ಮತ್ತು ಕಾಶ್ಮೀರದ ಸ್ಥಿತಿಯ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ಘೋಷಿಸಿದ ತೀರ್ಪನ್ನು ಪಾಕಿಸ್ತಾನ ಸ್ಪಷ್ಟವಾಗಿ ತಿರಸ್ಕರಿಸುತ್ತದೆ” ಎಂದು ಅವರು ಹೇಳಿದ್ದಾರೆ.

ನ್ಯಾಯದ ವಿಡಂಬನೆ ಎಂದ ಪಾಕ್​!

ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳಿಗೆ ನ್ಯಾಯಾಂಗವು ಅನುಮೋದನೆ ನೀಡಿರುವುದು “ನ್ಯಾಯದ ವಿಡಂಬನೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಮುಖ್ಯಮಂತ್ರಿಯಿಂದ ನನ್ನ ಮೇಲೆ ಹಲ್ಲೆಗೆ ಪ್ರಚೋದನೆ: ಕೇರಳ ರಾಜ್ಯಪಾಲ ಆರೋಪ

ಜಮ್ಮು ಮತ್ತು ಕಾಶ್ಮೀರವು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ವಿವಾದದ ತಾಣವಾಗಿದೆ. ಇದು ಏಳು ದಶಕಗಳಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಸೂಚಿಯಲ್ಲಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಅಂತಿಮ ನಿರ್ಧಾರವನ್ನು ಸಂಬಂಧಿತ ಯುಎನ್ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಮತ್ತು ಕಾಶ್ಮೀರಿ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ನಡೆಸಬೇಕು ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಮೇಲೆ ಭಾರತೀಯ ಸಂವಿಧಾನದ ಪರಮಾಧಿಕಾರವನ್ನು ಪಾಕಿಸ್ತಾನ ಒಪ್ಪಿಕೊಳ್ಳುವುದಿಲ್ಲ. ಭಾರತೀಯ ಸಂವಿಧಾನಕ್ಕೆ ಅಧೀನವಾಗಿರುವ ಯಾವುದೇ ಪ್ರಕ್ರಿಯೆಗೆ ಯಾವುದೇ ಕಾನೂನು ಮಹತ್ವವಿಲ್ಲ. ದೇಶೀಯ ಶಾಸನಗಳು ಮತ್ತು ನ್ಯಾಯಾಂಗ ತೀರ್ಪುಗಳ ನೆಪದಲ್ಲಿ ಭಾರತವು ತನ್ನ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ತ್ಯಜಿಸಲು ತಿರಸ್ಕರಿಸಬಾರದು ಎಂದು ಅವರು ಹೇಳಿದ್ದಾರೆ.

ವಿಧಿ ರದ್ದಿನಿಂದ ಸಂಬಂಧ ಹಾಳು

ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಆಗಾಗ್ಗೆ ಹದಗೆಡುತ್ತಿವೆ. ಆದಾಗ್ಯೂ, 370ನೇ ವಿಧಿ ರದ್ದು ಮಾಡಿದ ಬಳಿಕ ಪಾಕಿಸ್ತಾನವು ಭಾರತೀಯ ರಾಯಭಾರಿಯನ್ನು ಹೊರಹಾಕಿತ್ತು. ಅಲ್ಲಿಂದ ವ್ಯಾಪಾರ ಸಂಬಂಧಗಳು ಹದಗೆಟ್ಟವು.

ಕಾಶ್ಮೀರವು ಆಂತರಿಕ ವಿಷಯ ಎಂದು ಭಾರತ ಪದೇ ಪದೇ ಹೇಳಿದೆ. ಭಯೋತ್ಪಾದನೆ, ಹಿಂಸಾಚಾರ ಮತ್ತು ಹಗೆತನ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ, ಸ್ನೇಹಪರ ಸಂಬಂಧವನ್ನು ಬಯಸುತ್ತದೆ ಎಂಬುದಾಗಿಯೂ ಭಾರತ ಸರ್ಕಾರ ಪಾಕ್​ಗೆ ತಿರುಗೇಟು ಕೊಟ್ಟಿದೆ.

ಕಾನೂನು ಬಾಹಿರ

2019ರ ಆಗಸ್ಟ್ 5ರಂದು ಭಾರತ ತೆಗೆದುಕೊಂಡಿರುವುದು “ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳು. ಕಾಶ್ಮೀರದ ಜನಸಂಖ್ಯಾ ರಚನೆ ಮತ್ತು ರಾಜಕೀಯ ದೃಶ್ಯವನ್ನೇ ಬದಲಾಯಿಸುವ ಗುರಿಯನ್ನು ಸರ್ಕಾರ ಹೊಂದಿವೆ ಎಂದು ಗಿಲಾನಿ ಆರೋಪಿಸಿದ್ದಾರೆ.

ಕಾಶ್ಮೀರಿ ಜನರನ್ನು ತಮ್ಮ ಸ್ವಂತ ನೆಲದಲ್ಲಿ ಶಕ್ತಿಹೀನ ಸಮುದಾಯವಾಗಿ ಪರಿವರ್ತಿಸುವುದು ಅವರ ಅಂತಿಮ ಗುರಿಯಾಗಿದೆ. ಇದು ಪಾಕಿಸ್ತಾನಕ್ಕೆ ಗಂಭೀರ ಕಾಳಜಿಯ ವಿಷಯವಾಗಿ ಉಳಿದಿವೆ. ಶಾಂತಿ ಮತ್ತು ಸಂವಾದದ ವಾತಾವರಣವನ್ನು ಸೃಷ್ಟಿಸಲು ಈ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

Exit mobile version