ಶ್ರೀನಗರ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಉಗ್ರರು ಒಳನುಸುಳುವುದು, ಒಳನುಸುಳುವಾಗಲೇ ಅವರನ್ನು ನಮ್ಮ ಯೋಧರು ಹೊಡೆದುರುಳಿಸುವ ಸುದ್ದಿಯನ್ನು ಕೇಳಿರುತ್ತೇವೆ, ಓದಿರುತ್ತೇವೆ. ಆದರೆ, ಗಡಿಯಲ್ಲಿ ಪಾಕ್ ಉಗ್ರರು ಹೇಗೆ ನುಸುಳುತ್ತಾರೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಆದರೆ, ಇತ್ತೀಚೆಗೆ ನೆರೆರಾಷ್ಟ್ರದ ಮೂವರು ಉಗ್ರರು ಗಡಿಯಲ್ಲಿ ಹೇಗೆ ನುಸುಳುತ್ತಾರೆ ಎಂಬುದರ ವಿಡಿಯೊ ಲಭ್ಯವಾಗಿದ್ದು, ಅದೀಗ ವೈರಲ್ (Viral Video) ಆಗಿದೆ.
ಕೆಲ ದಿನಗಳ ಹಿಂದಷ್ಟೇ ಬಾರಾಮುಲ್ಲಾ ಜಿಲ್ಲೆ ಉರಿ ವಲಯದ ಕಮಲ್‌ಕೋಟೆ ಬಳಿ ಇರುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಉಗ್ರರು ನುಸುಳಲು ಯತ್ನಿಸಿದ್ದರು. ಇದನ್ನು ಅರಿತಿದ್ದ ಯೋಧರು ನುಸುಳುವಿಕೆಯ ಯತ್ನವನ್ನು ವಿಫಲಗೊಳಿಸಿದ್ದಲ್ಲದೆ, ಮೂವರೂ ಉಗ್ರರನ್ನು ಹೊಡೆದುರುಳಿಸಿದ್ದರು.
“ಉಗ್ರರು ಹೇಗೆ ನುಸುಳುತ್ತಾರೆ, ಅದಕ್ಕಾಗಿ ಅವರ ಪ್ರಯತ್ನ ಹೇಗಿರುತ್ತದೆ ಎಂಬುದು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಲ್ಲಿ ಸೆರೆಯಾಗಿದೆ. ಇದರ ಮೂಲಕವೇ ಯೋಧರಿಗೆ ಮಾಹಿತಿ ಲಭ್ಯವಾಗಿ, ಅವರನ್ನು ಹತ್ಯೆಗೈಯಲಾಯಿತು” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆಗಸ್ಟ್ ೨೫ರ ಬೆಳಗ್ಗೆ ೮.೪೫ರ ಸುಮಾರಿಗೆ ಉಗ್ರರನ್ನು ಭದ್ರತಾ ಸಿಬ್ಬಂದಿ ಹತ್ಯೆಗೈದಿದೆ.
ಇದನ್ನೂ ಓದಿ | ರಕ್ತ ಬಸಿಯಲು ಬಂದಿದ್ದ ಪಾಕ್ ಉಗ್ರನಿಗೆ ರಕ್ತ ನೀಡಿ ಬದುಕುಳಿಸಿದ ಭಾರತೀಯ ಸೇನಾ ಯೋಧರು!