Site icon Vistara News

Aadhaar Address Change | ಕುಟುಂಬದ ಮುಖ್ಯಸ್ಥರ ವಿಳಾಸ ಬಳಸಿ ನಿಮ್ಮ ಆಧಾರ್‌ ವಿಳಾಸ ಬದಲಾವಣೆ ಹೇಗೆ? ಹೀಗೆ ಮಾಡಿ

Aadhaar Address Change

ನವದೆಹಲಿ: ವಿಳಾಸ ದೃಢೀಕರಿಸುವ ದಾಖಲೆ ಇಲ್ಲದೆ ಆಧಾರ್‌ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆ ಮಾಡಲು ಕಷ್ಟವಾಗುತ್ತಿರುವ ಕಾರಣ ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರವು (UIDAI) ಹೊಸ ಸೌಲಭ್ಯ ಕಲ್ಪಿಸಿದೆ. ‘ಕುಟುಂಬದ ಮುಖ್ಯಸ್ಥ’ರ (Head Of The Family ಅಥವಾ HoF) ವಿಳಾಸ ಬಳಸಿ ಈಗ ಆನ್‌ಲೈನ್‌ ಮೂಲಕವೇ ಯಾವುದೇ ದಾಖಲೆ ಇಲ್ಲದೆ ಆಧಾರ್‌ ವಿಳಾಸ (Aadhaar Address Change) ಬದಲಾಯಿಸಬಹುದಾಗಿದೆ.

ತಂದೆ ಅಥವಾ ತಾಯಿಯ ವಿಳಾಸ ಬಳಸಿ, ಅವರ ಜತೆಗೆ ನಿಮಗೆ ಇರುವ ಸಂಬಂಧದ ದಾಖಲೆ ಸಲ್ಲಿಸುವ ಮೂಲಕ ಸುಲಭವಾಗಿ ವಿಳಾಸ ಬದಲಾಯಿಸಿಕೊಳ್ಳಬಹುದಾಗಿದೆ. ಇದರಿಂದ ಮಕ್ಕಳು, ಹೆಂಡತಿ ಸೇರಿ ಕುಟುಂಬ ಸದಸ್ಯರ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು. ತಂದೆ-ತಾಯಿ ಇಲ್ಲದವರು, ಕುಟುಂಬದಲ್ಲಿಯೇ 18 ವರ್ಷ ದಾಟಿದ, ವಿಳಾಸ ಇರುವವರನ್ನೇ ಕುಟುಂಬದ ಮುಖ್ಯಸ್ಥರು ಎಂಬುದಾಗಿ ಘೋಷಿಸಿ ವಿಳಾಸ ಬದಲಾಯಿಸಬಹುದು.

ಕುಟುಂಬದ ಮುಖ್ಯಸ್ಥ ಎಂದು ಘೋಷಿಸುವುದು ಹೇಗೆ?
UIDAI ಪೋರ್ಟಲ್‌ಗೆ ಭೇಟಿ ನೀಡಿ, ‘ಮೈ ಆಧಾರ್‌ ಸರ್ವಿಸ್’‌ ಮೇಲೆ ಕ್ಲಿಕ್‌ ಮಾಡಿದರೆ HoF ಆಯ್ಕೆ ಲಭ್ಯವಾಗುತ್ತದೆ. ಎಚ್‌ಒಎಫ್‌ ಆಯ್ಕೆಯ ಮೂಲಕ ಕುಟುಂಬದ ಮುಖ್ಯಸ್ಥರ ಅಂಕಪಟ್ಟಿ, ಪಾಸ್‌ಪೋರ್ಟ್‌, ಪಡಿತರ ಚೀಟಿ, ವಿವಾಹ ಪ್ರಮಾಣಪತ್ರವನ್ನು ಅಪ್‌ಲೋಡ್‌ ಮಾಡಬೇಕು. ಇದಾದ ಬಳಿಕ ವಿಳಾಸ ಬದಲಾಯಿಸಿಕೊಳ್ಳುವವರು ಕುಟುಂಬದ ಮುಖ್ಯಸ್ಥರ ಜತೆಗಿನ ಸಂಬಂಧ ದೃಢೀಕರಿಸುವ ದಾಖಲೆ ಅಪ್‌ಲೋಡ್‌ ಮಾಡಬೇಕು.

ಇದಾದ ಬಳಿಕ ವಿಳಾಸ ಬದಲಾವಣೆಯ 50 ರೂ. ಪಾವತಿಸಿ, ಇದಕ್ಕೆ ಕುಟುಂಬದ ಮುಖ್ಯಸ್ಥರ ಅನುಮತಿ (SMSಗೆ ಅಪ್ರೂವ್‌ ಕೊಟ್ಟರೆ ಸಾಕು) ಪಡೆದರೆ, 30 ದಿನದಲ್ಲಿ ಕುಟುಂಬದ ಸದಸ್ಯರ ವಿಳಾಸ ಬದಲಾವಣೆಯಾಗುತ್ತದೆ. ಪದೇಪದೆ ವರ್ಗಾವಣೆ ಆಗುವ ನೌಕರರು ಅಥವಾ ಅಧಿಕಾರಿಗಳು ಹಾಗೂ ನಿಗದಿತ ವಿಳಾಸ ಇಲ್ಲದವರಿಗೆ ಹೊಸ ನಿಯಮದಿಂದ ಹೆಚ್ಚಿನ ಅನುಕೂಲ ಆಗಲಿದೆ.

ಆರು ಸ್ಟೆಪ್‌ಗಳಲ್ಲಿ ಆಧಾರ್‌ ವಿಳಾಸ ಬದಲಾವಣೆ ಹೇಗೆ?

ಸ್ಟೆಪ್‌ 1: UIDAI ಪೋರ್ಟಲ್‌ಗೆ ಭೇಟಿ ನೀಡಿ, ‘ಮೈ ಆಧಾರ್‌ ಸರ್ವಿಸ್’‌ ಮೇಲೆ ಕ್ಲಿಕ್‌ ಮಾಡಿ.

ಸ್ಟೆಪ್‌ 2: ಆಗ ನಿಮ್ಮ ಕುಟುಂಬದ ಮುಖ್ಯಸ್ಥರ (HoF) ಆಯ್ಕೆ ಮೇಲೆ ಕ್ಲಿಕ್‌ ಮಾಡಬಹುದು.

ಸ್ಟೆಪ್‌ 3: ಎಚ್‌ಒಎಫ್‌ ಜತೆ ನಿಮಗಿರುವ ಸಂಬಂಧದ ದಾಖಲೆ ಒದಗಿಸುವುದು.

ಸ್ಟೆಪ್‌ 4: ಆನ್‌ಲೈನ್‌ನಲ್ಲಿಯೇ 50 ರೂ. ಪಾವತಿಸಿದ ಬಳಿಕ ಸರ್ವಿಸ್‌ ರಿಕ್ವೆಸ್ಟ್‌ ನಂಬರ್‌ (SRN) ಶೇರ್‌ ಆಗುತ್ತದೆ.

ಸ್ಟೆಪ್‌ 5: ಬಳಿಕ ಕುಟುಂಬದ ಮುಖ್ಯಸ್ಥರಿಗೆ ವಿಳಾಸ ಬದಲಾವಣೆ ಕುರಿತು ರಿಕ್ವೆಸ್ಟ್‌ ಇರುವ ಎಸ್‌ಎಂಎಸ್‌ ರವಾನೆಯಾಗುತ್ತದೆ. ರಿಕ್ವೆಸ್ಟ್‌ಗೆ ಕುಟುಂಬದ ಮುಖ್ಯಸ್ಥರು ಅಪ್ರೂವ್‌ ಮಾಡಬೇಕು ಹಾಗೂ ಮೈ ಆಧಾರ್‌ ಪೋರ್ಟಲ್‌ಗೆ ಲಾಗ್‌ ಇನ್‌ ಆಗಿ 30 ದಿನದಲ್ಲಿ ಒಪ್ಪಿಗೆ (Consent) ಸೂಚಿಸಬೇಕು.

ಸ್ಟೆಪ್‌ 6: ಒಪ್ಪಿಗೆ ಸೂಚಿಸಿದ ಬಳಿಕ ವಿಳಾಸ ಬದಲಾವಣೆ ಪ್ರಕ್ರಿಯೆ ಆರಂಭವಾಗುತ್ತದೆ.

ಇದನ್ನೂ ಓದಿ | ವಿಸ್ತಾರ Money Guide | mAadhaar App | ಎಂ ಆಧಾರ್‌ ಆ್ಯಪ್ ಬಳಸಿ ಕುಟುಂಬ ಸದಸ್ಯರ ಪ್ರೊಫೈಲ್‌ ಸೇರಿಸುವುದು ಹೇಗೆ?

Exit mobile version