Site icon Vistara News

Cheque Writing Tips : ಚೆಕ್‌ಗೆ ಸಹಿ ಹಾಕುವ ಮುನ್ನ…. ನೆನಪಿರಲಿ ಈ ಅಂಶಗಳು

Cheque Writing Tips

ಬೆಂಗಳೂರು: ಬ್ಯಾಂಕ್‌ಗಳಲ್ಲಿ ವ್ಯವಹಾರ ಎಲ್ಲರಿಗೂ ಅರ್ಥವಾಗುವುದಲ್ಲ. ಬ್ಯಾಂಕ್‌ ಖಾತೆ ಮಾಡಿಸಿದಾಗ ಬ್ಯಾಂಕ್‌ನವರು ಪಾಸ್‌ಬುಕ್‌, ಎಟಿಎಂ ಕಾರ್ಡ್‌ ಹಾಗೆಯೇ ಚೆಕ್‌ ಬುಕ್‌ ಅನ್ನು ಕೊಡುತ್ತಾರೆ. ಆದರೆ ಅವುಗಳನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದು ಕೆಲವರಿಗೆ ತಿಳಿದಿರುವುದಿಲ್ಲ. ಅದರಲ್ಲೂ ಚೆಕ್‌ಬುಕ್‌ಗಳನ್ನು ಬಳಸುವಾಗಂತೂ ನಾವು ತುಂಬಾನೇ ಎಚ್ಚರವಾಗಿರಬೇಕು. ಚೆಕ್‌ಬುಕ್‌ ಬಳಸುವಾಗ ಯಾವ ಯಾವ ವಿಚಾರದಲ್ಲಿ ಗಮನ ಹರಿಸಬೇಕು ಎನ್ನುವ ಬಗ್ಗೆ ಇಲ್ಲಿದೆ (Cheque Writing Tips) ಮಾಹಿತಿ.

ONLY ಬೇಕೇ ಬೇಕು

ಚೆಕ್‌ನಲ್ಲಿ ನೀವು ಅಂಕಿಗಳಲ್ಲಿ ಮೊತ್ತವನ್ನು ಬರೆದಿರುತ್ತೀರಿ. ಅದಾದ ಮೇಲೆ ಕಡ್ಡಾಯವಾಗಿ ಅದನ್ನು ಅಕ್ಷರದಲ್ಲೂ ಬರೆಯಲೇಬೇಕು. ಹಾಗೆ ಬರೆಯುವಾಗ ಅಕ್ಷರದಲ್ಲಿ ಬರೆದ ಮೊತ್ತದ ಮುಂದೆ ONLY ಎಂದು ಬರೆಯುವುದನ್ನು ಮರೆಯಬೇಡಿ. ಹೀಗೆ ಮಾಡುವುದರಿಂದ ಮೋಸಗಾರರು ನೀವು ಬರೆದ ಮೊತ್ತವನ್ನು ಬದಲಿಸಲು ಸಾಧ್ಯವಾಗುವುದಿಲ್ಲ.

ಖಾಲಿ ಚೆಕ್‌ ಮೇಲೆ ಸಹಿ

ನೀವು ಯಾವಾಗಲೇ ಚೆಕ್‌ ಮೇಲೆ ಸಹಿ ಹಾಕುವುದಿದ್ದರೂ ಅದರ ಮೇಲಿನ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಚೆಕ್‌ ಮೇಲೆ ಯಾರ ಹೆಸರು ಬರೆದಿದೆ, ಎಷ್ಟು ಮೊತ್ತ ಬರೆಯಲಾಗಿದೆ ಹಾಗೆಯೇ ಯಾವ ದಿನಾಂಕವನ್ನು ನಮೂದಿಸಲಾಗಿದೆ ಎನ್ನುವುದು ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಏನೂ ಬರೆಯದ ಚೆಕ್‌ ಮೇಲೆ ಸಹಿ ಹಾಕುವುದಕ್ಕೆ ಹೋಗಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಖಾತೆಯಲ್ಲಿನ ಅಷ್ಟೂ ಮೊತ್ತವನ್ನು ಯಾರಾದರೂ ದೋಚಿಕೊಳ್ಳಬಹುದು.

ಸೂಕ್ಷ್ಮತೆ ಮರೆಯದಿರಿ

ಚೆಕ್‌ನಲ್ಲಿ ಸಹಿ ಮಾಡುವಾಗ ಸೂಕ್ಷ್ಮತೆ ಅತಿ ಮುಖ್ಯ. ನಿಮ್ಮ ಖಾತೆ ಮಾಡಿಸುವಾಗ ಯಾವ ರೀತಿಯ ಸಹಿ ಹಾಕಿರುತ್ತೀರೋ ಅದೇ ರೀತಿಯ ಸಹಿ ಚೆಕ್‌ನಲ್ಲಿರಬೇಕು. ಸಣ್ಣ ದೋಷವಾದರೂ ಬ್ಯಾಂಕ್‌ನಿಂದ ಚೆಕ್‌ ನಿರಾಕರಣೆಯಾಗುವ ಸಾಧ್ಯತೆಯಿರುತ್ತದೆ.

ದಿನಾಂಕ


ಚೆಕ್‌ ಬರೆಯುವಾಗ ನೀವು ಭವಿಷ್ಯದ ದಿನಕ್ಕೂ ಅನುಗುಣವಾಗುವಂತೆ ಬರೆಯಬಹುದು. ಆದರೆ ಹಾಗೆ ಮಾಡುವುದರಿಂದ ನಿಮಗೆ ಮುಂದೆ ಸಮಸ್ಯೆಗಳು ಆಗಲೂಬಹುದು. ಹಾಗಾಗಿ ಚೆಕ್‌ ಬರೆಯುವ ಮುನ್ನ ದಿನಾಂಕದ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ.

ಪೆನ್ನಿನ ಬಗ್ಗೆ ಇರಲಿ ಗಮನ

ಚೆಕ್‌ ಬರೆಯುವ ಪೆನ್ನಿನ ಬಗ್ಗೆಯೂ ಗಮನ ಇರಲಿ. ಬಾಲ್‌ಪಾಯಿಂಟ್‌ ಪೆನ್ನು ಅಥವಾ ಪರ್ಮನೆಂಟ್‌ ಇಂಕ್‌ ಪೆನ್ನಿನಿಂದಲೇ ಚೆಕ್‌ ಬರೆಯಿರಿ. ಈ ರೀತಿ ಮಾಡುವುದರಿಂದ ಮೋಸಗಾರರು ನೀವು ಬರೆದಿರುವುದನ್ನು ಬದಲಾಯಿಸಲು ಆಗುವುದಿಲ್ಲ.

ಖಾತೆಯಲ್ಲಿ ಹಣವಿದೆಯೇ?

ಚೆಕ್‌ ಬರೆಯುವ ಮುನ್ನ ನೀವು ಚೆಕ್‌ನಲ್ಲಿ ಬರೆಯುತ್ತಿರುವ ಮೊತ್ತದಷ್ಟು ಹಣ ನಿಮ್ಮ ಖಾತೆಯಲ್ಲಿ ಇದೆಯೇ ಎನ್ನುವುದನ್ನು ದೃಢ ಪಡಿಸಿಕೊಳ್ಳಿ. ಚೆಕ್‌ನಲ್ಲಿರುವ ಮೊತ್ತದಷ್ಟು ಹಣ ಖಾತೆಯಲ್ಲಿಲ್ಲದಿದ್ದರೆ ಚೆಕ್‌ ಬೌನ್ಸ್‌ ಆಗುತ್ತದೆ. ಇದು ಚೆಕ್‌ ನಿರಾಕರಣೆ ಆಗಲು ಇರುವ ಸಾಮಾನ್ಯ ಕಾರಣವಾಗಿದೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಗಮನವಿರಲಿ.

ಚೆಕ್‌ ಸಂಖ್ಯೆ:


ಚೆಕ್‌ ಅನ್ನು ಯಾರಾದರೂ ಹೆಸರಿಗೆ ಕೊಡುವ ಮುನ್ನ ಆ ಚೆಕ್‌ನ ಸಂಖ್ಯೆಯನ್ನು ಬರೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಮುಂದೊಮ್ಮೆ ಅದರಿಂದ ಸಮಸ್ಯೆಯುಂಟಾಗುವ ಸನ್ನಿವೇಶ ಬಂದರೆ ಆ ಸಂಖ್ಯೆ ನಿಮಗೆ ಸಹಾಯಕಾರಿಯಾಗುತ್ತದೆ.

Exit mobile version