Site icon Vistara News

Pariksha Pe Charcha 2024: ಪರೀಕ್ಷೆ ಒತ್ತಡ ನಿವಾರಣೆ ಹೇಗೆ? ಮೋದಿ ಮೇಷ್ಟ್ರು ಹೇಳಿದ್ದಿಷ್ಟು

I fall asleep within 30 seconds of going to bed Says PM Narendra Modi

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ (Bharat Mandapam) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಏಳನೇ ವರ್ಷದ ಪರೀಕ್ಷಾ ಪೇ ಚರ್ಚಾ (Pariksha Pe Charcha 2024) ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪರೀಕ್ಷೆಯನ್ನು ಎದುರಿಸುವ ದೃಷ್ಟಿಯಿಂದ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ದುಗುಡ, ಭೀತಿ ಹೋಗಲಾಡಿಸುವ ದಿಸೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, “ಪರೀಕ್ಷೆಯ ಭೀತಿ, ಒತ್ತಡ ಎದುರಿಸಿ, ಯಶಸ್ವಿಯಾಗುವುದು” ಹೇಗೆ ಎಂಬ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು.

“ಪರೀಕ್ಷಾ ಪೇ ಚರ್ಚಾ ಸರಣಿಯ ಏಳನೇ ವರ್ಷದ ಕಾರ್ಯಕ್ರಮ ಇದಾಗಿದೆ. ಪ್ರತಿ ಬಾರಿ ಕಾರ್ಯಕ್ರಮ ನಡೆದಾಗಲೂ, ವಿದ್ಯಾರ್ಥಿಗಳಿಂದ ಪರೀಕ್ಷಾ ಒತ್ತಡ ನಿವಾರಣೆಯ ಪ್ರಶ್ನೆ ಬಂದೇ ಬರುತ್ತದೆ. ಪ್ರತಿ ಬಾರಿಯೂ ಹೊಸ ವಿದ್ಯಾರ್ಥಿಗಳು, ಹೊಸ ಬ್ಯಾಚ್‌ ಬರುವುದರಿಂದ ಈ ಪ್ರಶ್ನೆ ಬಂದೇ ಬರುತ್ತದೆ. ಆದರೆ, ಶಾಲೆಯಲ್ಲಿ ಶಿಕ್ಷಕರು ಬದಲಾಗದಿರುವುದರಿಂದ ಅವರು ವಿದ್ಯಾರ್ಥಿಗಳ ಒತ್ತಡವನ್ನು ನಿವಾರಿಸಬಹುದು. ಆದರೂ, ನಾನು ವಿದ್ಯಾರ್ಥಿಗಳಿಗೆ ಒಂದಷ್ಟು ಸಲಹೆ ನೀಡುತ್ತೇನೆ. ದೃಢ ಮನಸ್ಸಿನಿಂದ ಪರೀಕ್ಷೆ ಎದುರಿಸುವುದನ್ನು ನಿಶ್ಚಯ ಮಾಡಿಕೊಂಡರೆ ಅರ್ಧ ಯಶಸ್ವಿಯಾದಂತೆ” ಎಂದು ಹೇಳಿದರು.

“ನಾವು ಚಳಿಯೊಂದಿಗೆ ಜೀವನ ಸಾಗಿಸುವ ಮನಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ, ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಾವು ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಮನಸ್ಸನ್ನೂ ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ ಮಾಡಿಕೊಳ್ಳಬೇಕು. ಆಗ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.

ಇದನ್ನೂ ಓದಿ: Narendra Modi : ಕಾಲೇಜು ಹುಡ್ಗರೊಂದಿಗೆ ಮೆಟ್ರೋದಲ್ಲಿ ಹರಟುತ್ತಾ ಹೋದ ಪ್ರಧಾನಿ ಮೋದಿ, ಏನೇನು ಕೇಳಿದ್ರು?

“ಇಂದು ಕೆಲವೇ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡೆ, ಇಷ್ಟೇ ಅಧ್ಯಾಯ ಮನನ ಮಾಡಿಕೊಂಡೆ ಎಂದು ಬೇಸರ ಮಾಡಿಕೊಳ್ಳುವ ಬದಲು, ನಾಳೆ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರ ಕೊಂಡುಕೊಳ್ಳೋಣ ಎಂದು ಮುಂದಡಿ ಇಡಿ. ಇನ್ನು ಬೆಳಗ್ಗೆ ಎದ್ದರೆ ತಂದೆ-ತಾಯಿ, ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ, ಅಕ್ಕ ಸೇರಿ ಕುಟುಂಬಸ್ಥರು ಇಲ್ಲದ ಒತ್ತಡ ಹೇರುತ್ತಾರೆ. ಶಾಲೆಗೆ ಹೋದರೆ, ಶಿಕ್ಷಕರು ಭೀತಿ ಹುಟ್ಟಿಸುತ್ತಾರೆ. ಇಂತಹ ವಾತಾವರಣದಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರಿದಂತಾಗುತ್ತದೆ. ಹಾಗಾಗಿ, ಮನೆ ಹಾಗೂ ಶಾಲೆಯಲ್ಲೂ ಸಕಾರಾತ್ಮಕ ವಾತಾವರಣ ಇರಬೇಕಾಗುತ್ತದೆ” ಎಂದರು.

ಸ್ಪರ್ಧೆ ಕುರಿತ ಪ್ರಶ್ನೆಗೆ ಮೋದಿ ಹೇಳಿದ್ದೇನು?

ಅಂಕ ಸಾಧನೆ ಕುರಿತು ಸ್ಪರ್ಧೆ ಏರ್ಪಟ್ಟಿದೆ. ಈ ಒತ್ತಡದಿಂದ ಹೇಗೆ ಹೊರಬರಬೇಕು ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಮೋದಿ ಉತ್ತರಿಸಿದರು. “ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಇರಲೇಬೇಕು. ಆದರೆ, ಅದು ಆರೋಗ್ಯಕರ ಸ್ಪರ್ಧೆ ಇರಬೇಕು. ಭಾರತದಲ್ಲಿ ಪ್ರತಿಭೆಗಳಿಗೆ ಏನೂ ಕಡಿಮೆ ಇಲ್ಲ. ಆದರೆ, ಪ್ರತಿಭಾವಂತ ವಿದ್ಯಾರ್ಥಿಗಳು ಬೇರೆಯವರ ಜತೆ ಸ್ಪರ್ಧಿಸದೆ, ತಮ್ಮ ಜತೆಗೇ ಸ್ಪರ್ಧಿಸಬೇಕು. ಆರೋಗ್ಯಕರ ಸ್ಪರ್ಧೆಯಿಂದ ಮಾತ್ರ ಏಳಿಗೆ ಹೊಂದಲು, ಸಾಧಿಸಲು ಸಾಧ್ಯವಾಗುತ್ತದೆ. ಪೋಷಕರು ಕೂಡ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡದೆ, ಮಕ್ಕಳ ಮೇಲೆ ಒತ್ತಡ ಹೇರಬಾರದು” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version