ನವದೆಹಲಿ: ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಾಸ್ತವದಲ್ಲಿ ಆತಂಕಕಾರಿ ಪರಿಸ್ಥಿತಿಗಳಿವೆ. ಟಿ ಎನ್ ಶೇಷನ್ (TN Seshan) ರೀತಿಯ ನಡವಳಿಕೆ ಹೊಂದಿರುವಂಥ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇಮಕದಲ್ಲಿ ಸುಧಾರಣೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸುತ್ತಿರವ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು, ಸಂವಿಧಾನವು ಮುಖ್ಯ ಚುನಾವಣಾ ಆಯುಕ್ತ ಹಾಗೂ ಇಬ್ಬರು ಆಯುಕ್ತರೆಂಬ ದುರ್ಬಲ ಭುಜಗಳ ಮೇಲೆ ಅಗಾಧ ಅಧಿಕಾರವನ್ನು ಹೊರಿಸಿದೆ. ಹಾಗಾಗಿ, ಚುನಾವಣಾ ಮುಖ್ಯ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನೂ ಸೇರಿಸುವ ಮೂಲಕ, ತಟಸ್ಥತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದೆ.
ಚುನಾವಣಾ ಮುಖ್ಯ ಆಯುಕ್ತರ ನೇಮಕಾತಿಯ ಪಾರದರ್ಶಕವಾಗಿರಬೇಕು ಮತ್ತು ಈ ವ್ಯವ್ಯಸ್ಥೆಯಲ್ಲಿ ಸುಧಾರಣೆಯನ್ನು ತರಬೇಕು ಎಂಬ ಅರ್ಜಿಗಳ ವಿಚಾರಣೆಯನ್ನು ಜಸ್ಟೀಸ್ ಕೆ ಎಂ ಜೋಸೆಫ್, ಜಸ್ಟೀಸ್ ಅಜಯ್ ರಸ್ಟೋಗಿ, ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಹೃಷಿಕೇಶ್ ರಾಯ್, ಜಸ್ಟೀಸ್ ಸಿ.ಟಿ. ರವಿಕುಮಾರ್ ಅವರಿದ್ದ ಪೀಠವು ನಡೆಸುತ್ತಿದೆ.
ಸಾಕಷ್ಟು ಸಿಇಸಿಗಳು ಬಂದು ಹೋಗಿದ್ದಾರೆ. ಆದರೆ, ಟಿ.ಎನ್. ಶೇಷನ್ ಅವರಂಥವರು ಮಾತ್ರ ಒಬ್ಬರೇ. ಅವರನ್ನು ನೀವು ಧೈರ್ಯುಗುಂದಿಸಲು ಸಾಧ್ಯವಿರಲಿಲ್ಲ. ಮೂವರ(ಸಿಇಸಿ) ದುರ್ಬಲ ಭುಜಗಳ ಮೇಲೆ ಅಧಿಕಾರದ ಭಾರವನ್ನು ಹಾಕಲಾಗಿದೆ. ಸಿಇಸಿಯಾಗಿ ಅತ್ಯುತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ. ಆದರೆ, ಪ್ರಶ್ನೆ ಇರುವುದು ಅತ್ಯುತ್ತಮ ಆಯ್ಕೆಯನ್ನು ಹೇಗೆ ಮಾಡುವುದು. ಅವರನ್ನು ಹುಡಕುವುದು ಮತ್ತು ನೇಮಕ ಮಾಡುವುದು ಹೇಗೆ ಎಂದು ಪೀಠ ಕೇಳಿತು. ಇದಕ್ಕೆ ಸರ್ಕಾರದ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು, ಅತ್ಯುತ್ತಮ ನಡವಳಿಕೆಯ ವ್ಯಕ್ತಿಯ ಆಯ್ಕೆ ಸ್ಪರ್ಧಾತ್ಮಕತೆಯ ಹೊರತಾಗಿಯೂ ಅತ್ಯುತ್ತಮ ಆಯ್ಕೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.
ಇದನ್ನೂ ಓದಿ | ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ; ಮೇ 15ರಂದು ಅಧಿಕಾರ ಸ್ವೀಕಾರ