Site icon Vistara News

Tunnel Collapse: ಸುರಂಗದಿಂದ 41 ಜನರನ್ನು ಹೊರಗೆ ಹೇಗೆ ತರುತ್ತಾರೆ? ಇಲ್ಲಿದೆ ಪ್ರಾತ್ಯಕ್ಷಿಕೆ ವಿಡಿಯೊ

Uttarkashi Tunnel Collapse

How Trapped Workers Will Be Pulled Out On Stretchers From Tunnel?

ಡೆಹ್ರಾಡೂನ್:‌ ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ (Uttarkashi Tunnel Collapse) ಕೈಗೊಂಡಿರುವ ಕಾರ್ಯಾಚರಣೆಯು 13ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ (ನವೆಂಬರ್‌ 24) ತಡರಾತ್ರಿ ಡ್ರಿಲ್ಲಿಂಗ್‌ ಯಂತ್ರ ಕೈಕೊಟ್ಟ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದರ ಬೆನ್ನಲ್ಲೇ, ಸುರಂಗದಲ್ಲಿ ದೊಡ್ಡದೊಂದು ಪೈಪ್‌ ಅಳವಡಿಸಿ, ಚಕ್ರ ಇರುವ ಸ್ಟ್ರೆಚರ್‌ಗಳ (Stretchers) ಮೂಲಕ ಕಾರ್ಮಿಕರನ್ನು ಹೊರಗೆ ಕರೆತರಲು ಪ್ಲಾನ್‌ ರೂಪಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯು ಇದರ ಕುರಿತು ಪ್ರಾತ್ಯಕ್ಷಿಕೆಯನ್ನೂ ಕೈಗೊಂಡಿದ್ದಾರೆ. ಅದರ ವಿಡಿಯೊವನ್ನೂ ಬಿಡುಗಡೆ ಮಾಡಿದ್ದಾರೆ.

ಸುರಂಗದಲ್ಲಿ ಕಾರ್ಮಿಕರು ಇರುವ ಜಾಗಕ್ಕೆ ದೊಡ್ಡದೊಂದು ಪೈಪ್‌ ಅಳವಡಿಸಲಾಗುತ್ತದೆ. ಸ್ಟ್ರೆಚರ್‌ಗಳ ಮೇಲೆ ಕಾರ್ಮಿಕರನ್ನು ಮಲಗಿಸಿ, ಅವರನ್ನು ಹಗ್ಗದಿಂದ ಎಳೆಯಲಾಗುತ್ತಿದೆ. ಕಾರ್ಮಿಕರ ದೇಹದ ಭಾಗಗಳಿಗೆ ಯಾವುದೇ ಹಾನಿಯಾಗಬಾರದು, ಅವರು ಸುರಕ್ಷಿತವಾಗಿ ಹೊರಗೆ ಬರಬೇಕು ಎಂಬ ಕಾರಣದಿಂದಾಗಿ ಸ್ಟ್ರೆಚರ್‌ಗಳ ಮೂಲಕವೇ ಕರೆತರಲು ತೀರ್ಮಾನಿಸಲಾಗಿದೆ. ಪ್ರಾತ್ಯಕ್ಷಿತೆಯೂ ಯಶಸ್ವಿಯಾದ ಕಾರಣ ಸುಲಭವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಬಹುದು ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಕಿ ಉಳಿದಿರುವ ಸುರಂಗ ಕೊರೆದ ಬಳಿಕವೇ ಪೈಪ್‌ ಅಳವಡಿಸಲಾಗುತ್ತದೆ. ಇದಕ್ಕಾಗಿ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಾತ್ಯಕ್ಷಿಕೆಯ ವಿಡಿಯೊ

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿಲ್ಲ.

ಇದನ್ನೂ ಓದಿ: Uttarkashi Tunnel collapse: ಕುಸಿದ ಸುರಂಗದೊಳಗೆ ಸಿಲುಕಿರುವ ಮೂವರು ಸೋದರರಿಗೆ ಹೊರಗೆ ನಡೆದ ದುರಂತದ ಅರಿವೇ ಇಲ್ಲ!

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿದೆ. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version