ಲಖನೌ: ಭಾರತ ಸೇರಿ ಜಗತ್ತಿನಾದ್ಯಂತ ವಿಜ್ಞಾನ ಹಾಗೂ ತಂತ್ರಜ್ಞಾನವು ಹತ್ತಾರು ಅಸಾಧ್ಯಗಳನ್ನು ಸಾಧಿಸಿ ತೊರುವಂತೆ ಮಾಡಿದೆ. ಹೀಗೆ ಅಸಾಧ್ಯವನ್ನೂ ಸಾಧಿಸುವ ಹಾಗೆ ಮಾಡಿದ ಸಂಶೋಧನೆಯಲ್ಲಿ ಬಾಡಿಗೆ ತಾಯ್ತನವೂ ಒಂದು. ಮಕ್ಕಳಾಗದ ದಂಪತಿಗಾಗಿ ಬೇರೊಬ್ಬ ಮಹಿಳೆಯು ಗರ್ಭ ಧರಿಸಿ, ಮಗುವನ್ನು ಹೆತ್ತುಕೊಡುವ ಪದ್ಧತಿಯನ್ನು ಹೆಚ್ಚಿನ ಜನ ಅನುಸರಿಸುತ್ತಿದ್ದಾರೆ. ಈಗ ಇಂತಹ ವೈದ್ಯಕೀಯ ತಂತ್ರಜ್ಞಾನವನ್ನು ಗೋವುಗಳಿಗೂ ಅನ್ವಯಿಸಲಾಗುತ್ತಿದ್ದು, (Cow Surrogacy) ಇದರಿಂದ ಹಸುಗಳು ಹೆಚ್ಚಿನ ಪ್ರಮಾಣದ ಹಾಲು ಕೊಡುತ್ತವೆ ಎಂಬುದು ಸಾಬೀತಾಗಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ವಿಜ್ಞಾನಿಗಳು ಗೋವುಗಳಲ್ಲೂ ಬಾಡಿಗೆ ತಾಯ್ತನದ ಪ್ರಯೋಗ ಮಾಡಿ, ಅದರಲ್ಲಿ ಯಶಸ್ವಿಯಾಗಿದ್ದಾರೆ. ಗೋವುಗಳ ಬಾಡಿಗೆ ತಾಯ್ತನದ ಪದ್ಧತಿಯಿಂದ 26 ಕರುಗಳ ಜನನವಾಗಿದ್ದು, ಈ ಕರುಗಳು ಭವಿಷ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡಲಿವೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿ, ಇದು ಹಾಲು ಉತ್ಪಾದನೆಯಲ್ಲಿ ಮಹತ್ವದ ಪ್ರಯೋಗ ಎಂದೇ ವಿಶ್ಲೇಷಿಸಲಾಗುತ್ತಿದೆ.
ಏನಿದು ಹಸುಗಳ ಬಾಡಿಗೆ ತಾಯ್ತನ?
“ಉತ್ತಮ ತಳಿಯ ಹೋರಿಯಿಂದ ವೀರ್ಯ ಪಡೆದು, ಹೆಚ್ಚು ಹಾಲು ಕೊಡುವ ಹಸುವಿನ ಅಂಡಾಣು ಪಡೆದು ಭ್ರೂಣವನ್ನು ಸೃಷ್ಟಿಸಲಾಗುತ್ತದೆ. ಆ ಭ್ರೂಣವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುವ ಹಸುವಿಗೆ ಕಸಿ ಮಾಡಲಾಗುತ್ತದೆ. ಆ ಹಸು ಹಾಕಿದ ಕರು ಮುಂದೆ ಹೆಚ್ಚಿನ ಹಾಲು ಕೊಡುತ್ತದೆ. ಇದು ಹೆಚ್ಚು ಹಾಲು ಕೊಡುವ ಹಸುಗಳ ತಳಿಯ ವೃದ್ಧಿಗೆ ಕಾರಣವಾಗಲಿದೆ. ಕರು ಹಾಕಿದ ಹಸು ಕೂಡ ಹೆಚ್ಚು ಹಾಲು ಕೊಡಲಿದೆ” ಎಂದು ಐವಿಆರ್‌ಐ ವಿಜ್ಞಾನಿ ಡಾ.ಬ್ರಿಜೇಶ್ ಕುಮಾರ್ ಹೇಳಿದ್ದಾರೆ.
ರೈತರಿಗೆ ಹೆಚ್ಚಿನ ಅನುಕೂಲ
“ಕೃಷಿಯ ಜತೆಗೆ ಹಸು ಸಾಕಣೆಯು ಭಾರತದ ರೈತರ ಉಪ ಕಸುಬಾಗಿದೆ. ಹಾಗಾಗಿ, ಹಸುಗಳಲ್ಲೂ ಬಾಡಿಗೆ ತಾಯ್ತನ ಪದ್ಧತಿ ಅಳವಡಿಸಿಕೊಂಡರೆ, ಇದರಿಂದ ರೈತರಿಗೆ ಅನುಕೂಲವಾಗಲಿದೆ. ರೈತರು ಹಸು ಸಾಕಣೆ ಮೂಲಕ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ಹಾಗೆಯೇ, ದೇಶದ ಹಾಲು ಉತ್ಪಾದನೆಯೂ ಗಣನೀಯವಾಗಿ ಹೆಚ್ಚಾಗಲಿದೆ.” ಎಂದು ಬ್ರಿಜೇಶ್ ಕುಮಾರ್ ಹೇಳಿದರು.
ಇದನ್ನೂ ಓದಿ: Viral Video: ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ರೈನಾ-ಪಠಾಣ್ ಜೋಡಿ; ವಿಡಿಯೊ ವೈರಲ್
2018ರಿಂದಲೇ ಗೋವುಗಳಲ್ಲೂ ಬಾಡಿಗೆ ತಾಯ್ತನದ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಇದುವರೆಗೆ 26 ಕರುಗಳ ಜನನವಾಗಿದೆ ಎಂದು ಐವಿಆರ್‌ಐ ಮಾಹಿತಿ ನೀಡಿದೆ. ಬಾಡಿಗೆ ತಾಯ್ತನದ ಮೂಲಕ ಒಂದೇ ಹಸುವಿನಿಂದ 10-12 ಕರುಗಳನ್ನು ಪಡೆಯಬಹುದಾಗಿದೆ. ಇದರಿಂದಾಗಿ ಹೆಚ್ಚಿನ ಅನುಕೂಲಗಳಾಗಲಿವೆ ಎಂದು ತಿಳಿದುಬಂದಿದೆ. ಆದಾಗ್ಯೂ, ದೇಶಾದ್ಯಂತ ಈ ಪದ್ಧತಿ ಜಾರಿ ಕುರಿತು ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.