ನವ ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ 13ಕ್ಕೂ ಹೆಚ್ಚು ರಾಜ್ಯಗಳ ಮುಖಂಡ ಮನೆ, ಕಚೇರಿಗಳ ಮೇಲೆ ಇಂದು ರಾಷ್ಟ್ರೀಯ ತನಿಖಾದಳ ಮತ್ತು ಜಾರಿ ನಿರ್ದೇಶನಾಲಯ (ಎನ್ಐಎ ಮತ್ತು ಇ ಡಿ)ಗಳು ದಾಳಿ ಮಾಡಿವೆ. ಪಿಎಫ್ಐ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತದೆ, ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿದೆ ಎಂಬ ಆರೋಪದಡಿ ಈ ಶೋಧ ಕಾರ್ಯ ನಡೆದಿದೆ. ನೂರಾರು ಮುಖಂಡರನ್ನೂ ಬಂಧಿಸಿ, ವಿಚಾರಣೆಗೆ ಕರೆದುಕೊಂಡು ಹೋಗಲಾಗಿದೆ. ಇವರನ್ನೆಲ್ಲ ಈಗಾಗಲೇ ದೆಹಲಿಯ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಸದ್ಯ ಎನ್ಐಎ-ಇಡಿ ರೇಡ್ ಕಾರ್ಯಾಚರಣೆ ಮುಕ್ತಾಯವಾಗಿದೆ. ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು, ವಸ್ತುಗಳನ್ನು ತನಿಖಾ ದಳಗಳು ವಶಪಡಿಸಿಕೊಂಡಿವೆ. ಎನ್ಐಎ ರೇಡ್ ವಿರೋಧಿಸಿ ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತಾದರೂ ಹಿಂಸಾಚಾರ, ದೊಡ್ಡಮಟ್ಟದ ಸಂಘರ್ಷಗಳು ಉಂಟಾಗಲಿಲ್ಲ. ಒಟ್ಟಾರೆ 13ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆಸಿದ ರೇಡ್ ಯಶಸ್ವಿಯಾಗಿದೆ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪಿಎಫ್ಐ ಪ್ರತಿಭಟನೆ
ಕಳೆದ ನಾಲ್ಕೈದು ದಿನಗಳಿಂದಲೂ ಎನ್ಐಎ ಪಿಎಫ್ಐ ಬೆನ್ನುಬಿದ್ದಿದೆ. ನಾಲ್ಕು ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ಪಿಎಫ್ಐಗೆ ಸೇರಿದ ಸ್ಥಳಗಳ ಮೇಲೆ ತನಿಖಾ ತಂಡಗಳು ದಾಳಿ ನಡೆಸಿದ್ದವು. ಇಂದು ಏಕಕಾಲದಲ್ಲಿ, ಬಹುದೊಡ್ಡಮಟ್ಟದಲ್ಲಿ ರೇಡ್ ಮಾಡಲಾಗಿದೆ. ತಮಿಳುನಾಡಿನ ಚೆನ್ನೈ, ಕರ್ನಾಟಕದ ಮಂಗಳೂರು, ಕೇರಳದೆಲ್ಲೆಡೆ ಪಿಎಫ್ಐ ಕಾರ್ಯಕರ್ತರು ಧರಣಿ ರೂಪದ ಪ್ರತಿಭಟನೆ ನಡೆಸಿದರು. ಕೇರಳದಲ್ಲಿ ಶುಕ್ರವಾರವೂ ಪಿಎಫ್ಐ ಸಂಘಟನೆಯ ಪ್ರತಿಭಟನೆ ಮುಂದುವರಿಯಲಿದೆ. ಸೆ.23ರ ಮುಂಜಾನೆಯಿಂದ ಸಂಜೆಯವರೆಗೆ ಕೇರಳ ಬಂದ್ಗೆ ಪಿಎಫ್ಐ ಕರೆ ಕೊಟ್ಟಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಸಂಘಟನೆ ‘ಆರ್ಎಸ್ಎಸ್ ಸಂಘಟನೆ ನಿಯಂತ್ರಿತ ಸರ್ಕಾರ ತನಿಖಾ ದಳಗಳ ಮೂಲಕ ನಮ್ಮ ಧ್ವನಿ ಅಡಗಿಸಲು ಯತ್ನಿಸುತ್ತಿದೆ. ಇಂಥ ಉಗ್ರವಾದಿ ಸರ್ಕಾರ, ಅದು ಮಾಡಿಸುತ್ತಿರುವ ದಾಳಿಗಳ ವಿರುದ್ಧ ನಾವು ಸೆ.23ರ ಮುಂಜಾನೆ 6ರಿಂದ ಸಂಜೆ 6ರವರೆಗೆ ಕೇರಳ ಬಂದ್ ಆಚರಿಸುತ್ತೇವೆ’ ಎಂದು ಹೇಳಿದೆ.
ಇದನ್ನೂ ಓದಿ: NIA Raid | ಪಿಎಫ್ಐ ಮುಖಂಡರ ಮನೆ, ಕಚೇರಿ ಮೇಲೆ ರೇಡ್ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ