ನವದೆಹಲಿ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ದುರಂತದ (Odisha Train Accident) ಕುರಿತು ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ (CRS) ನಡೆಸಿದ್ದು, ಮಾನವ ಪ್ರಮಾದವೇ ಅಪಘಾತ ಸಂಭವಿಸಲು ಕಾರಣ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ರೈಲು ಅಪಘಾತದ ಹಿಂದೆ ದೊಡ್ಡ ಸಂಚು ಇದೆ ಎಂಬ ಆರೋಪಗಳನ್ನು ತನಿಖಾ ವರದಿಯು ತಳ್ಳಿ ಹಾಕಿದೆ.
ಸುಮಾರು 293 ಜನರನ್ನು ಬಲಿ ಪಡೆದ, ಸಾವಿರಕ್ಕೂ ಅಧಿಕ ಜನ ಗಾಯದಿಂದ ಬಳಲುವಂತೆ ಮಾಡಿದ ದುರಂತದ ಕುರಿತು ಸಿಆರ್‌ಎಸ್ ಹಾಗೂ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಅದರಂತೆ, ಘಟನೆ ನಡೆದ ಒಂದು ತಿಂಗಳಲ್ಲಿ ಸಿಆರ್‌ಎಸ್ ತನಿಖಾ ವರದಿ ಲಭ್ಯವಾಗಿದೆ. “ರೈಲು ದುರಂತಕ್ಕೆ ಮಾನವ ಪ್ರಮಾದವೇ ಕಾರಣವಾಗಿದೆ. ಸಿಗ್ನಲಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿರುವ ಕೆಲಸಗಾರರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಸಂಚು ಇಲ್ಲ ಎಂದ ವರದಿ
ಒಡಿಶಾ ರೈಲು ದುರಂತ ಸಂಭವಿಸಿದ ಬಳಿಕ, ಅಪಘಾತದ ಹಿಂದೆ ಸಂಚು ರೂಪಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ರೈಲ್ವೆ ಸುರಕ್ಷತಾ ಆಯುಕ್ತರ ವರದಿ ಪ್ರಕಾರ, ಅಪಘಾತದ ಹಿಂದೆ ಯಾವುದೇ ಸಂಚು, ಕುತಂತ್ರ ಇಲ್ಲ ಎಂದು ತಿಳಿಸಿದೆ. “ಅಪಘಾತಕ್ಕೆ ತಂತ್ರ, ತಾಂತ್ರಿಕ ದೋಷ ಅಥವಾ ತಂತ್ರಜ್ಞಾನದ ದುರ್ಬಳಕೆಯು ಕಾರಣವಲ್ಲ. ಸಂಪೂರ್ಣವಾಗಿ ಮಾನವ ಪ್ರಮಾದವೇ ಇದಕ್ಕೆ ಕಾರಣ” ಎಂದು ತಿಳಿಸಿದೆ.
ಇದನ್ನೂ ಓದಿ: Odisha Train Accident: ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿ ‘ಪ್ರೇಮ ಕವನಗಳು’ ಅನಾಥ!
ಸಿಗ್ನಲಿಂಗ್ ವಿಭಾಗದ ಸಿಬ್ಬಂದಿಯು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ. ನಿರ್ಲಕ್ಷ್ಯ ತೋರಿದ ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ರೈಲ್ವೆ ಇಲಾಖೆ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಜೂನ್ 2ರಂದು ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್ ರೈಲು ಹಾಗೂ ಯಶವಂತಪುರ ಎಕ್ಸ್‌ರೈಲುಗಳು ಡಿಕ್ಕಿಯಾದ ಕಾರಣ 293 ಜನ ಮೃತಪಟ್ಟಿದ್ದಾರೆ. ಇದು ದೇಶದಲ್ಲಿ ಕಳೆದ ಮೂರು ವರ್ಷದಲ್ಲಿಯೇ ಸಂಭವಿಸಿದ ಭೀಕರ ರೈಲು ಅಪಘಾತ ಎಂದು ಹೇಳಲಾಗುತ್ತಿದೆ.