ಹೈದರಾಬಾದ್: ಈ ನಗರದ ಹೆಸರೇನು? Hyderabad ಅಥವಾ ಭಾಗ್ಯನಗರ? ಸದ್ಯ ಅದು ಹೈದರಾಬಾದ್. ಒಂದು ವೇಳೆ ೨೦೨೩ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಸರು ಬದಲಾವಣೆಯ ʼಭಾಗ್ಯʼ ಬರಬಹುದು.
ಹೀಗೊಂದು ಪರೋಕ್ಷ ಸಂದೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೈದರಾಬಾದ್ ನಗರಕ್ಕೆ ಭೇಟಿಯ ವೇಳೆ ಕೊಟ್ಟಿದ್ದಾರೆ. ಅವರ ಹೇಳಿಕೆಗೆ ಸಾಕಷ್ಟು ಬೆಂಬಲ ಹಾಗೂ ಪ್ರತಿರೋಧ ವ್ಯಕ್ತವಾಗಿದೆ.
ಭಾರತೀಯತೆಯನ್ನು ಉಳಿಸಿಕೊಳ್ಳಬೇಕು ಎಂಬುದು ನಮ್ಮ ಧ್ಯೇಯ ಎಂದು ಹೇಳುವ ಬಿಜೆಪಿ ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಮ್ ದೊರೆಗಳ ಹೆಸರಿನೊಂದಿಗೆ ತಳುಕು ಹಾಕುವ ನಗರಗಳ ಹೆಸರನ್ನು ಒಂದೊಂದಾಗಿ ಬದಲಾಯಿಸುತ್ತಿದೆ. ಹೈದರಾಬಾದ್ ನಗರದ ಹೆಸರು ನಿಜಾಮರ ಆಳ್ವಿಕೆಯ ಕಾಲದಲ್ಲಿ ಬಂದಿತ್ತಾದರೂ, ಭಾರತದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ಈ ನಗರವನ್ನು ಭಾಗ್ಯನಗರ ಎಂಬ ಹೆಸರಿನಿಂದ ಕರೆದಿದ್ದರು. ಅದೇ ನಗರದಲ್ಲಿ ಅವರು ʼಏಕ ಭಾರತʼ ಎಂಬ ಪರಿಕಲ್ಪನೆಯನ್ನು ಬಿತ್ತಿದ್ದರು. ಹೀಗಾಗಿ ಪಟೇಲ್ ಅವರ ಕಲ್ಪನೆಯನ್ನು ಜಾರಿಗೆ ತರಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಮೋದಿ ಏನೆಂದರು?
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಭಾಗ್ಯನಗರದಲ್ಲಿ ನಡೆದಿದೆ. ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ಅವರು ಈ ನಗರವನ್ನು ಏಕೀಕರಣದ ಸಂದರ್ಭದಲ್ಲಿ ಆ ರೀತಿ ಕರೆದಿದ್ದರು. ಅದನ್ನು ನಿಜವಾಗಿಸಲು ಬಿಜೆಪಿ ಕಾರ್ಯಪ್ರವೃತ್ತವಾಗಬೇಕಾಗಿದೆ,ʼʼ ಎಂದು ಹೇಳಿದ್ದಾರೆ.
ಮೋದಿಯವರ ಹೇಳಿಕೆಯಿಂದ ಹೆಸರು ಬದಲಾವಣೆಯ ವಿಷಯಕ್ಕೆ ಪುಷ್ಟಿ ದೊರಕಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ “ತೆಲಂಗಾಣದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಗಳು ಕ್ಯಾಬಿನೆಟ್ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ,ʼʼ ಎಂದು ನುಡಿದಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಅವರ ಪುತ್ರ ಕೆಟಿಆರ್ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. “ಗುಜರಾತ್‌ನ ಅಹಮದಾಬಾದ್ ಅನ್ನು ಯಾಕೆ ಅದಾನಿಬಾದ್ ಅಂಥ ಬದಲಿಸಬಾರದು,ʼʼ ಎಂದು ಪ್ರಶ್ನಿಸಿದ್ದಾರೆ.
ಯೋಗಿಯೂ ಹೇಳಿದ್ದರು
೨೦೨೦ರಲ್ಲಿ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಅವರು ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಮಾಡಿ ಎಂದು ಕರೆ ಕೊಟ್ಟಿದ್ದರು.
ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಹಲವು ನಗರಗಳ ಹೆಸರನ್ನು ಬದಲಿಸಿದ್ದಾರೆ. ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು, ಮುಸ್ತಫಾಬಾದ್‌ಗೆ ರಾಮ್‌ಪುರ, ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯಾ ಜಿಲ್ಲೆ ಎಂದು ಬದಲಿಸುವುದು ಸೇರಿದಂತೆ ಹಲವು ನಗರಗಳಿಗೆ ಮರು ನಾಮಕರಣ ಮಾಡಿದ್ದಾರೆ.
ಬದಲಿಸುವ ಅಧಿಕಾರ ಯಾರಿಗಿದೆ?
ನಗರವೊಂದರ ಹೆಸರು ಬದಲಾಯಿಸಲು ಸಂವಿಧಾನಾತ್ಮಕವಾಗಿ ಯಾವುದೇ ಅಧಿಕಾರ ಇಲ್ಲ. ಹೀಗಾಗಿ ಕೇಂದ್ರ ಸರಕಾರದ ನೇರ ವ್ಯಾಪ್ತಿಗೆ ಇದು ಬರುವುದಿಲ್ಲ. ಹೀಗಾಗಿ ಪ್ರಕ್ರಿಯೆ ರಾಜ್ಯ ಸರಕಾರದಿಂದ ಆರಂಭವಾಗುತ್ತದೆ. ವಿಧಾನ ಸಭೆಯ ಒಪ್ಪಿಗೆ ಬಳಿಕ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾಪ ಕಳುಹಿಸಬೇಕಾಗುತ್ತದೆ. ಗೃಹ ಇಲಾಖೆಯು ಸಂಬಂಧಪಟ್ಟ ಎಲ್ಲ ಇಲಾಖೆಗಳ ನಿರಾಕ್ಷೇಪಣೆ ಪಡೆದು ಬಳಿಕ ಆದೇಶ ಹೊರಡಿಸಬಹುದು. ಹೀಗಾಗಿ ತೆಲಂಗಾಣದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದರೆ ಮಾತ್ರ ಹೆಸರು ಬದಲಾವಣೆ ʼಭಾಗ್ಯʼ ಸಿಗಲಿದೆ.
ಇದನ್ನೂ ಓದಿ: Modi Rally : ತೆಲಂಗಾಣ ಮಂದಿಗೆ ಡಬಲ್ ಎಂಜಿನ್ ಅಭಿವೃದ್ಧಿ ಹಂಬಲ