2019ರ ನವೆಂಬರ್‌ನಲ್ಲಿ ಹೈದರಾಬಾದ್ ಸಮೀಪದ ಶಂಶಾಬಾದ್‌ನಲ್ಲಿ 26 ವರ್ಷದ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಗೆ ಬೆಂಕಿ ಹಚ್ಚಿ ಕೊಲ್ಲಲಾಗಿತ್ತು. ಈ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಹಾಗೇ, ಘಟನೆ ನಡೆದ ಒಂದು ತಿಂಗಳೊಳಗೆ ನಾಲ್ವರೂ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದಿದ್ದರು. ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾಗ ಅವರು ನಮ್ಮ ಮೇಲೆ ಹಲ್ಲೆಗೆ ಮುಂದಾದರು. ಹಾಗಾಗಿ ಸ್ವಯಂ ರಕ್ಷಣೆಗೆ ಎನ್‌ಕೌಂಟರ್ ಮಾಡಿದ್ದೇವೆ ಎಂಬ ಸಮರ್ಥನೆಯನ್ನೂ ಪೊಲೀಸರು ನೀಡಿದ್ದರು. ಅಂದಹಾಗೇ, ಈ ಎನ್‌ಕೌಂಟರ್ ಕರ್ನಾಟಕ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿಯೇ ನಡೆದಿತ್ತು. ಎನ್‌ಕೌಂಟರ್ ತನಿಖೆಗಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗವನ್ನು ರಚಿಸಿತ್ತು. ಈ ಆಯೋಗ ಈಗೊಂದು ಮಹತ್ವದ ಸಂಗತಿಯನ್ನು ಹೇಳಿದೆ. 2019ರಲ್ಲಿ ನಡೆದಿದ್ದು ಫೇಕ್ ಎನ್‌ಕೌಂಟರ್. ಪೊಲೀಸರು ಉದ್ದೇಶಪೂರ್ವಕವಾಗಿಯೇ ಆರೋಪಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ : ಛೋಟಾ ಪಾಕಿಸ್ತಾನ್ ಎಂದ ಇಬ್ಬರ ಬಂಧನ: ಎನ್‌ಕೌಂಟರ್ ಮಾಡಿ ಬಿಸಾಕಿ ಎಂದ ಪ್ರಮೋದ್ ಮುತಾಲಿಕ್
ಈ ಆಯೋಗದಲ್ಲಿ ಸುಪ್ರೀಂಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಇದ್ದರು. ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಿದ ಅವರು, ಅಂದು ಪೊಲೀಸರ ಗುಂಡಿಗೆ ಮೃತಪಟ್ಟ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತರೇ ಆಗಿದ್ದಾರೆ. ʼಆರೋಪಿಗಳು ನಮ್ಮ ಬಳಿಯಿದ್ದ ಪಿಸ್ತೂಲ್ ಕಸಿದುಕೊಳ್ಳಲು ಮುಂದಾದರು ಮತ್ತು ನಮ್ಮ ಮೇಲೆ ಹಲ್ಲೆ ನಡೆಸಿ ಓಡಿಹೋಗಲು ಪ್ರಯತ್ನಿಸಿದರುʼ ಎಂದು ಪೊಲೀಸರು ಸಲ್ಲಿಸಿರುವ ವರದಿಯನ್ನು ನಂಬಲು ಸಾಧ್ಯವೇ ಇಲ್ಲ. ಅವರು ತಮ್ಮ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಒಂದೇ ಒಂದು ಸೂಕ್ತವಾದ ಪುರಾವೆ ಹೊಂದಿಲ್ಲ. ಪೊಲೀಸರು ಆರೋಪಿಗಳನ್ನು ಕೊಲ್ಲುವ ಉದ್ದೇಶ ಇಟ್ಟುಕೊಂಡೇ ಗುಂಡು ಹಾರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಅಂದಿನ ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.
2019ರ ನವೆಂಬರ್‌ನಲ್ಲಿ ಮಹಿಳಾ ಪಶು ವೈದ್ಯಾಧಿಕಾರಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಶಂಶಾಬಾದ್‌ನ ತೊಂಡುಪಲ್ಲಿ ಟೋಲ್ ಪ್ಲಾಜಾ ಬಳಿ ನಾಲ್ವರು ಅಪಹರಣ ಮಾಡಿ ಅತ್ಯಾಚಾರ ಮಾಡಿದ್ದರು. ನಂತರ ಅತ್ಯಂತ ಕ್ರೂರವಾಗಿ ಆಕೆಗೆ ಬೆಂಕಿ ಹಚ್ಚಿ ಕೊಂದು ಶವವನ್ನು ಚತನ್‌ಪಲ್ಲಿ ಬಳಿಯ ಶಡ್ನಗರದಲ್ಲಿ ಬಿಸಾಕಿಹೋಗಿದ್ದರು. ಆರೋಪಿಗಳಾದ ಮೊಹಮ್ಮದ್ ಆರಿಫ್, ಚಿಂತಾಕುಂಟಾ ಚೆನ್ನಕೇಶವಲು, ಜೋಲು ಶಿವಾ ಮತ್ತು ಜೊಲ್ಲು ನವೀನ್‌ನನ್ನು ಪೊಲೀಸರು ಅರೆಸ್ಟ್ ಮಾಡಿ, ಎನ್‌ಕೌಂಟರ್‌ನಲ್ಲಿ ಕೊಂದಿದ್ದರು. ರಾಷ್ಟ್ರವ್ಯಾಪಿ ಲಾಕ್‌ಡೌನ್ ಇದ್ದಿದ್ದರಿಂದ ಎನ್‌ಕೌಂಟರ್ ತನಿಖೆಯನ್ನು ಬೇಗ ಮುಗಿಸಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿರುವ ಸುಪ್ರೀಂಕೋರ್ಟ್ ರಚಿತ ಆಯೋಗ, ಈಗ ವರದಿ ನೀಡಿದೆ.
ಇದನ್ನೂ ಓದಿ: Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು