ನವ ದೆಹಲಿ: ಭಾರತವು ಮತ್ತೊಂದು ಸಾಧನೆಯನ್ನು ಮಾಡಲು ಹೊರಟಿದ್ದು, 2023ರ ಹೊತ್ತಿಗೆ ದೇಶದಲ್ಲಿ ಹೈಡ್ರೋಜನ್ ರೈಲು (Hydrogen Rail) ಓಡಲಿದೆ! ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವಿಷಯವನ್ನು ಖಚಿತಪಡಿಸಿದ್ದು, ಭಾರತವು ಹೈಡ್ರೋಜನ್ ರೈಲು ಅಭಿವೃದ್ಧಿಪಡಿಸಿದ್ದು, ಮುಂದಿನ ವರ್ಷದ ಹೊತ್ತಿಗೆ ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ. ಭುವನೇಶ್ವರದ ಎಸ್ಒಎ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ರೈಲ್ವೆ ಇಲಾಖೆಯು ಗುಡ್ಡುಗಾಡು ಪ್ರದೇಶಗಳಿಗೂ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಕೆಲಸ ಮಾಡುತ್ತಿದೆ. ಈ ಕಾರ್ಯವನ್ನು ಗತಿ ಶಕ್ತಿ ಟರ್ಮಿನಲ್ಸ್ ನೀತಿಯಡಿ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಕೆಲಸ ಜೋರಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತ ಸೆಮಿ ಹೈಸ್ಪೀಡ್ ರೈಲು. ಸದ್ಯದ ಮಟ್ಟಿಗೆ ಇದು ಭಾರತದ ಅತಿ ವೇಗದ ರೈಲು. ಭಾರತವು ಈ ರೈಲನ್ನು ಸ್ವದೇಶಿವಾಗಿಯೇ ನಿರ್ಮಿಸಿದೆ. ಈ ರೈಲು ಯಾವುದೇ ತೊಂದರೆ ಇಲ್ಲದೇ ಓಡುತ್ತಿದೆ. ಕಳೆದ ಎರಡು ವರ್ಷದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ಈ ರೈಲುಗಳನ್ನು ಐಸಿಎಫ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರವೇ ಸೇವೆಗೆ ದೊರೆಯಲಿವೆ ಎಂದೂ ಅವರು ಇದೇ ವೇಳೆ ತಿಳಿಸಿದರು.
ಇದೇ ವೇಳೆ ಅವರು, ರೈಲು ಮತ್ತು ಮಾರ್ಗ ನಿರ್ವಹಣೆಯ ಬಗ್ಗೆ ಮಾತನಾಡುತ್ತ, ನಮ್ಮ ಗುರಿಯು ಕೇವಲ ರೈಲು ನಿರ್ಮಾಣ ಮಾತ್ರವಲ್ಲ. ಬದಲಿಗೆ ಹೈಸ್ಪೀಡ್ ಅಥವಾ ಸೆಮಿ ಹೈಸ್ಪೀಡ್ ರೈಲುಗಳಿಗಾಗಿ ಮಾರ್ಗ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುವುದೂ ಆಗಿದೆ. ವಂದೇ ಭಾರತ್‌ನ ಪ್ರಾಯೋಗಿಕ ಚಾಲನೆ ನಡೆಸಿದ್ದೇವೆ. ರೈಲು 180 ಕಿ.ಮೀ ವೇಗದಲ್ಲಿ ಚಲಿಸಿದರೂ, ರೈಲಿನಲ್ಲಿ ನೀರಿನ ಲೋಟವು ಅಲ್ಲಾಡಿಲ್ಲ, ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ. ಅಷ್ಟರ ಮಟ್ಟಿಗೆ ಸ್ಥಿರತೆಯನ್ನು ಸಾಧಿಸಲಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ವಂದೇ ಭಾರತ್ ಸರಣಿ ಉತ್ಪಾದನೆ ನಡೆಯಲಿದೆ. ಸುಮಾರು 72 ರೈಲುಗಳು ಉತ್ಪಾದನೆಯಾಗಲಿವೆ ಎಂದು ರೈಲು ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದರು.
ಮೂರನೇ ವಂದೇ ಭಾರತ್ ರೈಲಿನ ಗರಿಷ್ಠ ಸ್ಪೀಡ್ ಪ್ರತಿ ಗಂಟೆಗೆ 180 ಕಿ.ಮೀ. ಇದೆ. ಈ ರೈಲು ಶೂನ್ಯದಿಂದ ನೂರು ಕಿ ಮೀ ವೇಗವನ್ನು ಕೇವಲ 52 ಸೆಕೆಂಡ್‌ಗಳಲ್ಲಿ ತಲುಪಬಲ್ಲದು. ಮೊದಲ ತಲೆಮಾರಿನ ವಂದೇ ಭಾರತ್ ರೈಲು 54.6 ಸೆಕೆಂಡ್‌ಗಳಲ್ಲಿ ಈ ವೇಗವನ್ನು ತಲುಪುತ್ತಿದ್ದವು. ಈ ರೈಲುಗಳ ಗರಿಷ್ಠ ವೇಗ ಗಂಟೆಗ 160 ಕಿ ಮೀ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Train Time | ಮೈಸೂರು-ಬೆಂಗಳೂರು ರೈಲುಗಳ ಸಂಚಾರ ಪುನರಾರಂಭ