ಚೆನ್ನೈ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯಶಿಕ್ಷಕಿ ಸ್ವಾತಂತ್ರ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸಲಾಗಲೀ, ಅದಕ್ಕೆ ಸೆಲ್ಯೂಟ್ ಮಾಡಲಾಗಲಿ ಒಪ್ಪಲೇ ಇಲ್ಲ. ಕೊನೆಗೂ ಸಹಾಯಕ ಶಿಕ್ಷಕಿಯೊಬ್ಬರು ಧ್ವಜಾರೋಹಣ ಮಾಡಿದ್ದಾರೆ ಹೊರತು, ಮುಖ್ಯ ಶಿಕ್ಷಕಿ ದೂರವೇ ಇದ್ದರು. ಆದರೆ ತಾನು ಯಾಕೆ ಧ್ವಜ ಹಾರಿಸಲಿಲ್ಲ ಎಂಬುದಕ್ಕೆ ಆ ಶಿಕ್ಷಕಿ ಕೊಟ್ಟ ಉತ್ತರವೀಗ ವಿವಾದ ಸೃಷ್ಟಿಸಿದೆ.
ಈ ಶಿಕ್ಷಕಿಯ ಹೆಸರು ತಮಿಳ್ ಸೆಲ್ವಿ ಎಂದಾಗಿದ್ದು, ಇದೇ ವರ್ಷ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಆಗಸ್ಟ್ 15ರಂದು ಅವರಿಗೆ ಒಂದು ಸನ್ಮಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಸನ್ಮಾನವನ್ನು ಸ್ವೀಕರಿಸಲು ಒಪ್ಪಿದ ಶಿಕ್ಷಕಿ ಧ್ವಜಾರೋಹಣ ಮತ್ತು ಧ್ವಜ ವಂದನೆಗೆ ಸುತಾರಾಂ ಒಪ್ಪಲಿಲ್ಲ. ತಮ್ಮ ಈ ನಡೆ ಬಗ್ಗೆ ಆಕ್ಷೇಪ, ವಿರೋಧ ವ್ಯಕ್ತವಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ, ಅವರೊಂದು ವಿಡಿಯೋ ಮಾಡಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ‘ನಾನು ಯಾಕೋಬಾ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವಳು. ದೇವರಿಗೆ ಬಿಟ್ಟು ಇನ್ಯಾರಿಗೂ ವಂದಿಸಬಾರದು ಎಂದು ನಮ್ಮ ಸಮುದಾಯದ ನಿಯಮ ಹೇಳುತ್ತದೆ. ನನಗೆ ರಾಷ್ಟ್ರಧ್ವಜದ ಬಗ್ಗೆ ಅಪಾರ ಗೌರವ ಇದೆ. ಅದಕ್ಕೆ ಅವಮಾನಿಸುವ ಉದ್ದೇಶವೂ ಖಂಡಿತ ಇಲ್ಲ. ಆದರೆ ನಾನು ನಮ್ಮ ಸಂಪ್ರದಾಯವನ್ನು ಮೀರಲಾರೆ. ಹಾಗಾಗಿಯೇ ಸಹಾಯಕ ಮುಖ್ಯ ಶಿಕ್ಷಕಿಗೇ ಧ್ವಜ ಹಾರಿಸಲು ಹೇಳಿದೆವು’ ಎಂದು ತಿಳಿಸಿದ್ದಾರೆ. ‘ಈ ವಿಡಿಯೋ ನೋಡಿದ ಅನೇಕರು ಶಿಕ್ಷಕಿಯ ಮಾತನ್ನು ಖಂಡಿಸಿದ್ದಾರೆ. ಕ್ರಿಶ್ಚಿಯನ್ ಅಂದ ಮಾತ್ರಕ್ಕೆ ರಾಷ್ಟ್ರಧ್ವಜ ಹಾರಿಸಬಾರದಾ?’ ಎಂದೂ ಪ್ರಶ್ನಿಸಿದ್ದಾರೆ.
ಈ ಶಿಕ್ಷಕಿ ಕಳೆದ ನಾಲ್ಕು ವರ್ಷಗಳಿಂದಲೂ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಪ್ರತಿವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕ್ಕೆಲ್ಲ ಅನಾರೋಗ್ಯ ಅಥವಾ ಇನ್ಯಾವುದೋ ನೆಪವೊಡ್ಡಿ ರಜಾ ತೆಗೆದುಕೊಳ್ಳುತ್ತಿದ್ದರು. ಈ ವರ್ಷ ಶಾಲೆಗೆ ಬಂದರೂ ರಾಷ್ಟ್ರಧ್ವಜ ಹಾರಿಸಲು ಒಪ್ಪಲಿಲ್ಲ ಎಂದು ಧರ್ಮಪುರಿ ಮುಖ್ಯ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ: Viral News | 7 ವರ್ಷದಲ್ಲಿ ಮೊದಲ ಸಲ ಕಚೇರಿಗೆ 20 ನಿಮಿಷ ತಡವಾಗಿ ಹೋದ ಉದ್ಯೋಗಿಗೆ ಇದೆಂಥಾ ಶಿಕ್ಷೆ?